ವಿಜ್ಞಾನ-ತಂತ್ರಜ್ಞಾನ

ಓಮಿಕ್ರಾನ್ ಸಹಿತ ಬೇರೆ ರೂಪಾಂತರಿಗಳನ್ನೂ ತಟಸ್ಥಗೊಳಿಸುವ ಪ್ರತಿಕಾಯಗಳ ಗುರುತು ಪತ್ತೆ! 

Srinivas Rao BV

ಓಮಿಕ್ರಾನ್ ಸಹಿತ ಕೊರೋನಾದ ಬೇರೆ ರೂಪಾಂತರಿಗಳನ್ನೂ ತಟಸ್ಥಗೊಳಿಸುವ ಪ್ರತಿಕಾಯಗಳ ಗುರುತು ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ವೈರಾಣುಗಳು ರೂಪಾಂತರಗೊಂಡ ಬಳಿಕವೂ ಬದಲಾವಣೆಯಾಗದ ಪ್ರದೇಶಗಳನ್ನು ಟಾರ್ಗೆಟ್ ಮಾಡುವ ಮೂಲಕ ರೂಪಾಂತರಿಗಳನ್ನು ತಟಸ್ಥಗೊಳಿಸುವ ಅಂಶಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. 

ಜರ್ನಲ್ ನೇಚರ್ ನಲ್ಲಿ ಸಂಶೋಧನಾತ್ಮಕ ಲೇಖನ ಪ್ರಕಟಗೊಂಡಿದ್ದು ಈ ಹೊಸ ಅಂಶದ ಆಧಾರದಲ್ಲಿ ಓಮಿಕ್ರಾನ್ ಅಷ್ಟೇ ಅಲ್ಲದೇ ಮುಂಬರುವ ರೂಪಾಂತರಿಗಳಿಗೂ ಪರಿಣಾಮಕಾರಿಯಾದ ಲಸಿಕೆಯನ್ನು ತಯಾರಿಸಿ, ಪ್ರತಿಕಾಯಗಳ ಚಿಕಿತ್ಸೆಯನ್ನು ನೀಡುವುದಕ್ಕೆ ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಸ್ಪೈಕ್ ಪ್ರೋಟೀನ್ ಮೇಲಿನ ರೂಪಾಂತರದಿಂದ ಸಂರಕ್ಷಣೆಗೊಂಡ ಪ್ರದೇಶಗಳನ್ನು ಟಾರ್ಗೆಟ್ ಮಾಡುವ ಪ್ರತಿಕಾಯಗಳ ಮೇಲೆ ಗಮನಹರಿಸುವ ಮೂಲಕ ವೈರಾಣುವಿನ ನಿರಂತರ ವಿಕಾಸದಿಂದ ಉಂಟಾಗುವ ಸಮಸ್ಯೆಗಳಿಂದ ಹೊರಬರಬಹುದು ಎಂದು ಅಮೆರಿಕದ ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್ ನ ಸಹಾಯಕ ಪ್ರಾಧ್ಯಾಪಕ ಡೇವಿಡ್ ವೀಸ್ಲರ್ ಹೇಳಿದ್ದಾರೆ.

ಓಮಿಕ್ರಾನ್ ಅಸಾಮಾನ್ಯವಾಗಿ ಸ್ಪೈಕ್ ಪ್ರೊಟೀನ್ ನಲ್ಲಿ 37 ಬಾರಿ ರೂಪಾಂತರ ಹೊಂದಿದ್ದು ಇದು ಮನುಷ್ಯರ ಜೀವಕೋಶಗಳೊಂದಿಗೆ ಸೇರ್ಪಡೆಯಾಗುವುದಕ್ಕೆ ಸಹಕಾರಿಯಾಗಿದೆ.
 
ಓಮಿಕ್ರಾನ್ ರೂಪಾಂತರಿಯಲ್ಲಿ ಸ್ಪೈಕ್ ಪ್ರೊಟೀನ್ ನಲ್ಲಿ ರೂಪಾಂತರಗಳ ಸಮೂಹ ಮನುಷ್ಯನ ರೋಗನಿರೋಧಕ ವ್ಯವಸ್ಥೆಯ ಪ್ರತಿಕಾಯಗಳನ್ನೂ ದಾಟಿ ಹೇಗೆ ಸೋಂಕು ಹರಡುತ್ತಿದೆ ಎಂಬುದು ಮುಖ್ಯಪ್ರಶ್ನೆಯಾಗಿದ್ದು, ಉತ್ತರ ಕಂಡುಕೊಳ್ಳುತ್ತಿದ್ದೇವೆ ಎಂದು ವೀಸ್ಲರ್ ಹೇಳಿದ್ದಾರೆ.

ಸೋಂಕು ತಗುಲಿ ಗುಣಮುಖರಾದವರಿಂದ ಸಂಗ್ರಹಿಸಲಾದ ಪ್ರತಿಕಾಯಗಳು ಹಾಗೂ ಎರಡು ಡೋಸ್ ಲಸಿಕೆ ಪಡೆದವರಿಂದ ಸಂಗ್ರಹಿಸಲಾದ ಪ್ರತಿಕಾಯಗಳಿಂದ ಸೋಂಕು ತಗುಲಿದ ಬಳಿಕ ಲಸಿಕೆ ಪಡೆಯುವುದು ಅತ್ಯಂತ ಉಪಯುಕ್ತ ಎಂಬುದು ಸಾಬೀತಾಗಿದೆ. ಆದ್ದರಿಂದ ಮೂರನೇ ಡೋಸ್ ಲಸಿಕೆ ಬಹಳ ಉಪಕಾರಿಯಾಗಲಿದೆ ಎಂದು ವೀಸ್ಲರ್ ತಿಳಿಸಿದ್ದಾರೆ. 

SCROLL FOR NEXT