ವಿಜ್ಞಾನ-ತಂತ್ರಜ್ಞಾನ

ಮಾನವ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ತಂಡವನ್ನು ಆಯ್ಕೆ ಮಾಡಲಿರುವ ವಾಯು ಪಡೆ!

Srinivas Rao BV
ಬೆಂಗಳೂರು: 2022 ರ ವೇಳೆಗೆ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಮಿಷನ್ ಸಾಕಾರಗೊಳ್ಳಲಿದ್ದು, ಬಾಹ್ಯಾಕಾಶದಲ್ಲಿರಬೇಕಾದ ಮಾನವ ತಂಡವನ್ನು ವಾಯುಪಡೆ ಆಯ್ಕೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. 
ತಂಡದ ಆಯ್ಕೆಗಳಿಗೆ ಕೆಲವು ಮಾನದಂಡಗಳಿರುತ್ತವೆ, ಐಎಎಫ್ ಆಯ್ಕೆ ಮಾಡಲಿರುವ ತಂಡವನ್ನೇ ಬಾಹ್ಯಾಕಾಶಕ್ಕೆ ಕಳಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ. ಕಠಿಣ ತರಬೇತಿಯ ನಂತರ 6 ಜನರನ್ನು ಪಟ್ಟಿ ಮಾಡಲಾಗುತ್ತದೆ. ಅಂತಿಮವಾಗಿ ಈ ಪೈಕಿ 3 ಜನರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯ ಜವಾಬ್ದಾರಿಯನ್ನು ವಾಯುಪಡೆ ಸಂಪೂರ್ಣವಾಗಿ ವಹಿಸಿಕೊಳ್ಳಲಿದೆ ಎಂದು ಶಿವನ್ ಹೇಳಿದ್ದಾರೆ. 
ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ಈಗಾಗಲೇ ಹೊಸ ಯೋಜನೆ ಹಾಗೂ ನಿರ್ವಹಣೆಯ ರಚನೆಯನ್ನು ಮಾಡಿಕೊಳ್ಳುತ್ತಿದ್ದು, ತಂಡದ ಆಯ್ಕೆಗೆ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಯಾರು ಬೇಕಾದರೂ ಬಾಹ್ಯಾಕಾಶ ಯಾನಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ತಂಡವನ್ನು ಆಯ್ಕೆ ಮಾಡಿದ ನಂತರ ಅವರಿಗೆ  2-3 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. 
2022 ರ ವೇಳೆಹೆ ಬಾಹ್ಯಾಕಾಶ ಮಿಷನ್ ಸಾಕಾರಗೊಳ್ಳಬೇಕಾದರೆ ಖಾಸಗಿ ಸಹಭಾಗಿತ್ವವೂ ಅಗತ್ಯ ಎಂದು ಶಿವನ್ ಇದೇ ವೇಳೆ ಹೇಳಿದ್ದಾರೆ. 
SCROLL FOR NEXT