ವಿಶೇಷ

ಡಿಸೆಂಬರ್ 1 ರೆಡ್ ರಿಬ್ಬನ್ ಡೇ

Mainashree

ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಇಡೀ ಜಗತ್ತೇ ಜನರಲ್ಲಿ ಏಡ್ಸ್ ಎಂಬ ಮಹಾಮಾರಿಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ನಿಗದಿಪಡಿಸಿಕೊಂಡ ದಿನ. ಆದರೂ, ವಿಶ್ವ ಏಡ್ಸ್ ದಿನದ ಬಗ್ಗೆ ಇಂದಿಗೂ ಬಹುತೇಕ ಮಂದಿಗೆ ಅರಿವೇ ಇಲ್ಲ.

ವಿವಿಧ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲು ನಿಗಧಿಪಡಿಸಿಕೊಂಡ ಎಲ್ಲ ದಿನಗಳಂತೆ ಅದು ಒಂದು ದಿನ ಎಂದು ಮೂಗು ಮುರಿಯುವವರೇ ಇಂದು ಹೆಚ್ಚು. ಆದರೆ, ಡಿ.1 ವಿಶ್ವ ಏಡ್ಸ್ ದಿನ ಜಗತ್ತಿನಲ್ಲಿಯೇ ಮೊಟ್ಟ ಮೊದಲು ರೂಪುಗೊಂಡ ಜಾಗತಿಕ ಆರೋಗ್ಯ ದಿನ ಎಂಬ ಬಗ್ಗೆ ಬಹುತೇಕರಿಗೆ ಅರಿವಿಲ್ಲ.

1988ರಲ್ಲಿ ಮೊದಲ ಬಾರಿಗೆ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಯಿತು. ಏಡ್ಸ್ ಕಾಯಿಲೆಗೆ ತುತ್ತಾಗಿ ನರಳುತ್ತಿರುವವರಿಗೆ ಆತ್ಮ ಸ್ಥೈರ್ಯ ತುಂಬಲು ಮತ್ತು ಮಹಾಮಾರಿಯ ಸೋಂಕಿನಿಂದಾಗಿ ಪ್ರಾಣ ತ್ಯಜಿಸಿದ ಆತ್ಮಗಳಿಗೆ ಶಾಂತಿ ಕೋರಲು ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ 32 ಮಿಲಿಯನ್‌ಗೂ ಹೆಚ್ಚು ಜನರು ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ಸುಮಾರು 35 ಮಿಲಿಯನ್‌ಗೂ ಅಧಿಕ ಜನರು ಏಡ್ಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಒಂದು ಅಂದಾಜಿನ ಪ್ರಕಾರ ಯು.ಕೆ ದೇಶವೊಂದರಲ್ಲಿಯೇ ಸುಮಾರು 1 ಕೋಟಿಗೂ ಅಧಿಕ ಮಂದಿ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದ್ದರೂ, ಏಡ್ಸ್ ಅಷ್ಟೇ ವೇಗದಲ್ಲಿ ಜನರನ್ನು ಬಲೆ ತೆಗೆದುಕೊಳ್ಳುವುದು ಇಂದಿಗೂ ನಿಂತಿಲ್ಲ.

ಇದರೊಂದಿಗೆ ಎಚ್‌ಐವಿ ಪೀಡಿತರನ್ನು ನೋಡುವ ದೃಷ್ಟಿಕೋನವು ಬದಲಾಗಬೇಕಿದೆ. ಎಚ್‌ಐವಿ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ವಿಧಾನಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಎಚ್‌ಐವಿ ಸೋಂಕಿಗೆ ತುತ್ತಾದವರನ್ನು ಮಾನವೀಯತೆಯಿಂದ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಮನವರಿಕೆ ಮಾಡಿಕೊಡಬೇಕಿದೆ. ವಿಶ್ವ ಏಡ್ಸ್ ದಿನ ಡಿ.1 ಕ್ಕೆ ಮಾತ್ರ ಸೀಮಿತಗೊಳ್ಳದೇ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಏಡ್ಸ್‌ನ್ನು ಬುಡ ಸಮೇತ ಕಿತ್ತೊಗೆಯುವ ಕಾರ್ಯಕ್ಕೆ ಮುಂದಾಗಬೇಕಿದೆ.

