ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ 2: ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಂದೇ ಕೊನೆಯ ಅವಕಾಶ

Srinivasamurthy VN

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಂದೇ ಕೊನೆಯ ಅವಕಾಶವಾಗಿದ್ದು, ಇಂದಿನ ಅವಕಾಶ ತಪ್ಪಿದರೆ ಶಾಶ್ವತವಾಗಿ ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಹೌದು.. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಿದ ಬಳಿಕ ಅದರ ಸಂಪರ್ಕ ಕಡಿತಗೊಂಡಿತ್ತು. ಇಸ್ರೋ ಅದರೊಂದಿಗೆ ಸಂಪರ್ಕ ಸ್ಥಾಪಿಸಲು ಕನಿಷ್ಠ 14 ದಿನಗಳು ಬೇಕು ಎಂದು ತಿಳಿಸಿತ್ತು. ಅದರಂತೆ ಕಳೆದ 13 ದಿನಗಳಿಂದ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಸತತವಾಗಿ ಪ್ರಯತ್ನಿಸಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಆದರೆ ಈ 13 ದಿನಗಳಲ್ಲಿ, ಚಂದ್ರನ ಮೇಲಿನ ಆರ್ಬಿಟರ್ ತನ್ನಲ್ಲಿನ ವಿಶೇಷ ಕ್ಯಾಮೆರಾಗಳ ಮೂಲಕ ಥರ್ಮಲ್ ಆಪ್ಟಿಕಲ್ ಛಾಯಾಚಿತ್ರಗಳ ರವಾನಿಸಿತ್ತು. ಈ ಚಿತ್ರಗಳ ಸಹಾಯದಿಂದ ಇಸ್ರೋ ವಿಕ್ರಮ್ ಲ್ಯಾಂಡರ್ ಎಲ್ಲಿದೆ ಎಂಬುದನ್ನು ಪತ್ತೆ ಮಾಡಿತ್ತು. ಅಮೆರಿಕಾದ ನಾಸಾ ಸಹಾಯದಿಂದ ವಿಕ್ರಂ ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನ ಪಟ್ಟರು ಸಹಿತ ಸಾಧ್ಯವಾಗಲಿಲ್ಲ.

ಇದೀಗ ಇಸ್ರೋದ ನಿರಂತರ ಪ್ರಯತ್ನ ಕೊನೆಯ ಹಂತ ತಲುಪಿದ್ದು, ಇಂದು ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಸಂಪರ್ಕಿಸುವ ತಮ್ಮ ಕೊನೆಯ ಪ್ರಯತ್ನ ನಡೆಸಲಿದ್ದಾರೆ. ಒಂದು ವೇಳೆ ಇಂದಿನ ಪ್ರಯತ್ನವೂ ಕೂಡ ವಿಫಲವಾದರೆ ಭವಿಷ್ಯದಲ್ಲಿ ಇನ್ನೆಂದೂ ವಿಕ್ರಮ್ ಲ್ಯಾಂಡರ್ ಸಂಪರ್ಕ ಅಸಾಧ್ಯ. ಲ್ಯಾಂಡರ್‌ನೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಇಸ್ರೋ ನೀಡಿದ 14 ದಿನಗಳ ಕಾಲಮಿತಿಯು ಸೆಪ್ಟೆಂಬರ್ 21ಕ್ಕೆ ಕೊನೆಯಾಗಲಿದೆ. ಏಕೆಂದರೆ ಅದರ ನಂತರ ಚಂದ್ರನ ಪ್ರದೇಶವು ಲುನಾರ್ ಬೆಳಕಿಗೆ ಪ್ರವೇಶಿಸುತ್ತದೆ. 

SCROLL FOR NEXT