ಉಡಾವಣೆಗೆ ಸಿದ್ದವಾಗಿರುವ ಚಂದ್ರಯಾನ-2
ಚೆನ್ನೈ: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೊ) ಚಂದ್ರಯಾನ-2 ಉಡಾವಣೆಯ ದಿನಾಂಕವನ್ನು ಬರುವ ಸೋಮವಾರ ಅಪರಾಹ್ನ 2.43ಕ್ಕೆ ನಿಗದಿಪಡಿಸಿದೆ.
ಚಂದ್ರಯಾನ-2 ಯೋಜನೆಯ ಉಡಾವಣೆ ದಿನಾಂಕ ಮುಂದೂಡಲ್ಪಟ್ಟರೂ ಸಹ ಚಂದ್ರನಲ್ಲಿಗೆ ಪ್ರಯಾಣಿಸುವ ಒಂದು ವಾರದ ಅವಧಿ ಕಳೆದು ಹೋದರೂ ಕೂಡ ಅದು ಚಂದ್ರನ ಮೇಲ್ಮೈಯಲ್ಲಿ ನೌಕೆ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲ. ಸೆಪ್ಟೆಂಬರ್ 6ರಂದು ಪೂರ್ವ ನಿಯೋಜನೆಯಂತೆ ಚಂದ್ರನ ಮೇಲ್ಮೈ ಮೇಲೆ ಉಡಾವಣಾ ನೌಕೆ ಸುಲಭವಾಗಿ ಲ್ಯಾಂಡಿಂಗ್ ಆಗಲಿದೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಖಚಿತಪಡಿಸಿದ್ದಾರೆ.
ಉಡಾವಣಾ ನೌಕೆಯ ದೃಢತೆ ಭದ್ರವಾಗಿಯೇ ಇದೆ. ಮೂಲತಃ ಸೆಪ್ಟೆಂಬರ್ 6 ರಂದು ಯೋಜಿಸಿದಂತೆ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈಯನ್ನು ತಲುಪುತ್ತದೆ, ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಯೋಜನೆಗಳ ಜೀವಿತಾವಧಿ ಕೇವಲ ಒಂದು ಚಂದ್ರ ದಿನ ಅಂದರೆ 14 ದಿನಗಳು ಆಗಿರುವುದರಿಂದ ಇದು ನಿರ್ಣಾಯಕವಾಗಿದೆ. ಚಂದ್ರನ ಪ್ರಯಾಣದ ಸಮಯವನ್ನು 54 ದಿನಗಳಿಂದ 47 ದಿನಗಳವರೆಗೆ ಇಳಿಸಲಾಗುತ್ತದೆ. ಅಂತಹ ಹೊಂದಾಣಿಕೆ ಮಾಡಲು ಚಂದ್ರಯಾನ ಯೋಜನೆಯಲ್ಲಿ ಸಾಕಷ್ಟು ಅವಕಾಶವಿದೆ ಎಂದು ಹೇಳಿದರು.
ಭೂಮಿಯಿಂದ ಉಡಾವಣೆಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವವರೆಗೆ ಚಂದ್ರಯಾನ-2 9 ಹಂತಗಳನ್ನು ಒಳಗೊಂಡಿದೆ. 3,850 ಕೆ ಜಿ ತೂಕದ ಉಡಾವಣಾ ವಾಹಕ ಉಡಾವಣೆಯಾದ ನಂತರ ಅದನ್ನು 170*40400 ಕಿಲೋ ಮೀಟರ್ ದೂರದಲ್ಲಿ ಭೂ ಸ್ಥಿರ ಕಕ್ಷೆಯಲ್ಲಿ ಒಳನುಗ್ಗಿಸಿ 17 ದಿನಗಳವರೆಗೆ ಅರ್ಥ್ ಬರ್ನ್ಸ್ ನ್ನು 1,05,292 ಕಿಲೋ ಮೀಟರ್ ವರೆಗೆ ಕೊಂಡೊಯ್ಯಲಾಗುತ್ತದೆ. ನಂತರ ಬಾಹ್ಯಾಕಾಶ ನೌಕೆಯನ್ನು ಚಂದ್ರ ವರ್ಗಾವಣೆ ಪಥದಲ್ಲಿ ಸರಿಯಾಗಿ 19ನೇ ದಿನ ಇಡಲಾಗುವುದು ಎಂದು ಶಿವನ್ ವಿವರಿಸಿದರು. ಕಕ್ಷೆಯನ್ನು ಹೆಚ್ಚಿಸುವ ಮೂಲಕ ಉಡಾವಣೆಯ ಒಂದು ವಾರ ವಿಳಂಬದ ದಿನಗಳನ್ನು ಹೊಂದಿಸಲಾಗುವುದು ಎಂದರು.
