ಅರೋರಾ ಸ್ನೋ, ಪ್ರಶಸ್ತಿ ವಿಜೇತ ಅಮೆರಿಕದ ನೀಲಿ ಚಿತ್ರತಾರೆ. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬ್ಲೂಫಿಲಂಗಳಲ್ಲಿ ನಟಿಸುತ್ತಿದ್ದಾಳೆ. ಇತ್ತೀಚೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾಳೆ. ಸದ್ಯ ತನ್ನ ಅನುಭವಗಳ ಬಗ್ಗೆ ಪುಸ್ತಕ ಬರೆಯುತ್ತಿದ್ದಾಳೆ. ಜೊತೆಗೆ ಕಾಯಿಲೆಯಿಂದ ಬಳಲುತ್ತಿರುವ ತಮ್ಮನ ಚಿಕಿತ್ಸೆಗಾಗಿ ಹಣ ಹೊಂದಿಸುತ್ತಿದ್ದಾಳೆ.
ಟಿಪಿಕಲ್ ನೀಲಿ ಸಿನೆಮಾದ ಸೀನ್ ಒಂದರ ಮಧ್ಯದಲ್ಲಿ ನನ್ನ ಸ್ಥಿತಿ ಹೀಗಿರುತ್ತದೆ: ಮುಖದ ತುಂಬಾ ಬೆವರಿನ ಹನಿ, ಅತಿಯಾಗಿ ದುಡಿದು ದಣಿದು ಶಕ್ತಿಯೇ ಇಲ್ಲದಂತೆ ಜೋತುಬಿದ್ದಿರುವ ಕಾಲುಗಳು, ಬಹಳ ಹೊತ್ತು ಬಾಯಿ ತೆರೆದುಕೊಂಡಿರುವುದರಿಂದ ನೋಯುತ್ತಿರುವ ದವಡೆ, ಕೆಟ್ಟ ಆ್ಯಂಗಲ್‌ನಲ್ಲಿ ತಿರುಚಿ ಹಿಡಿದಿದ್ದರಿಂದ ಉರಿಯುತ್ತಿರುವ ಕತ್ತು. ಒಟ್ಟಾರೆ ಫುಲ್ ಸುಸ್ತು.
ವಯಸ್ಕರ ಸಿನೆಮಾ ನಟಿಯರಿಗೆ ಅನಾಯಾಸವಾಗಿ ದುಡ್ಡು ಸಿಗುತ್ತದೆ ಎಂದೇ ಬಹಳ ಜನ ಯೋಚಿಸುತ್ತಾರೆ. ಆದರೆ, ಈ ಕೆಲಸಕ್ಕೂ ಅಥ್ಲೀಟ್‌ಗಳಂತೆ ಮೈಯಲ್ಲಿ ಸ್ಟ್ಯಾಮಿನಾ ಬೇಕು. ನೀಲಿ ಚಿತ್ರಗಳನ್ನು ಇಷ್ಟಪಡುವವರಿಗೆ ಅಥವಾ ಬೈಯುವವರಿಗೆ ಅವರದೇ ಕಾರಣಗಳಿರಬಹುದು. ಆದರೆ ನಮ್ಮ ಕೆಲಸದ ಬಗ್ಗೆ ಮಾತ್ರ ಎಲ್ಲರೂ ತಪ್ಪಾಗಿಯೇ ತಿಳಿದುಕೊಂಡಿರುತ್ತಾರೆಂದು ನನ್ನ ಭಾವನೆ. ನೆನಪಿಡಿ, ನೀಲಿ ಚಿತ್ರಗಳನ್ನು ಶೂಟ್ ಮಾಡುವಾಗ ನೋಡುಗರನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಶೂಟ್‌ಮಾಡಿರುತ್ತಾರೆ. ಅದರಲ್ಲಿ ನಟಿಸುವ ನಾವು ನೆಪ ಮಾತ್ರ. ನಮಗೆ ಇಷ್ಟಆಗುತ್ತದೆಯೋ ಕಷ್ಟವಾಗುತ್ತದೆಯೋ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಉರಿ ಬೇಸಿಗೆಯ ಮಟ ಮಧ್ಯಾಹ್ನ ಶೂಟ್ ಮಾಡುತ್ತಿದ್ದರೂ ಅಲ್ಲಿ ಏರ್‌ಕಂಡೀಶನರ್ ಇರುವುದಿಲ್ಲ. ಸೆಕೆಯಿಂದ ನಮಗೆ ಬೆವರು ಕಿತ್ತುಕೊಂಡು ಬರುತ್ತಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಡೈರೆಕ್ಟರ್‌ಗಳೂ ಅದು ಬಹಳ ಗ್ಲಾಮರಸ್ ಎಂದೇ ಭಾವಿಸುತ್ತಾರೆ!
