ವಿಶೇಷ

ಮೂಳೆ ವೇಳೆ

ಎಷ್ಟು ಚೆನ್ನಾಗಿದ್ದಳು ಅವಳು! ಮೈ ಕೈ ತುಂಬಿಕೊಂಡು, ಚಿವುಟಿದರೆ ರಕ್ತ ಚಿಲ್ಲನೆ ಚಿಮ್ಮಬಹುದೆನ್ನುವಂತೆ, ಅವಳ ಸುತ್ತ ಪತಂಗಗಳಂತೆ ಗೆಳತಿಯರು. ಅವಳಲೊಬ್ಬಳು ಸಿಕ್ಕಾಪಟ್ಟೆ ಡಯಟ್ ಕಾನ್ಷಿಯಸ್. ಬೆಳಗ್ಗೆದ್ದು ಎರಡು ಸೌತೆಕಾಯಿ ಹೋಳು, ಮಧ್ಯಾಹ್ನ ಹಣ್ಣಿನ ಜ್ಯೂಸು, ಸಂಜೆ ಒಂದು ಮೊಟ್ಟೆ, ರಾತ್ರಿ ಒಂದು ಗ್ಲಾಸ್ ಹಾಲು... ಇಷ್ಟರಿಂದಲೇ ಜೀವನ ಸಾಗಿಸುತ್ತಿದ್ದವಳು. ಅವಳ ಬುಟ್ಟಿಗೆ ಇವಳು ಬಿದ್ದದ್ದೇ, ಬದುಕು ಹೇಗೆ ಬದಲಾಗಿಹೋಯಿತು.

ಈಗ ಈಕೆಯನ್ನು ನೋಡಿದವರು ನಿಟ್ಟುಸಿರು ಬಿಡಬೇಕು. ಕಾಲರ್ ಬೋನ್‌ಗಳು ಎದ್ದು ಕಾಣಿಸುತ್ತವೆ. ಸೀರೆ ಉಟ್ಟರೆ ಪಕ್ಕೆಲುಬುಗಳು ಕಣ್ಣಿಗೆ ರಾಚುತ್ತವೆ. ಬಿಕಿನಿ ತೊಟ್ಟರೆ ಅಲ್ಲೊಂದು ಫುಲ್ ಗ್ಯಾಪು. ನೆಟ್ಟಗೆ ನಿಂತರೆ ತೊಡೆಗಳ ನಡುವೆ ಬೆಕ್ಕು ಪಾಸಾಗಿ ಹೋಗಬಹುದು. ಹಾಂ, ನಿಲ್ಲಿ. ಇವಳು ಹೊಟ್ಟೆಗಿಲ್ಲದೆ ಹಸಿದು ಹೀಗಾದವಳಲ್ಲ. ಇದು ಹೊಸಾ ಆರೋಗ್ಯದ ಟ್ರೆಂಡಂತೆ. ಹಾಗಂತ ಅವಳೇ ಹೇಳಿದ್ದು.

ಈಕೆಯೊಬ್ಬಳೇ ಅಲ್ಲ ಭಾರತದಲ್ಲಿ ಸಾವಿರಾರು ಜನ ಇಂಥ ಫ್ಯಾಶನ್ ಫ್ಯಾಡ್‌ಗೆ ತುತ್ತಾದವರು. ಫ್ಯಾಡ್ ಅಂದರೆ ಗೊತ್ತಲ್ಲ, ಗೀಳು. ಹೊಸಾ ಗೀಳು ಯಾವುದು ಗೊತ್ತಾ? ಥೈ ಗ್ಯಾಪ್, ಬಿಕಿನಿ ಬ್ರಿಜ್, ಮೇಲ್ಕಾಣುವ ಕಾಲರ್ ಬೋನ್ ಮತ್ತು ಪಕ್ಕೆಲುಬು. ಈ ನಾಲ್ಕು ನಮ್ಮ ಹುಡುಗಿಯರನ್ನೂ ಕಾಳ್ಗಿಚ್ಚಿನಂತೆ ಆವರಿಸುತ್ತಿದೆ.

ಥೈ ಗ್ಯಾಪ್
ನೆಟ್ಟಗೆ ನಿಲ್ಲಿ. ನಿಂತಾಗ ನಿಮ್ಮೆರಡು ತೊಡೆಗಳ ಟಚ್ಚಾಗುತ್ತವಾ? ಹಾಗಿದ್ದರೆ ನೀವೀ ಮಾನದಂಡದಿಂದ ಹೊರಗೆ. ಎರಡು ತೊಡೆಗಳ ನಡುವೆ ಗ್ಯಾಪ್ ಇದೆ ಅಂತಾದರೆ ನೀವು ಸುಂದರಿ. ಸೋಶಿಯಲ್ ಸೈಟುಗಳು ಹಾಗೆ ಹೇಳುತ್ತವೆ. ಕಾರಾ ಡೆಲೆವಿಂಗ್ ಎಂಬ ಸೂಪರ್ ಮಾಡೆಲ್ ಈ ಟೆಂಡ್‌ನ ಜನಕಳಂತೆ. 2013ರ ಕೊನೆಗೆ ಆರಂಭವಾದ ಈ ಗೀಳು ಪಶ್ಚಿಮದಲ್ಲಿ ಬಿಸಿಗಾಳಿಯಂತೆ ಹಬ್ಬಿ ಇತ್ತೀಚಿಗೆ ಭಾರತಕ್ಕೂ ಅಡಿಯಿಟ್ಟಿದೆ. ನೆನಪಿಡಬೇಕಾದ್ದೆಂದರೆ, ಎಲ್ಲರೂ ಇಂಥ ಗ್ಯಾಪ್ ಪಡೆಯಲು ಸಾಧ್ಯ. ಕೆಲವರ ಕಾಲುಗಳ ರಚನೆಯ ವಂಶಾವಹಿಯೇ ಅಂತಿರುವುದಿಲ್ಲ. ಇದನ್ನು ಒಪ್ಪದವರು ಅತಿಯಾದ ಡಯಟ್, ಕೆಟ್ಟ ವ್ಯಾಯಾಮ ವಿಧಾನಗಳ ಮೊರೆ ಹೋಗುತ್ತಾರೆ.

