ನಾಸಾ'ದ 'ಪಾರ್ಕರ್ ಸೋಲಾರ್ ಪ್ರೋಬ್' ನೌಕೆ ಉಡಾವಣೆ ಮುಂದೂಡಿಕೆ!
ಸೌರಮಂಡಲದ ಉಗಮಕ್ಕೆ ಕಾರಣವಾಗಿರುವ ಸೂರ್ಯ ಅಧ್ಯಯನಕ್ಕಾಗಿ ಸೂರ್ಯನ ಒಡಲು ಪ್ರವೇಶಿಸಬಲ್ಲ ನೌಕೆಯ ಉಡಾವಣೆ ಮುಂದೂಡಲ್ಪಟ್ಟಿದೆ. ಭಾನುವಾರ ಬೆಳಿಗ್ಗೆ ನೌಕೆಯ ಉಡಾವಣೆಯಾಗಲಿದೆ ಎಂದು ನಾಸ ಟ್ವೀಟ್ ಮಾಡಿದೆ.
ಕೇಪ್ ಕೆನವೆರಲ್‌ನಿಂದ ಅಮೆರಿಕ ಕಾಲಮಾನದ ಪ್ರಕಾರ ಶನಿವಾರ ಬೆಳಗ್ಗೆ 3.33ರ ನಂತರದ ಒಂದು ತಾಸಿನ ಅವಧಿಯೊಳಗೆ ಪಾರ್ಕರ್ ಸೋಲಾರ್ ಪ್ರೋಬ್ ಅನ್ನು ಹೊತ್ತ ಡೆಲ್ಟಾ-4 ಬೃಹತ್ ರಾಕೆಟ್ ನಭಕ್ಕೆ ಜಿಗಿಯಬೇಕಿತ್ತು. ಆದರೆ ಪೂರ್ವನಿಗದಿಯಂತೆ ನೌಕೆ ಉಡಾವಣೆ ಸಾಧ್ಯವಾಗಿಲ್ಲ. ಭಾನುವಾರ ಬೆಳಿಗ್ಗೆ ನೌಕೆಯ ಉಡಾವಣೆಯಾಗಲಿದೆ ಎಂದಷ್ಟೇ ತಿಳಿಸಿರುವ ನಾಸಾ, ಸಮಯವನ್ನು ತಿಳಿಸಲಾಗುವುದು ಎಂದಷ್ಟೇ ಹೇಳಿದೆ.
ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯು ನಾಸಾ ನಿರ್ಮಿತ ಅತ್ಯಂತ ಪ್ರಬಲ ನೌಕೆಯಾಗಿದ್ದು, ಸೂರ್ಯ ನಾಭಿಯಿಂದ 61 ಲಕ್ಷ ಕಿ.ಮೀ.ನಷ್ಟು ಸಮೀಪ ಸಾಗಲಿದೆ. ಈ ನೌಕೆ ಸೂರ್ಯನ ಬಳಿ ತಲುಪಿದ ಬಳಿಕ 7 ವರ್ಷದಲ್ಲಿ 24 ಬಾರಿ ಅದರ ವಾತಾವರಣವನ್ನು ಸುತ್ತಲಿದೆ. ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಅಂದಾಜು 10 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ಸೂರ್ಯ ಸಮೀಪಿಸುತ್ತಿದ್ದಂತೆ ನೌಕೆ ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಚಲಿಸಲಿದೆ. ಆ ಮೂಲಕ ಇಡೀ ವಿಶ್ವದಲ್ಲಿಯೇ ಅತ್ಯಂತ ವೇಗದ ಮಾನವ ನಿರ್ಮಿತ ನೌಕೆ ಎಂಬ ಕೀರ್ತಿಗೂ ಪಾರ್ಕರ್ ಸೋಲಾರ್ ಪ್ರೋಬ್ ಪಾತ್ರವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos