ವಿಜ್ಞಾನ-ತಂತ್ರಜ್ಞಾನ

ಸುಳ್ಳು ಹೇಳಿ 'Sick Leave' ಪಡೀತಿದೀರಾ.. ನಿಮ್ಮ ಆಟ ಇನ್ನು ನಡೆಯೊಲ್ಲ.. ಧ್ವನಿ ಗ್ರಹಿಸಿ ನಿಜ ಹೇಳುತ್ತೆ ಹೊಸ ತಂತ್ರಜ್ಞಾನ!

Srinivasamurthy VN

ನವದೆಹಲಿ: ರಜೆ ಬೇಕು ಅಂದ್ರೆ ಹುಷಾರಿಲ್ಲ ಎಂಬ ಸಬೂಬು ಹೇಳುವುದು ಸಾಮಾನ್ಯ.. ಆದರೆ ನೂತನ ತಂತ್ರಜ್ಞಾನವೊಂದು ನಿಮ್ಮ ಧ್ವನಿ ಗ್ರಹಿಸಿ ನಿಮ್ಮ ಆರೋಗ್ಯದ ಖಚಿತ ವರದಿ ನೀಡುತ್ತದೆ....

ಹೌದು.. ಇನ್ನು ಮುಂದೆ ಸುಳ್ಳು ಹೇಳಿ ‘ಸಿಕ್‌ ಲೀವ್‌‘ ತೆಗೆದುಕೊಳ್ಳುವಂತಿಲ್ಲ!.. ಶೀತ, ನೆಗಡಿ, ಜ್ವರ ಎಂದು ಸಬೂಬು ಹೇಳಿ ರಜೆ ಪಡೆಯಲು ಸಾಧ್ಯವಿಲ್ಲ. ಹೊಸ ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನವೊಂದನ್ನು ಅಭಿವೃದ್ದಿ ಪಡಿಸುತ್ತಿದ್ದು, ಈ ತಂತ್ರಜ್ಞಾನ ನಮ್ಮ ಧ್ವನಿ ತರಂಗಗಳನ್ನು(ಸಿಗ್ನಲ್‌) ಬಳಸಿಕೊಂಡು ಶೀತ, ನೆಗಡಿ, ಜ್ವರದಂತಹ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಲಿದೆ.

ಸೂರತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಹಾಗೂ ಜರ್ಮನಿಯ ರೆನಿಶ್ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರ ಜೊತೆಗೂಡಿ ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಸಿ ವ್ಯಕ್ತಿಗಳ ಧ್ವನಿ ಮೂಲಕ ಜ್ವರ, ಶೀತದಂತಹ ರೋಗಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ತಮ್ಮ ಹೊಸ ಸಂಶೋಧನೆಯ ಕುರಿತ ಮಾಹಿತಿಗಳನ್ನು ‘ಸೈನ್ಸ್ ಡೈರೆಕ್ಟ್‘ ಎಂಬ ವಿಜ್ಞಾನ ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. 

635 ಜನರ ಧ್ವನಿ ಮಾದರಿಯನ್ನು ಸಂಶೋಧಕರು ವಿಶ್ಲೇಷಿಸಿದ್ದು, ಅವರಲ್ಲಿ 111 ಜನರು ಶೀತದಿಂದ ಬಳಲುತ್ತಿದ್ದರು. ಶೀತದಿಂದ ಕೂಡಿದ ಹಾಗೂ ಆರೋಗ್ಯ ಸರಿ ಇರುವ ಧ್ವನಿ ಮಾದರಿಗಳ ವ್ಯತ್ಯಾಸವನ್ನು ವಿಶ್ಲೇಷಣೆ ಮಾಡಲಾಗಿತ್ತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಇದನ್ನು ಸಾಧ್ಯವಾಗಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹೇಗಿತ್ತು ಈ ಸಂಶೋಧನೆ?
‘ಪರೀಕ್ಷೆ ವೇಳೆ ಸಂಶೋಧನೆಯಲ್ಲಿ ಪಾಲ್ಗೊಂಡವರಿಗೆ ಕೆಲವೊಂದು ಸೂಚನೆಗಳನ್ನು ಅನುಸರಿಸಲು ಹೇಳಲಾಯಿತು. ಮೊದಲಿಗೆ 1ರಿಂದ 40ರವರೆಗೆ ಎಣಿಸಲು ಹೇಳಲಾಯಿತು, ಅದಾದ ಬಳಿಕ ಒಂದು ವಾರದಲ್ಲಿ ಅವರು ಮಾಡಿದ ಕೆಲಸದ ಬಗ್ಗೆ ವಿವರಿಸಲು ಸೂಚಿಸಲಾಯಿತು. ನಂತರ ‘ದಿ ನಾರ್ಥ್‌ ವಿಂಡ್‌ ಆಂಡ್‌ ಸನ್‌‘ ಎಂಬ ನೀತಿ ಕಥೆಯನ್ನು ಓದಲು ಹೇಳಲಾಯಿತು. ಹೊಸ ಎಐ ತಂತ್ರಜ್ಞಾನವು ಶೀತವಿರುವ ಮತ್ತು ಶೀತವಿಲ್ಲದ ಮಾತಿನ ನಡುವಿನ ತರಂಗದ ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ಗುರುತಿಸಿದೆ. ಹೊಸ ತಂತ್ರಜ್ಞಾನ ಶೇಕಡ 70ರಷ್ಟು ನಿಖರವಾಗಿ ರೋಗ ಲಕ್ಷಣವನ್ನು ಗುರುತಿಸಿರುವುದು ಪರೀಕ್ಷೆ ವೇಳೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ದಿ ಪಡಿಸಲಾಗುವುದು‘ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಸಂಶೋಧನೆಯ ಉದ್ದೇಶವೇನು?
ವಿಜ್ಞಾನಿಗಳ ಪ್ರಕಾರ, ವೈದ್ಯರ ಭೇಟಿಯ ಅಗತ್ಯವಿಲ್ಲದೇ ಒಬ್ಬ ವ್ಯಕ್ತಿಯು ಶೀತದಿಂದ ಬಳಲುತ್ತಿದ್ದರೆ ಅದನ್ನು ಗುರುತಿಸುವುದು ಈ ಸಂಶೋಧನೆಯ ಪ್ರಾಥಮಿಕ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. ಆದಾಗ್ಯೂ, ಅನಾರೋಗ್ಯ ಎಂದು ಸುಳ್ಳು  ಹೇಳಿ ರಜೆ ಪಡೆಯುವ  ಉದ್ಯೋಗಿಗಳನ್ನು ಗುರುತಿಸಲು ಬಯಸುವ ಉದ್ಯೋಗದಾತರಿಗೂ ಇದು ಆಸಕ್ತಿಯನ್ನುಂಟುಮಾಡುವ ವಿಚಾರವಾಗಿದೆ.
 

SCROLL FOR NEXT