ಬೆಂಗಳೂರು: ಡಿಸೆಂಬರ್ 19ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 35ನೇ ಸಂವಹನ ಉಪಗ್ರಹ ಜಿಸ್ಯಾಟ್ 7ಎ ಯನ್ನು ಉಡಾವಣೆಗೊಳಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಆಂಧ್ರ ಪ್ರದೇಶ ಶ್ರೀಹರಿಕೋತಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆಗೊಳ್ಳಲಿದೆ.
ಇದು ಡಿಸೆಂಬರ್ ಮಾಸದಲ್ಲಿ ಇಸ್ರೋ ಉಡಾವಣೆಗೊಳಿಸುತ್ತಿರುವ ಎರಡನೇ ಉಪಗ್ರಹವಾಗಿದೆ. ಇದಕ್ಕೆ ಮುನ್ನ ಡಿಸೆಂಬರ್ 5ರಂದು ಅತಿ ಹೆಚ್ಚು ತೂಕದ ಉಪಗ್ರಹ ಜಿಸ್ಯಾಟ್ 11 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು. ಈ ಮೂಲಕ ಇಸ್ರೋ ಒಂದೇ ತಿಂಗಳಿನಲ್ಲಿ ಎರಡು ಉಪಗ್ರಹ ಉಡಾವಣೆಗೊಳಿಸುವ ತನ್ನ ಮಹೋದ್ದೇಶವನ್ನು ಸಾಧಿಸುವ ಹುಮ್ಮಸ್ಸಿನಲ್ಲಿದೆ.
ಜಿಸ್ಯಾಟ್ 7ಎ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ ಎಫ್11 ಉಡಾವಣಾ ವಾಹನದ ಮೂಲಕ ಶ್ರೀಹರಿಕೋಟಾ ಬಾಹ್ಯಾಕಾಶ ನೆಲೆಯಿಂದ ಉಡಾವಣೆಗೊಳಿಸಲಾಗುತ್ತದೆ.2,250 ಕೆಜಿ ತೂಕದ ಈ ಉಪಗ್ರಹವನ್ನು ಇಸ್ರೋ ತಯಾರಿಸಿದ್ದು ದೇಶದಲ್ಲಿ ಬಳಕೆದಾರರ ಸಂವಹನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಮುನ್ನ ನವೆಂಬರ್ ನಲ್ಲಿಯೇ ಈ ಉಪಗ್ರಹ ಉಡಾವಣೆಗೊಳ್ಳುವುದಾಗಿ ಹೇಳಲಾಗಿತ್ತಾದರೂ ಇದೀಗ ಡಿಸೆಂಬರ್ ನಲ್ಲಿ ದಿನ ನಿಗದಿಯಾಗಿದೆ
ಇಸ್ರೋ ಅಧ್ಯಕ್ಷ ಕೆ. ಶಿವನ್ ಸಂಸ್ಥೆಯು ಪ್ರತಿ ತಿಂಗಳೂ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ, ಇದು ಸಂಸ್ಥೆಯ ಮಹತ್ವದ ಟಾರ್ಗೆಟ್ ಸಹ ಆಗಿದೆ ಎಂದಿದ್ದರು ಆದರೆ ಸಪ್ಟೆಂಬರ್ ಹಾಗೂ ಅಕ್ಟೋಬರ್ ಗಳಲ್ಲಿ ಇಸ್ರೋ ತನ್ನ ಗುರಿ ಸಾಧಿಸುವಲ್ಲಿ ವಿಫಲವಾಗಿತ್ತು. ಆ ಮಾಸಗಳಲ್ಲಿ ಸಂಸ್ಥೆ ಏಕೈಕ ಉಪಗ್ರಹವನ್ನು (ಪಿಎಸ್ಎಲ್ವಿ ಸಿ 42) ಕಕ್ಷೆಗೆ ಸೇರಿಸಿತ್ತು.
ಇದೀಗ ಡಿಸೆಂಬರ್ ನಲ್ಲಿ ಎರ್ಡನೇ ಉಪಗ್ರಹ ಕಕ್ಷೆಗೇರಿಸಲು ಇಸ್ರೋ ಸಜ್ಜಾಗಿದ್ದು ಇದು ಸಂಸ್ಥೆಯು ಈ ವರ್ಷ ಯಶಸ್ವಿಯಾಗಿ ಉಡಾವಣೆಗೊಳಿಸುತ್ತಿರುವ ಎಂಟನೇ ಉಪಗ್ರಹವಾಗಲಿದೆ.