ಆರಂಭ ಸುಲಭ, ಆಮೇಲೆ ಕಷ್ಟ
ವಯಸ್ಕರ ಸಿನೆಮಾದ ನಟಿಯರಿಗೆ ಆರಂಭದಲ್ಲಿ ಬಹಳ ಸುಲಭದ ಸೀನ್‌ಗಳನ್ನು ನೀಡುತ್ತಾರೆ. ನಾನು ಈ ಇಂಡಸ್ಟ್ರಿಗೆ ಕಾಲಿಟ್ಟ ಹೊಸತರಲ್ಲಿ ನನಗೆ ಸಿಗುತ್ತಿದ್ದ ಸೀನ್‌ಗಳು ಕೂಡ ಸುಲಭದವೇ ಆಗಿದ್ದವು. ನಾನು ಹೇಳುತ್ತಿರುವುದು 2000ನೇ ಇಸ್ವಿಯ ಕತೆ. ಆಗಷ್ಟೇ ಪೋರ್ನ್ ನಟಿಯಾಗಿ ಉದ್ದಿಮೆಗೆ ಕಾಲಿಟ್ಟಿದ್ದೆ. ಸುಲಭದ ಸೀನ್, ಸುಲಭವಾಗಿ ಹಣ. ಅನುಭವಿ ಯುವಕನೊಂದಿಗೆ ಏನೂ ಗೊತ್ತಿಲ್ಲದ ಮುಗ್ಧ ಹುಡುಗಿಯಂತೆ ನಾನು ಅಚ್ಚರಿಯಿಂದ ನಟಿಸಬೇಕಿತ್ತು. ಸಾಮಾನ್ಯ ಸೆಕ್ಸ್. ಸಾಹಸವೇನೂ ಇಲ್ಲ. ಹೊಸ ಮಾಂಸ ಚೆನ್ನಾಗಿ ಮಾರಾಟಆಗುತ್ತದೆ. ಕಷ್ಟದ ಕಾಲ ಬರುವುದು ಆಮೇಲೆ.
ಕಾಲ ಕಳೆದಂತೆ 'ಹೊಸ ಹುಡುಗಿ' ದೃಶ್ಯಗಳು ನೋಡುಗರಿಗೆ ಬೋರು ಹೊಡೆಸತೊಡಗುತ್ತವೆ. ಎಷ್ಟು ಸಿನೆಮಾಗಳಲ್ಲಿ ಇನ್ನೂ 'ಹೊಸ ಹುಡುಗಿ' ಅಂತಲೇ ನಮ್ಮನ್ನು ತೋರಿಸಲು ಸಾಧ್ಯ? ರೆಗ್ಯುಲರ್ ಸೆಕ್ಸ್‌ಗಿಂತ ನೋಡುಗರಿಗೀಗ ವಿಶೇಷವಾದ ದೃಶ್ಯಗಳು ಬೇಕೆನ್ನಿಸುತ್ತವೆ. ಅದನ್ನು ತಮ್ಮಿಂದ ಮಾಡಲು ಸಾಧ್ಯವಿಲ್ಲವಾದರೂ ನೋಡುವುದು ಮಾತ್ರ ಅವರಿಗೆ ಬಹಳ ಇಷ್ಟ! ಕಳೆದ ದಶಕದಲ್ಲಿ ಈ ಸ್ಥಿತಿ ಬದಲಾಯಿತು. ನಾವು ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಆರಂಭದಲ್ಲಿ ಸುಲಭದ ದೃಶ್ಯಗಳಲ್ಲಿ ಮಾತ್ರ ನಟಿಸಿದರೆ ಸಾಕಿತ್ತು ಎಂದು ಹೇಳಿದೆನಲ್ಲ. ನಿಧಾನವಾಗಿ ಅನುಭವವಾದಂತೆ 'ಅತಿ' ಎನ್ನಿಸುವ ದೃಶ್ಯಗಳನ್ನು ಶೂಟ್ ಮಾಡುತ್ತಿದ್ದರು. ಆದರೆ ಈಗ 2013ರಲ್ಲಿ ಅಮೆರಿಕದ ಪೋರ್ನ್ ಇಂಡಸ್ಟ್ರಿಗೆ ಬರುವ ಹುಡುಗಿಯರಿಗೆ ಬಹಳ ಕಷ್ಟವಿದೆ. ಬರುಬರುತ್ತಲೇ ಅವರು ಬಹಳ ಕಷ್ಟದ ಆ್ಯಂಗಲ್‌ಗಳಲ್ಲಿ ನಟಿಸಬೇಕಾಗುತ್ತದೆ. ಏಕೆಂದರೆ ಇಂತಹ ದೃಶ್ಯಗಳಲ್ಲಿ ಸುಲಭವಾಗಿ ನಟಿಸುವ ಹಳೆ ಪೋರ್ನ್ ನಟಿಯರ ದಂಡೇ ಇಲ್ಲಿದೆ. ಹಾಗಾಗಿ ಹೊಸಬರು ಉಳಿಯಬೇಕು ಎಂದಾದರೆ ಆರಂಭದಲ್ಲೇ ಸಂಪೂರ್ಣ ಮೈಚಳಿ ಬಿಡಬೇಕು.
ನಾನು ಕೂಡ ಈಗ ಹಳೆಯ ನಟಿಯರ ಸಾಲಿಗೇ ಸೇರುತ್ತೇನೆ. ಎಂತಹ ದೃಶ್ಯಗಳಲ್ಲಿ ಬೇಕಾದರೂ ನಟಿಸಬಲ್ಲೆ. ಪ್ರಾಣಿಗಳ ಮಾದರಿಯ ಸೆಕ್ಸ್ ಸೀನ್‌ಗಳಲ್ಲಿ ಕೂಡ ನಗುತ್ತ ನಟಿಸುತ್ತೇನೆ. ನಂತರ ಮನೆಗೆ ಹೋಗಲೂ ತ್ರಾಣವಿರುವುದಿಲ್ಲ. ಈ ಇಂಡಸ್ಟ್ರಿಯಲ್ಲಿ ಅಪಾಯ ಇದ್ದೇ ಇದೆ. ನಾವು ನಮ್ಮ ದೇಹಕ್ಕೆ ಮಾಡಿಕೊಳ್ಳುವ ಹಾನಿಯನ್ನು ಸರಿಪಡಿಸಿಕೊಳ್ಳಲು ಬಹಳ ವರ್ಷ ಹಿಡಿಯುತ್ತದೆ.
ಗಾಯವಾದರೂ ಡೈರೆಕ್ಟರ್ ಬಿಡೋದಿಲ್ಲ
ಅಥ್ಲೀಟ್‌ಗಳಂತೆ ನೀಲಿ ಚಿತ್ರಗಳನಟಿಯರಿಗೂ ಆಂತರಿಕ ಗಾಯಗಳಾಗುವ ಸಾಧ್ಯತೆ ಹೆಚ್ಚು. ಸಿನೆಮಾ ಸೆಟ್‌ನಲ್ಲಿ ಏನಾದರೂ ಎಡವಟ್ಟಾದರೆ ಅದನ್ನು ಅನುಭವಿಸಲೇಬೇಕು. ಅಂತಹ ಗಾಯಗಳು ಅನಿರೀಕ್ಷಿತವಾಗಿ ಆಗುತ್ತವೆ. ಎಷ್ಟೇ ವ್ಯಾಯಾಮ ಮಾಡಿ ಹೇಗೆ ಬೇಕಾದರೂ ಮೈ ಬಗ್ಗಿಸಲು ಕಲಿತಿದ್ದರೂ ಎಡವಟ್ಟಾಗುತ್ತದೆ. ಉತ್ಸಾಹದ ಭರದಲ್ಲಿ ಹುಡುಗರು ಒಮ್ಮೊಮ್ಮೆ ಏನು ಮಾಡುತ್ತಾರೆಂದು ಹೇಳಲಾಗುವುದಿಲ್ಲ. ಆದರೆ ದುರಂತ ಏನೆಂದರೆ, ಇಂತಹ ಗಾಯದ ಬಗ್ಗೆ ಸೆಟ್‌ನಲ್ಲಿ ಯಾರೂ ಮಾತಾಡುವುದೇ ಇಲ್ಲ. ಹಾಗಂತ ನಮಗೇನೂ ಪದೇಪದೇ ಗಾಯಗಳು ಆಗುವುದಿಲ್ಲ. ಆದರೆ ಎಲ್ಲಾ ನಟಿಯರೂ, ನನ್ನನ್ನೂ ಸೇರಿಸಿಕೊಂಡಂತೆ, ಸುಮಾರು ಸಲ ಗಾಯ ಮಾಡಿಕೊಂಡಿದ್ದೇವೆ. ನನಗೆ ಮೊದಲ ಸಲ ಗಾಯವಾಗಿದ್ದು ಒಬ್ಬ ಒರಟನ ಜೊತೆ ನಟಿಸುವಾಗ. ಅವನಿಗೆ ನನ್ನ ದೇಹದ ಬಗ್ಗೆ ಕಿಂಚಿತ್ತೂ ಗೌರವವಿರಲಿಲ್ಲ. ಗೊಂಬೆಯ ಮೇಲೆ ಬಿದ್ದಂತೆ ನನ್ನ ಮೇಲೆ ಅಪ್ಪಳಿಸಿ ಬಿದ್ದ. ಚರ್ಮ ಕಿತ್ತುಬಂದ ಅನುಭವವಾಯಿತು. ಆದರೆ ಶೂಟಿಂಗ್ ನಿಲ್ಲಿಸಲು ಡೈರೆಕ್ಟರ್ ಒಪ್ಪಲಿಲ್ಲ. ಇನ್ನಷ್ಟು ಲ್ಯೂಬ್ರಿಕೆಂಟ್ ಬಳಸಿ ಮುಂದುವರಿಸಲು ಹೇಳಿದರು. ಅಂತಹ ದಿನಗಳಲ್ಲಿ ನನ್ನ ನೆರವಿಗೆ ಬಂದಿದ್ದು ಪೇನ್‌ಕಿಲ್ಲರ್‌ಗಳು. ಯಾಕಾದರೂ ಈ ಇಂಡಸ್ಟ್ರಿಗೆ ಬಂದೆನೋ ಅನ್ನಿಸುತ್ತಿತ್ತು. ಆದರೆ ಶೋ ನಿಲ್ಲುವಂತಿಲ್ಲ. ನಿಂತರೆ ಯಾರಿಗೂ ಹಣ ಸಿಗುವುದಿಲ್ಲ.