ಲ್ಯಾಂಡಿಂಗ್ ಆಗುವ ಕೇವಲ 5 ದಿನಗಳ ಮುಂಚೆ ವಿಕ್ರಮ್ ನ್ನು ಪ್ರತ್ಯೇಕಗೊಳಿಸಿ 100x30 ಕಿಲೋಮೀಟರ್ ಚಂದ್ರನ ಕಕ್ಷೆಗೆ ಡಿ-ಬೂಸ್ಟ್ ಮಾಡಿದ ನಂತರ ಅಲ್ಲಿ 4 ದಿನಗಳ ಕಾಲ ಉಳಿಯಲಿದೆ. ನಾಲ್ಕನೇ ದಿನ, ಆಪ್ಟಿಕಲ್ ಹೈ-ರೆಸಲ್ಯೂಶನ್ ಕ್ಯಾಮೆರಾ ಪೇಲೋಡ್ ಆನ್ಬೋರ್ಡ್ ಆರ್ಬಿಟರ್ ಅನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸೂಕ್ತವಾದ ಲ್ಯಾಂಡಿಂಗ್ ಪ್ರದೇಶಕ್ಕೆ ತಿರುಗಿಸಲಾಗುತ್ತದೆ. ಇಲ್ಲಿ ಉಡಾವಣಾ ವಾಹಕ ತೆಗೆದ ಚಿತ್ರವನ್ನು ಭೂಮಿಗೆ ಕಳುಹಿಸಲಾಗುತ್ತದೆ. ನಂತರ ವಿಕ್ರಮ್ ನಲ್ಲಿ ಲ್ಯಾಂಡಿಂಗ್ ಸ್ಥಳದ ಮ್ಯಾಪ್ ನ್ನು ಅಪ್ ಲೋಡ್ ಮಾಡಲಾಗುತ್ತದೆ.
ಚಂದ್ರನ ಸ್ಥಳಾಕೃತಿ, ಖನಿಜಶಾಸ್ತ್ರ, ಧಾತುರೂಪದ ಸಮೃದ್ಧಿ, ಚಂದ್ರನ ಹೊರಗೋಳ ಮತ್ತು ಹೈಡ್ರಾಕ್ಸಿಲ್ ಅಯಾನುಗಳು, ಚಂದ್ರನ ಮೇಲೆ ನೀರು-ಮಂಜುಗಡ್ಡೆಯ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಲಾಗುತ್ತದೆ.
ಚಂದ್ರಯಾನ-2 ಪ್ರಯಾಣದ ಒಟ್ಟು ದಿನಗಳು 47 ಆಗಿದ್ದು ಅದನ್ನು ಇಸ್ರೊ ಈ ಕೆಳಗಿನಂತೆ ಯೋಜನೆ ಮಾಡಿಕೊಂಡಿದೆ.
ಭೂ-ಹಂತ 1 ರಿಂದ 17 ನೇ ದಿನ (17 ದಿನಗಳು)
ಟ್ರಾನ್ಸ್ ಲೂನಾರ್ ಇಂಜೆಕ್ಷನ್ (ಟಿಎಲ್ಐ) 17 ದಿನ
ಚಂದ್ರ ವರ್ಗಾವಣೆ ಪಥ (ಎಲ್‌ಟಿಟಿ) 17 ರಿಂದ 22 ನೇ ದಿನ
ಚಂದ್ರನ ಕಕ್ಷೆಯ ಅಳವಡಿಕೆ (LOI) 22 ನೇ ದಿನ
ಚಂದ್ರನ ಸರಹದ್ದಿನ ಹಂತ (ಎಲ್ಬಿಎನ್) 22 ರಿಂದ 49 ನೇ ದಿನ (28 ದಿನಗಳು)
ಲ್ಯಾಂಡರ್-ಆರ್ಬಿಟರ್ ಬೇರ್ಪಡಿಸುವ 50 ನೇ ದಿನ
ಇಂದಿನಿಂದ ಆನ್ ಲೈನ್ ದಾಖಲಾತಿ: ಬಹು ನಿರೀಕ್ಷಿತ ಚಂದ್ರಯಾನ-2 ಉಡಾವಣೆಯನ್ನು ಸಾರ್ವಜನಿಕರ ನೇರ ವೀಕ್ಷಣೆಗೆ ಇಸ್ರೊ ಸೌಲಭ್ಯ ಕಲ್ಪಿಸಿದೆ.
ಆಂಧ್ರ ಪ್ರದೇಶದ ಶ್ರೀ ಹರಿಕೋಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ವೀಕ್ಷಕರ ಗ್ಯಾಲರಿ ಮೂಲಕ ಚಂದ್ರಯಾನ-2 ನೇರ ವೀಕ್ಷಣೆಗೆ ಆನ್ ಲೈನ್ ನೋಂದಣಿ ಇಂದು ಸಂಜೆ 6 ಗಂಟೆಯಿಂದ ಆರಂಭವಾಗುತ್ತದೆ ಎಂದು ಇಸ್ರೊ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos