ವಿಜ್ಞಾನ-ತಂತ್ರಜ್ಞಾನ

ಡ್ರೈವರ್ ರಹಿತ ಕಾರು ಸಂಶೋಧನೆ: ಪುಣೆ ವಿದ್ಯಾರ್ಥಿಗಳ ಸಾಧನೆ

Harshavardhan M

ಮುಂಬೈ: ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದೈನಂದಿನ ಜೀವನಕ್ಕೆ ಬೇಕಾದ ಉಪಕರಣಗಳ ತಯಾರಿಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು. ಪುಣೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಂಥದ್ದೇ ಒಂದು ವಿನೂತನ ಸಂಶೋಧನೆ ಮಾಡಿದ್ದಾರೆ. ಅವರು ಚಾಲಕರಹಿತ ಕಾರೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಯಶ್ ಕೇಸ್ಕರ್, ಸುಧಾಂಶು, ಸೌರಭ್, ಶುಭಾಂಗ್, ಪ್ರೇಮಾ ಹಾಗೂ ಪ್ರತ್ಯಕ್ ಈ ತಂಡದಲ್ಲಿದ್ದಾರೆ.

ಈ ಕಾರು ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರದಲ್ಲಿ ತಯಾರು ಮಾಡಲಾಗಿದೆ. ಪುಣೆಯ ಎಂಐಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ. 

ಭಾರತದಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಪ್ರಮುಖವಾಗಿ ಚಾಲಕರು ಎಸಗುವ ತಪ್ಪುಗಳು ಕಾರಣವಾಗಿರುತ್ತದೆ, ಹೀಗಾಗಿ ಚಾಲಕರ ಅಗತ್ಯ ಬೀಳದ ಕಾರು ತಯಾರಿಗೆ ಅದುವೇ ಪ್ರೇರಣೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. 

ಈ ಕಾರು ವಿದ್ಯುತ್ ಶಕ್ತಿಯನ್ನು ಆಧರಿಸಿ ಕಾರ್ಯಚರಿಸುತ್ತದೆ ಎನ್ನುವುದು ವಿಶೇಷ. ಈ ಕಾರಿನ ಸ್ಟಿಯರಿಂಗ್, ಕ್ಸೆಲ್ರೇಟರ್ ಮತ್ತು ಬ್ರೇಕುಗಳನ್ನು ಆರ್ಟಿಫಿಷಿಯಲ್ ತಂತ್ರಜ್ಞಾನ ನಿಯಂತ್ರಿಸುತ್ತದೆ. ಈ ಕಾರಿನಲ್ಲಿ ಹಲವು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದರ ಮುಖಾಂತರ ಕಾರಿನಲ್ಲಿರುವ ಕಂಪ್ಯೂಟರ್ ರಸ್ತೆಯ ಮೇಲೆ ಗಮನ ಇರಿಸಿ ಕಾರು ಚಾಲನೆ ಮಾಡುತ್ತದೆ.

ಸದ್ಯ ಅಳವಡಿಸಲಾಗಿರುವ ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳಲಿದ್ದು, 40 ಕಿ.ಮೀ ಪ್ರಯಾಣ ನಡೆಸುತ್ತದೆ. ಈ ಕಾರಿನ ತಂತ್ರಜ್ಞಾನ ಕೇವಲ ಪ್ರಯಾಣ ಕ್ಷೇತ್ರ ಮಾತ್ರವಲ್ಲದೆ, ಕೃಷಿ, ಗಣಿಗಾರಿಕೆ ಸೇರಿದಂತೆ ಹಲವೆಡೆ ವಿಸ್ತರಿಸಬಹುದು ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT