ವಿಜ್ಞಾನ-ತಂತ್ರಜ್ಞಾನ

ಮೊದಲ ಬಾರಿಗೆ 'ಇಸ್ರೋ' ರಾಕೆಟ್ ಲಾಂಚ್ ವೀಕ್ಷಣೆಗೆ ಜನಸಾಮಾನ್ಯರಿಗೆ ಅವಕಾಶ!

Srinivasamurthy VN
ಅಮರಾವತಿ: ದೇಶದ ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜನಸಾಮಾನ್ಯರಿಗೂ ರಾಕೆಟ್ ಲಾಂಚ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಹೌದು.. ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೇ ಮೊದಲ ಬಾರಿಗೆ ಜನಸಾಮಾನ್ಯರೂ ರಾಕೆಟ್ ಉಡಾವಣೆ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ. ಇದಕ್ಕಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಇಸ್ರೋದ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ವೀಕ್ಷಣೆಗಾಗಿ ಪುಟ್ಟ ಸ್ಟೇಡಿಯಂ ಕೂಡ ನಿರ್ಮಾಣ ಮಾಡಲಾಗಿದೆ. 
ಉಡಾವಣೆ ವೀಕ್ಷಣೆಗಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸುಮಾರು 5000 ಪ್ರೇಕ್ಷಕರು ಸೇರ ಬಹುದಾದ ನೂತನ ಸ್ಟೇಡಿಯಂ ನಿರ್ಮಿಸಲಾಗಿದ್ದು, ಇದೇ ಸ್ಟೇಡಿಯಂ ಮೂಲಕವೇ ಜನರು ಇಸ್ರೋದ ರಾಕೆಟ್ ಉಡಾವಣೆಯನ್ನು ವೀಕ್ಷಣೆ ಮಾಡಬಹುದಾಗಿದೆ. 
ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ ವಕ್ತಾರ ವಿವೇಕ್ ಸಿಂಗ್ ಅವರು, ಸಾಕಷ್ಟು ವರ್ಷಗಳಿಂದ ಇಸ್ರೋ ರಾಕೆಟ್ ಉಡಾವಣೆಯನ್ನು ಜನ ಸಾಮಾನ್ಯರ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯವಿತ್ತು. ಇದೀಗ ಅದು ನೆರವೇರಿದ್ದು, ವೀಕ್ಷಣೆಗಾಗಿ ಪುಟ್ಟ ಸ್ಟೇಡಿಯಂ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಇಲ್ಲಿ 5 ಸಾವಿರ ಪ್ರೇಕ್ಷಕರು ವೀಕ್ಷಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು 10 ಸಾವಿರಕ್ಕೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಂತೆಯೇ ಇಲ್ಲಿಗೆ ಭೇಟಿ ನೀಡ ಬಯಸುವವರು ಇಸ್ರೋ ವೆಬ್ ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಜತೆಗೆ ಸರ್ಕಾರ ನೀಡಿರುವ ಗುರುತಿನ ಚೀಟಿ ತರಬೇಕು ಎಂದು ಹೇಳಿದ್ದಾರೆ. ರಾಕೆಟ್ ಲಾಂಚ್ ವೀಕ್ಷಣೆಗೆ ಇಸ್ರೋ ಸಕಲ ಸಿದ್ಧತೆ ಮಾಡಿದೆ. ಇದುವರೆಗೂ ಇಸ್ರೋ ಅಧಿಕಾರಿಗಳು ಮಾತ್ರವೇ ರಾಕೆಟ್ ಉಡಾವಣೆಯನ್ನು ವೀಕ್ಷಿಸಬಹುದಿತ್ತು. ಇದೀಗ ಸಾರ್ವಜನಿಕರಿಗೂ ಮುಕ್ತ ಗೊಳಿಸಲಾಗಿದೆ. ಇಂಥ ವ್ಯವಸ್ಥೆಯನ್ನು ನಾಸಾ ಸಂಸ್ಥೆ ಅಮೆರಿಕದ ಪ್ರಜೆಗಳಿಗೆ ಈಗಾಗಲೇ ಒದಗಿಸಿಕೊಟ್ಟಿದೆ.
ಏಪ್ರಿಲ್ 1ರಂದೇ ರಾಕೆಟ್ ಲಾಂಚ್ ವೀಕ್ಷಣೆಗೆ ಅವಕಾಶ
ಇನ್ನು ಇದೇ ಏಪ್ರಿಲ್ 1ರಂದೇ  ರಾಕೆಟ್ ಲಾಂಚ್ ವೀಕ್ಷಣೆಗೆ ಇಸ್ರೋ ಅವಕಾಶ ಕಲ್ಪಿಸಿದ್ದು, ಅಂದು ಬೆಳಗ್ಗೆ 9.30ಕ್ಕೆ ಪೋಲಾ ರ್ ಸ್ಯಾಟಲೈಟ್ ಉಡಾವಣೆಯಾಗಲಿದೆ.
SCROLL FOR NEXT