ಎಮಿ ಬ್ರೂಕ್ ನನಗಿಂತ ಬಹಳ ತಡವಾಗಿ ಈ ಇಂಡಸ್ಟ್ರಿಗೆ ಬಂದಳು. ಆದರೆ ತುಂಬಾ ಬೇಗ ದೊಡ್ಡ ಹೆಸರು ಮಾಡಿದಳು. ಅವಳು ಬಂದಿದ್ದು 2009ರಲ್ಲಿ. ಈಗಾಗಲೇ 'ಮೋಸ್ಟ್ ಔಟ್‌ರೇಜಿಯಸ್ ಸೆಕ್ಸ್ ಸೀನ್' ಪ್ರಶಸ್ತಿ ಪಡೆದಿದ್ದಾಳೆ. ನಾಲ್ಕು ವರ್ಷದಲ್ಲಿ ಸುಮಾರು 200 ಸೆಕ್ಸ್ ಸಿನೆಮಾದಲ್ಲಿ ನಟಿಸಿದ್ದಾಳೆ. ನೋಡುಗರ ಮನರಂಜಿಸಲು ಏನು ಮಾಡಬೇಕು ಎಂಬುದು ಅವಳಿಗೆ ಚೆನ್ನಾಗಿ ಗೊತ್ತು. 'ಪ್ರತಿ ದಿನ ಇದನ್ನೇ ಮಾಡುತ್ತ ಹೋದರೆ ನಿಮ್ಮ ದೇಹ ಒಪ್ಪುವುದಿಲ್ಲ. ಮೂಳೆ ಮುರಿಯಬಹುದು ಅಥವಾ ದೇಹದ ಸ್ವಾಧೀನವೇ ಕಳೆದುಹೋಗಬಹುದು' ಎಂದು ಪ್ರಶಸ್ತಿ ಸ್ವೀಕರಿಸುವಾಗ ಅವಳು ಹೇಳಿದ್ದಳು. ಕಷ್ಟದ ಸೀನ್‌ಗಳಲ್ಲೇ ಯಾವಾಗಲೂ ನಟಿಸುತ್ತ ಹೋದರೆ ನಮ್ಮ ದೇಹ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಬಹಳ ಬೇಗ ನಟನೆ ನಿಲ್ಲಿಸಬೇಕಾಗುತ್ತದೆ. ಸೂಕ್ಷ್ಮ ಮಾಂಸಖಂಡಗಳು ಸಂವೇದನೆ ಕಳೆದುಕೊಳ್ಳುತ್ತವೆ. ಆಗ ಮುಖದಲ್ಲಿ ನೈಜ ಭಾವನೆ ಬರುವುದಿಲ್ಲ. ಈ ಇಂಡಸ್ಟ್ರಿಯಲ್ಲಿ ಹುಡುಗಿಯೊಬ್ಬಳು ಪ್ರತಿದಿನ ನಟಿಸಲು ಸಾಧ್ಯವಿಲ್ಲ. ಅವಳಿಗೆ 'ರಿಕವರಿ' ಸಮಯ ಬೇಕಾಗುತ್ತದೆ. ಅದೃಷ್ಟವಶಾತ್ ಇಲ್ಲಿಯವರೆಗೆ ನನಗೆ ದೊಡ್ಡ ಗಾಯಗಳೇನೂ ಆಗಿಲ್ಲ. ಆದರೆ ಹಾಗೆ ಗಾಯ ಮಾಡಿಕೊಂಡು ನಟನೆಯನ್ನೇ ಬಿಟ್ಟವರ ಪರಿಚಯ ನನಗಿದೆ. ಈ ಕೆಲಸದಲ್ಲಿ ಬಹಳ ಅಪಾಯವೂ ಇದೆ, ಅಷ್ಟೇ ದುಡ್ಡೂ ಇದೆ. ಸಾಮಾನ್ಯ ಸೆಕ್ಸ್ ಸೀನ್‌ಗಳಲ್ಲಿ ನಟಿಸುವ ನಟಿಯರಿಗೆ ಸಿಗುವುದಕ್ಕಿಂತ 'ಏನು ಬೇಕಾದರೂ ಮಾಡಲು' ಸಿದ್ಧರಿರುವ ನಟಿಯರಿಗೆ ದುಪ್ಪಟ್ಟು ಹಣ ಸಿಗುತ್ತದೆ.
ಗಂಡಸರಿಗೆ ನಮಗಿಂತ ಕಷ್ಟ!
ಹುಡುಗಿಯರು ಮಾತ್ರ ಇಲ್ಲಿ ಕಷ್ಟಪಡುತ್ತಾರೆ ಎಂದಲ್ಲ. ಗಂಡಸರಿಗೂ ಇದು ಸುಲಭದ ಕೆಲಸವೇನಲ್ಲ. ಆದರೆ ಅವರು ಗಾಯಗೊಳ್ಳುವ ಚಾನ್ಸ್ ಕಡಿಮೆ. ಒಮ್ಮೊಮ್ಮೆ ತಮ್ಮ ಕೆಲಸ ಮಾಡಲು ಸಾಧ್ಯವಾಗದೆ ಸೆಟ್‌ನಲ್ಲಿ ಅವಮಾನ ಅನುಭವಿಸುತ್ತಾರೆ. ಅದಕ್ಕಾಗಿಯೇ ಇಡೀ ದಿನ ಶೂಟಿಂಗ್ ಮಾಡಬೇಕಾಗುತ್ತದೆ. ಎಲ್ಲಾ ಗಂಡಸರೂ ಸೆಟ್‌ನಲ್ಲಿ ತಮ್ಮ ಜೊತೆ ನಟಿಸುವ ನಟಿಯರಿಂದ ಆಕರ್ಷಿತರಾಗುವುದಿಲ್ಲ. ಸಿನೆಮಾದಲ್ಲಿ ತೋರಿಸುವಂತೆ ಅವರು ನಿರಂತರವಾಗಿ ತಾಸುಗಟ್ಟಲೆ ಸೆಕ್ಸ್ ನಡೆಸಲು ಸಾಧ್ಯವಿಲ್ಲ. ಅದೂ ಅಷ್ಟೆಲ್ಲಾ ಜನರ ಮುಂದೆ. ಹೆಚ್ಚಿನ ಸಲ ಅವರು ಎಷ್ಟು