ಬೆಂಗಳೂರು: ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ) ವಿದ್ಯಾರ್ಥಿಯೊಬ್ಬನಿಗೆ ಜಪಾನ್ ಸಂಸ್ಥೆಯೊಂದು ೧೯.೫ ಲಕ್ಷ ರೂ ವಾರ್ಷಿಕ ವೇತನ ನೀಡಲು ಮುಂದಾಗಿದೆ. ೯೭ ವರ್ಷದ ಕಾಲೇಜಿನ ಇತಿಹಾಸದಲ್ಲೇ ಇದು ಅತ್ಯಧಿಕ ಎಂದು ಬಣ್ಣಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿ ಶಶಾಂಕ್ ಕೊಪ್ಪರ್ ಇದರ ಪಲಾನುಭಾವಿ. ರಾಯಚೂರಿನ ಈ ವಿದ್ಯಾರ್ಥಿಗೆ ಕಾಲೇಜಿನಲ್ಲೇ ನಡೆದ ಉದ್ಯೋಗ ಆಯ್ಕೆ ಸಂದರ್ಭದಲ್ಲಿ ಅಂತರಾಷ್ಟ್ರೀಯ ಅಂತರ್ಜಾಲ ಮಾರಾಟ ಸಂಸ್ಥೆ ರಾಕುಟೆನ್ ಈ ಕೊಡುಗೆ ನೀಡಿದೆ. ತನ್ನ ಶಿಕ್ಷಣದ ನಂತರ ಕೆಲಸಕ್ಕೆ ಶಶಾಂಕ್ ಟೋಕಿಯೋಗೆ ಹಾರಲಿದ್ದಾರೆ.
ಈ ಕೊಡುಗೆಗೆ ಆಶ್ಚರ್ಯ ಮತ್ತು ಸಂತಸ ವ್ಯಕ್ತಪಡಿಸಿರುವ ಶಶಾಂಕ್, ಸೆಪ್ಟಂಬರ್ ೧ ೨೦೧೫ ರಲ್ಲಿ ಕೆಲಸಕ್ಕೆ ಸೇರುವೆನೆಂದು ತಿಳಿಸಿದ್ದಾರೆ. ಕಳೆದ ವರ್ಷ ವಿದ್ಯಾರ್ಥಿಯೊಬ್ಬನಿಗೆ ಮೈಕ್ರೋಸಾಫ್ಟ್ ನೀಡಿದ ೧೬ ಲಕ್ಷ ವಾರ್ಷಿಕ ವೇತನವೇ ಇಲ್ಲಿಯವರೆಗೂ ವಿದ್ಯಾರ್ಥಿಯೊಬ್ಬ ಪಡೆದ ಅತಿ ಹೆಚ್ಚಿನ ವೇತನವಾಗಿತ್ತು ಎಂದು ಯುವಿಸಿಇ ಕಾಲೇಜಿನ ಪ್ರಾಂಶುಪಾಲ ಕೆ ಆರ್ ವೇಣುಗೋಪಾಲ್ ತಿಳಿಸಿದ್ದು, "ನಮ್ಮ ಸಂಸ್ಥೆಯಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಪಡೆಯುವ ವಾರ್ಷಿಕ ವೇತನ ೪ ಲಕ್ಷದಿಂದ ೪.೫ ಲಕ್ಷದವರೆಗೆ ಇರುತ್ತದೆ" ಎಂದಿದ್ದಾರೆ.