ಡಿ. 1 ವಿಶ್ವ ಏಡ್ಸ್ ದಿನ: ವಿಶ್ವ ಏಡ್ಸ್ ದಿನವನ್ನು ಹುಟ್ಟು ಹಾಕಿದ ಕೀರ್ತಿ ಡಬ್ಲ್ಯೂ- ಬನ್ ಮತ್ತು ಥಾಮಸ್ ನೆಟ್ಟರ್ ಎಂಬ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸಲ್ಲುತ್ತದೆ. 1987ರ ಆಗಸ್ಟ್‌ನಲ್ಲಿ ಜಿನಿವಾ ಮತ್ತು ಸ್ವಿಜರ್‌ಲ್ಯಾಂಡ್‌ನಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಕಾರ್ಯಕ್ರಮದಲ್ಲಿ ಏಡ್ಸ್ ಕಾಯಿಲೆಯ ಬಗ್ಗೆ ಗಮನ ಸೆಳೆಯಲಾಯಿತು. ಸ್ಯಾನ್ ಫ್ರಾನ್‌ಸಿಸ್ಕೋದ ಟೆಲಿವಿಷನ್ ಪ್ರಸಾರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬನ್ ಡಿ.1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಗಮನ ಸೆಳೆದರು. ನಂತರ 1988 ರಿಂದ ಡಿ.1ನ್ನು ಅಧಿಕೃತವಾಗಿ ವಿಶ್ವ ಏಡ್ಸ್ ದಿನ ಎಂದು ಘೋಷಣೆ ಮಾಡಲಾಯಿತು.

ರೆಡ್ ರಿಬ್ಬನ್: ರೆಡ್ ರಿಬ್ಬನ್ ಏಡ್ಸ್ ಬಗ್ಗೆ ಅರಿವು ಮೂಡಿಸುವ ಚಿಹ್ನೆಯಾಗಿ ಬಳಸಲಾಗುತ್ತದೆ. ರೆಡ್ ರಿಬ್ಬನ್ ಧರಿಸುವ ಮೂಲಕ ವಿಶ್ವದಲ್ಲಿ ಎಚ್‌ಐವಿ ಕಾಯಿಲೆಯ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಯಿಲೆಯ ಲಕ್ಷಣಗಳು, ಹರಡುವಿಕೆಯ ವಿವಿಧ ಕಾರಣಗಳು ಮತ್ತು ಸುರಕ್ಷಿತ ವಿಧಾನಗಳ ಬಗ್ಗೆ ಮಾಹಿತಿ, ಕಾಯಿಲೆಯ ಬಗೆಗಿನ ತಪ್ಪು ಕಲ್ಪನೆಗಳ ಬಗ್ಗೆ ಮನವರಿಕೆ ಮಾಡುವ ಉದ್ದೇಶದ ಸಂಕೇತವಾಗಿ ರೆಡ್‌ರಿಬ್ಬನ್‌ನ್ನು ಧರಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ 8 ಪ್ರಮುಖ ಜಾಗತಿಕ ಅರಿವು ಮೂಡಿಸುವ ದಿನಗಳಲ್ಲಿ ವಿಶ್ವ ಏಡ್ಸ್ ದಿನವು ಒಂದಾಗಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾ ಕೂಡ ಈ ದಿನಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಏಡ್ಸ್ ಬಗ್ಗೆ ಅರಿವು ಮೂಡಿಸಲೆಂದೇ 2007ರಲ್ಲಿ ಸುಮಾರು 28 ಅಡಿ ಎತ್ತರದ ರೆಡ್ ರಿಬ್ಬನ್‌ನ್ನು ನಿರ್ಮಿಸಿ ಜಗತ್ತಿನ ಎಲ್ಲ ದೇಶಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಆದ್ದರಿಂದಲೇ ಇಂದಿಗೂ ಡಿ. 1 ರಂದು ಅಮೆರಿಕಾದಲ್ಲಿ ರೆಡ್ ರಿಬ್ಬನ್‌ನ್ನು ಎಲ್ಲರೂ ಧರಿಸುವ ಮೂಲಕ ಎಚ್‌ಐವಿ ಪೀಡಿತರ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ.

ಮೈನಾಶ್ರೀ.ಸಿ

SCROLL FOR NEXT