ಹೊತ್ತು ನಟಿಸುತ್ತಾರೋ ಅದಕ್ಕಿಂತ ಹೆಚ್ಚು ಸಮಯ ಅವರು ಸಿದ್ಧವಾಗಲು ಹಿಡಿದಿರುತ್ತದೆ. ಅವರನ್ನು ಉದ್ರೇಕಗೊಳಿಸಲು ಸೆಟ್‌ನಲ್ಲಿ ಬೇರೆ ಹುಡುಗಿಯರಿರುತ್ತಾರೆ ಎಂಬುದೆಲ್ಲ ಸುಳ್ಳು. ಆದರೂ ಕೆಲವರು ತಮ್ಮ ಲವ್ವರ್‌ಗಳನ್ನು ಸೆಟ್‌ಗೆ ಕರೆದುಕೊಂಡು ಬಂದಿರುತ್ತಾರೆ. ಅವರೇ ಇವರನ್ನು ಶೂಟಿಂಗ್‌ಗೆ ಸಿದ್ಧಮಾಡುತ್ತಾರೆ. ತಾನು ವಿಫಲಗೊಳ್ಳುವುದನ್ನು ಇಡೀ ಸೆಟ್‌ನ ಜನ ನೋಡುತ್ತಾರೆ ಎಂಬ ಕೀಳರಿಮೆಯೇ ಬ್ಲೂಫಿಲಂ ನಟರ ಕೆಲಸವನ್ನು ಕೆಲವೊಮ್ಮೆ ಇನ್ನಷ್ಟು ಕಷ್ಟಗೊಳಿಸುತ್ತದೆ. ನಿಮಗಿದು ತಮಾಷೆ ಅನ್ನಿಸಬಹುದು, ಬ್ಲೂಫಿಲಂ ಹೀರೋಗಳು ಸೆಕ್ಸ್ ನಡೆಸುವುದಕ್ಕಿಂತ ದುಪ್ಪಟ್ಟು ಹೊತ್ತು ಸೆಕ್ಸ್ ನಡೆಸುವ ಕ್ಯಾಮೆರಾಮನ್‌ಗಳನ್ನು ನಾನು ನೋಡಿದ್ದೇನೆ. ಅವರು, ನಟರು 'ಸೋಲುವುದನ್ನೇ' ಕಾಯುತ್ತಿರುತ್ತಾರೆ! 1998ರಲ್ಲಿ ವಯಾಗ್ರಾ ಬಂದ ನಂತರ ಈ ಸಮಸ್ಯೆಯಿಲ್ಲ. ಹೆಚ್ಚಿನವರು ಇದನ್ನು ಒಪ್ಪಿಕೊಳ್ಳುವುದಿಲ್ಲವಾದರೂ ಬ್ಲೂಫಿಲಂನಲ್ಲಿ ನಟಿಸುವ ಬಹುತೇಕ ಗಂಡಸರು ಇವುಗಳನ್ನು ಬಳಸುತ್ತಾರೆ. ವಯಾಗ್ರಾ ಈಗ ಇಂಡಸ್ಟ್ರಿಯ ಅವಿಭಾಜ್ಯ ಅಂಗವೇ ಆಗಿದೆ.
ಸದಾ ರೋಗಗಳದೇ ಭಯ
ಅಮೆರಿಕದ ನೀಲಿಚಿತ್ರದ ಉದ್ದಿಮೆಯಲ್ಲಿ ನಟಿ ಕ್ರಿಸ್ಟಿನಾ ರೋಸ್‌ಳದು ದೊಡ್ಡ ಹೆಸರು. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. 'ಈ ಕೆಲಸ ಒಂದರ್ಥದಲ್ಲಿ ಬಹಳ ಸುಲಭ. ಬೆಳಗ್ಗೆ ಆರಕ್ಕೆ ಏಳಬೇಕಿಲ್ಲ. ಗಡಿಬಿಡಿಯಲ್ಲಿ ತಯರಾಗಿ ಕೆಲಸಕ್ಕೆ ಓಡಬೇಕಿಲ್ಲ. ವಾರದಲ್ಲಿ ಎರಡು-ಮೂರು ದಿನ ರಜೆ ತೆಗೆದುಕೊಳ್ಳಬಹುದು. ಆದರೆ ಪೋರ್ನ್ ನನ್ನ ಬದುಕಿನ ಎಲ್ಲ ಸಂಗತಿಗಳ ಮೇಲೂ ಪರಿಣಾಮ ಬೀರುತ್ತದೆ. ನೀವು ಯೋಚಿಸುವುದಕ್ಕಿಂತ ಇದು ಕಷ್ಟದ ಕೆಲಸ. ಲೈಂಗಿಕ ರೋಗಗಳ ಬಗ್ಗೆ ಗಮನ ಹರಿಸುತ್ತಿರಬೇಕು. ಎಲ್ಲಾ ರೀತಿಯ ಜನರ ಜೊತೆ ವ್ಯವಹರಿಸಬೇಕು. ನಿಮ್ಮ ಖಾಸಗಿ ಜೀವನದ ಮೇಲೂ ಇದು ಬಹಳ ಪರಿಣಾಮ ಬೀರುತ್ತದೆ' ಎನ್ನುತ್ತಾಳೆ ಆಕೆ. ಈ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರಿಗೆ ಲೈಂಗಿಕವಾಗಿ ಹರಡುವ ರೋಗಗಳು ಬರದಂತೆ ನೋಡಿಕೊಳ್ಳುವ, ಬಂದರೆ ಅವರು ಇನ್ನುಮುಂದೆ ನಟಿಸದಂತೆ ನೋಡಿಕೊಳ್ಳುವ ವ್ಯವಸ್ಥೆಯೇನೋ ಇದೆ. ಆದರೆ ಇದು ನಟ-ನಟಿಯರನ್ನು ಸದಾಕಾಲ ಕಾಡುವ ದೊಡ್ಡ ಆತಂಕವಂತೂ ಹೌದು.