ಬಿಕಿನಿ ಬ್ರಿಜ್
ಇದು ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಕಷ್ಟವೇ. ಪತ್ತೆ ಹಚ್ಚುವುದು ಇನ್ನೂ ಕಷ್ಟ. ಬಿಕಿನಿ ಕೊಟ್ಟು ಅಂಗಾತ ಮಲಗಿ. ಆಗ ಸೊಂಟದ ಎರಡೂ ಬಜಿಯ ಮೂಳೆಗಳು ಬಿಕಿನಿಯನ್ನು ಎತ್ತಿ ಹಿಡಿದಂತಿದ್ದರೆ, ಅರ್ಥಾತ್, ಬಿಕಿನಿ ಮೇಲ್ಭಾಗದಲ್ಲಿ ದೇಹಕ್ಕೂ ಬಿಕಿನಿಗೂ ಮಧ್ಯೆ ಗ್ಯಾಪ್ ಇದ್ದರೆ, ಅದನ್ನೇ ಬಿಕಿನಿ ಬ್ರಿಜ್ ಅಂತಾರಂತೆ. ಇದನ್ನು ಸಾಧಿಸಬೇಕಾದರೂ ವರ್ಷಗಟ್ಟಲೇ ಅನ್ನ ನೀರು ಬಿಟ್ಟು ವ್ರತ ಹಿಡಿಯಬೇಕಾಗುತ್ತದೆ. ಸಹಜವಾಗಿಯೇ ನಮ್ಮ ದಕ್ಷಿಣ ಭಾರತೀಯ ಹುಡುಗಿಯರಿಗೆ ಇದು ಒಪ್ಪುವ ದೇಹರಚನೆಯಲ್ಲ. ಪಟ್ಟು ಹಿಡಿದು ಸಾಧಿಸುವವರು ಆರೋಗ್ಯಕರ ಆಹಾರ ಪದ್ಧತಿ ಇಲ್ಲದಿದ್ದರೆ. ಆಸ್ಪತ್ರೆ ಸೇರಬೇಕಾದಿತು ಎಂದು ತಜ್ಞರು ಎಚ್ಚರಿಸುತ್ತಾರೆ. ಆದರೆ ಬ್ರಿಜ್ ಕಟ್ಟಲು ಮುಂದಾದವರಿಗೆ ಕೊರೆತೆಯಿಲ್ಲ.

ಮೇಲ್ಕಾಣುವ ಪಕ್ಕೆಲುಬು, ಕಾಲರ್ ಬೋನ್
ಮೊದಲಿಗೆ ಅಮೆರಿಕದ ಸೂಪರ್ ಮಾಡೆಲ್ ಒಬ್ಬಳು ಹಸಿವಿನಿಂದ ಸತ್ತರೂ ಚಿಂತೆಯಿಲ್ಲವೆಂದು ನೀರು ಕುಡಿದು ಬದುಕಿ, ಮೂಳೆಚಕ್ಕಳವಾಗಿ, ಅದೇ ಸಂತೋಷದಿಂದ ಫೋಟೋಶೂಟ್ ಮಾಡಿಸಿಕೊಂಡು ಮಾಧ್ಯಮಗಳಲ್ಲಿ ಹರಿಬಿಟ್ಟಳು. ಫ್ಯಾಶನ್ ಜಗತ್ತಿನವರು ಹಾಹಾಕಾರ ಮಾಡುತ್ತ ಸ್ವೀಕರಿಸಿದರು. ಉಳಿದವರು ಮಾತ್ರ, ಸೋಮಾಲಿಯಾದ ಬಡ ಹೆಂಗಸರಿಗೆ ಸಹಜವಾಗಿಯೇ ಇರುವ ಈ ಮೈಕಟ್ಟನ್ನು ಸಾಧಿಸಲು ಈಕೆ ಇಷ್ಟೆಲ್ಲ ಹೆಣಗಾಡಬೇಕಾಯಿತೇ ಎಂದು ಕಟಕಿಯಾಡಿದರು. ಯಾರೇನೇ ಅನ್ನಲಿ, ಫ್ಯಾಶನ್‌ನಲ್ಲಿ ಇದೊಂದು ಹೊಸ ಟ್ರೆಂಡ್ ಅನ್ನಿಸಿಕೊಳ್ಳಲು ತಡವಾಗಲಿಲ್ಲ. ಹಾಗೇ ಇದು ಭಾರತಕ್ಕೂ ಬಂತು. ಗಂಟಲಿನಿ ಅಕ್ಕಪಕ್ಕ ಎದ್ದು ಕಾಣುವ ಮೂಳೆಗಳು, ಪಕ್ಕೆಲುಬುಗಳು ಇದರ ಲಕ್ಷಣ. ಇದಂತೂ ಮಾಲ್‌ನ್ಯೂಟ್ರಿಶನ್, ಅತಿ ಅಪಾಯಕಾರಿ ಅನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಕೇಳುವವರ್ಯಾರು?

-ವನಮಾಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