ನಮಗೆಷ್ಟು ದುಡ್ಡು ಸಿಗುತ್ತದೆ?
ಪೋರ್ನ್‌ನಲ್ಲಿ ಹಣ ಚೆನ್ನಾಗಿದೆ ನಿಜ. ಆದರೆ ಅದ್ಭುತ ಎಂಬಷ್ಟೇನೂ ಹಣ ಬರುವುದಿಲ್ಲ. ಮುಖ್ಯವಾಹಿನಿಯ ಸಿನೆಮಾಗಳಲ್ಲಿ ನಟಿಸುವ ನಟ-ನಟಿಯರಿಗೆ ಸಿಗುವಷ್ಟು ಹಣ ಇಲ್ಲಿ ಸಿಗುವುದಿಲ್ಲ. ಪ್ರೊಫೆಷನಲ್ ಅಥ್ಲೀಟ್‌ಗಳಿಗೆ ಗಾಯವಾದರೆ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ನಮಗೆ ಗಾಯವಾದರೆ ಅದರ ಚಿಕಿತ್ಸೆಗೆ ಎಕ್ಸ್‌ಟ್ರಾ ಹಣವೇನೂ ಸಿಗುವುದಿಲ್ಲ. ಪೋರ್ನ್ ನಟರಿಗೆ ಒಂದು ಸೀನ್‌ಗೆ ಇಷ್ಟು ಎಂದು ಹಣ ಸಿಗುತ್ತದೆ. ಒಂದು ಸಿನೆಮಾಕ್ಕಿಷ್ಟು, ಗಂಟೆಗಿಷ್ಟು ಎಂದು ಸಂಬಳ ಸಿಗುವುದಿಲ್ಲ. ಓವರ್ ಟೈಮ್ ಕೆಲಸ ಮಾಡಿದರೆ ಅದಕ್ಕೇನೂ ಪ್ರತ್ಯೇಕ ಹಣವಿಲ್ಲ. ಒಂದು ಸೀನ್ ಶೂಟ್‌ಮಾಡಲು ಮೂರು ತಾಸು ಹಿಡಿದರೂ ಅಷ್ಟೇ ಹಣ, ಐದು ತಾಸು ಹಿಡಿದರೂ ಅಷ್ಟೇ ಹಣ. ಕೆಲಸವಿಲ್ಲದೆ ಕುಳಿತಾಗ ನಿರುದ್ಯೋಗ ಭತ್ಯೆಯಾಗಲೀ, ಕಾರ್ಮಿಕರ ರಜಾ ಭತ್ಯೆಯಾಗಲೀ ಸಿಗುವುದಿಲ್ಲ. ಸಿನೆಮಾ ಪ್ರೊಡ್ಯೂಸರ್‌ಗಳು ಆರೋಗ್ಯ ಭತ್ಯೆ ಕೊಡುವುದಿಲ್ಲ. ನಿವೃತ್ತಿ ವೇತನ ಮೊದಲೇ ಇಲ್ಲ. ನಾವು ಒಪ್ಪಂದದ ಆಧಾರದಲ್ಲಿ ಕೆಲಸ ಮಾಡುತ್ತೇವೆ. ಅದರರ್ಥ, ನಮಗೇನಾದರೂ ಆದರೆ ಅದರ ಜವಾಬ್ದಾರಿ ನಮ್ಮದೇ.
ನೋಡುವವರ ಕಣ್ಣಿಗೆ ಪೋರ್ನ್ ನಟ-ನಟಿಯರ ಕೆಲಸ ಬಹಳ ಮಜವಾಗಿ ಕಾಣಿಸಬಹುದು. ಆದರೆ ಇದರಲ್ಲಿ ನಟಿಸುವವರು ತಮ್ಮ ಜೀವಮಾನವಿಡೀ ಕಳಂಕ ಹೊತ್ತು ಬದುಕಬೇಕು. ಒಮ್ಮೆ ಪೋರ್ನ್ ನಟಿಯಾಗಿ ಕೆಲಸ ಮಾಡಿದ ಮೇಲೆ ಬೇರೆ ಕೆಲಸ ಸಿಗುವುದು ಕಷ್ಟ.
ಆದರೂ ಈ ಕೆಲಸದಲ್ಲಿ ಕೆಲವು ವಿಶಿಷ್ಟ ಅನುಭವಗಳಾಗುತ್ತವೆ. ನಮ್ಮ ಅನುಭವಕ್ಕಿಂತ ನೋಡುಗರ ಅನುಭವ ದೊಡ್ಡದು. ಎಲ್ಲರೂ ಮಜಕ್ಕೆಂದೇ ನಮ್ಮನ್ನು ನೋಡುವುದಿಲ್ಲ. ಕೆಲವರು ಲೈಂಗಿಕತೆಯ ಅನುಭವ ಗಳಿಸಲು ನೋಡಬಹುದು. ಇನ್ನು ಕೆಲವರು ಉದ್ರೇಕಗೊಳ್ಳಲು ನೋಡಬಹುದು. ನಾವು ಕೆಲವರ ಲೈಂಗಿಕ ಬದುಕನ್ನಾದರೂ ಕಾಪಾಡಿರುತ್ತೇವೆ. ಹೆಂಡತಿಯಿಂದ ಬಹಳ ಕಾಲ ದೂರ ಇರುವ ಸೈನಿಕರು ನಮ್ಮನ್ನು ನೋಡಿ ತಮ್ಮ ಒಳ ಬಯಕೆ ತಣಿಸಿಕೊಳ್ಳಬಹುದು.
ಸೆಕ್ಸ್ ಕೇವಲ ಪೋರ್ನ್ ಸಿನೆಮಾಗಳನ್ನು ಮಾತ್ರ ಮಾರಾಟ ಮಾಡುವುದಿಲ್ಲ. ಮುಖ್ಯವಾಹಿನಿಯ ಸಿನೆಮಾಗಳು ಓಡುವುದಕ್ಕೂ ಅದು ಬೇಕು. ಜಾಹೀರಾತಿನಿಂದ ಹಿಡಿದು ಟೀವಿ ಕಾರ್ಯಕ್ರಮದವರೆಗೆ ಸೆಕ್ಸ್ ತುಂಬಿಕೊಂಡಿದೆ. ಹಾಗಾಗಿ ನಮ್ಮ ಸಂಸ್ಕೃತಿಯಲ್ಲೇ ವಯಸ್ಕರ ಚಿತ್ರೋದ್ಯಮ ಸೇರಿಕೊಂಡಿದೆ. ನೀವು ಇಂತಹ ಸಿನೆಮಾ ನೋಡುತ್ತೀರೋ ಇಲ್ಲವೋ, ಆದರೆ ಇದಕ್ಕಾಗಿ ನಾವು ಪಡುವ ಶ್ರಮದ ಬಗ್ಗೆ ಒಮ್ಮೆಯಾದರೂ ಯೋಚಿಸಿ. ನೀವಂದುಕೊಂಡಂತೆ ಮೋಜು ಮಾಡಿ ದುಡ್ಡು ಗಳಿಸುವವರು ನಾವಲ್ಲ.
ಜೀವನವೊಂದು ತೂಗುಯ್ಯಾಲೆ ನಾನು ವಯಸ್ಕರ ಚಿತ್ರದ ಹೀರೋಯಿನ್ ಆಗಿದ್ದು ಹೇಗೆ?
ನನಗಾಗ 18 ವರ್ಷ. ನೀಲಿ ಚಿತ್ರೋದ್ಯಮದ ಭಾಷೆಯಲ್ಲಿ ಈ ವಯಸ್ಸನ್ನು 'ಬೇರ್‌ಲಿ ಲೀಗಲ್' ಎನ್ನುತ್ತಾರೆ. ಅಂದರೆ ಈಗಷ್ಟೇ ಇಂತಹ ಸಿನೆಮಾಕ್ಕೆ ಅರ್ಹತೆ ಗಳಿಸಿದವರು ಎಂದರ್ಥ. ಆಗ ಕಾಲೇಜಿನ ಮೊದಲ ವರ್ಷದಲ್ಲಿದ್ದೆ. ಮೈಮೇಲೆ ಸಾಲವಿತ್ತು. ಫೀಸು ಕಟ್ಟಲು ಮಾಡಿದ್ದ ಸಾಲ. ಅದನ್ನು ತೀರಿಸಲು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಕೊಡುವ ಕೆಲಸ ಹುಡುಕುತ್ತಿದ್ದೆ. ನ್ಯೂಸ್ ಪೇಪರಿನ ಕ್ಲಾಸಿಫೈಡ್‌ನಲ್ಲಿ ಒಂದು ಜಾಹೀರಾತು ಕಣ್ಣಿಗೆ ಬಿತ್ತು. 'ಹುಡುಗಿಯರೇ, ದಿನಕ್ಕೆ 2000 ಡಾಲರ್ ಸಂಪಾದಿಸಿ!' ಅದರ ಕೆಳಗೆ ಸಣ್ಣ ಅಕ್ಷರದಲ್ಲಿ 'ನ್ಯೂಡ್ ಮಾಡೆಲಿಂಗ್' ಎಂದು
ಬರೆದಿತ್ತು. ಜೊತೆಗೆ ಫೋನ್ ನಂಬರ್ ಇತ್ತು. ನಾನು ಜಿಮ್ ಸೌತ್ ಆಫೀಸಿಗೆ ಬಂದಿದ್ದು ಹೀಗೆ. ಅಲ್ಲಿ ಅಪ್ರಾಪ್ತ ಹುಡುಗಿಯರೂ ಇದ್ದರು.
ನೀಲಿ ಚಿತ್ರೋದ್ಯಮದಲ್ಲಿ ನನ್ನ ಕೆಲಸ ಆರಂಭವಾಗಿದ್ದು ಕೆಲ ಫೋಟೋ ಶೂಟ್‌ಗಳ ಮೂಲಕ. ನನ್ನ ಗುರಿಯಿದ್ದಿದ್ದು ಒಂದು ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟು ದುಡ್ಡು ಮಾಡಿ ಅಲ್ಲಿಂದ ಓಡುವುದು ಮತ್ತು ಯಾವತ್ತೂ ಹಿಂತಿರುಗಿ ನೋಡದಿರುವುದು. ಹಾಗಾಗಿ ಅಲ್ಲಿಗೆ ಬಂದ ಒಂದೇ ವಾರದಲ್ಲಿ ವಿಡಿಯೋ ಶೂಟ್ ಕೂಡ ಮಾಡಲು ಶುರುಮಾಡಿದೆ.
ನೋಡುಗರಿಗೆ 'ಮೊದಲ ಸೀನ್' ಟೋಪಿ!
ಒಂದು ದಿನ ಸೆಟ್‌ಗೆ ಬಂದಾಗ ನೀನಿವತ್ತು ಸ್ಪೆಷಲ್ ವಿಡಿಯೋ ಶೂಟ್ ಮಾಡಬೇಕು ಅಂದರು. ಒಪ್ಪಿಕೊಂಡೆ. ಆ ಶೂಟಿಂಗ್ ಶುರುವಾಗುವುದಕ್ಕೆ ಒಂದು ತಾಸು ಮೊದಲು ಎಡ್ ಪವರ್ಸ್ ಕಂಪನಿಯಿಂದ ಫೋನ್ ಬಂತು. ಅನುಭವವಿಲ್ಲದ ಹುಡುಗಿಯರು ಮೊದಲ ಬಾರಿ ಸೆಕ್ಸ್ ಸಿನೆಮಾದಲ್ಲಿ ನಟಿಸುವಾಗ ಹೇಗೆ ಚೆಲ್ಲುಚೆಲ್ಲಾಗಿ ಆಡುತ್ತಾರೆ ಎಂಬುದನ್ನು ಶೂಟ್ ಮಾಡುವುದಕ್ಕೇ ಪ್ರಸಿದ್ಧಿ ಪಡೆದ ಕಂಪನಿಯದು. ನನ್ನ ಮೊದಲ ಸೀನ್ ಶೂಟ್ ಮಾಡುವುದಕ್ಕೆ ನಂಬಲಾಗದಷ್ಟು ಹಣ ಕೊಡುತ್ತೇನೆ ಅಂದರು. ಕೂಡಲೇ ಅಲ್ಲಿಗೆ ಹೋದೆ. ಅಲ್ಲಿ ನನ್ನ ಮೊದಲ ಸೀನ್ ಶೂಟಿಂಗ್ ಮುಗಿಸಿ, ನಂತರ ನಿಜವಾಗಿಯೂ ನನಗೆ ಕೆಲಸ ಕೊಟ್ಟ ಕಂಪನಿಗೆ ವಾಪಸ್ ಬಂದೆ. ಅಲ್ಲೂ 'ಮೊದಲ ಸೀನ್' ಶೂಟಿಂಗ್ ನಡೆಯಿತು! ಆಮೇಲೆ ಅಮೆಚೂರ್ ಹುಡುಗಿಯ ಮೊದಲ ಸೀನ್ ಎಂಬ ಹೆಸರಿನಲ್ಲಿ ಇನ್ನೂ ಹಲವು ಸೀನ್‌ಗಳ ಶೂಟಿಂಗ್ ನಡೆಯಿತು!
ಮೊದಲ ದಿನ ಎರಡು ಸೀನ್‌ಗಳು. ನಾನು ಪೋರ್ನ್ ಉದ್ದಿಮೆಗೆ ಕಾಲಿಟ್ಟಿದ್ದು ಹೀಗೆ. ನಂತರ ವರ್ಷಗಟ್ಟಲೆ ಪ್ರತಿದಿನ ಎರಡು ಸೀನ್‌ಗಳ ಶೂಟಿಂಗ್ ನಡೆಯಿತು.
ಮೊದಲ ಕೆಲವು ವರ್ಷಗಳ ಕಾಲ ನನಗೆ ಬಹಳ ಬೇಡಿಕೆ. ಏಕೆಂದರೆ ನನ್ನದು ಹೊಸ ಮುಖ. ಫ್ರೆಶ್, ಹಾಟ್, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಯಂಗ್. ಪೋರ್ನ್ ಉದ್ದಿಮೆಯಲ್ಲಿ ಕೆಲಸ ಮಾಡುವಾಗ 'ಬೇರ್‌ಲಿ ಲೀಗಲ್' ಎಂಬ ಹಣೆಪಟ್ಟಿಯಿದ್ದರೆ ನೀವಲ್ಲಿ ವಿಐಪಿ ಎಂಬುದನ್ನು ತಿಳಿದುಕೊಂಡೆ. ಡೈರೆಕ್ಟರ್‌ಗಳು ನನ್ನನ್ನು ಹಾಕಿಕೊಳ್ಳಲು ವಿಶೇಷ ಆಸಕ್ತಿ ತೋರುತ್ತಿದ್ದರು. ಪ್ರೊಡ್ಯೂಸರ್‌ಗಳು ನನಗಾಗಿ ಕಾಯತೊಡಗಿದರು. 'ತುಂಟ ಅಪ್ಸರೆ' 'ಅನುಭವಿ ಹುಡುಗಿ' ಮುಂತಾದ ಸರಣಿಯಲ್ಲಿ ನನ್ನನ್ನು ಬಳಸಿಕೊಂಡರು. ಅಪ್ಸರೆಯ ಪಾತ್ರಕ್ಕೆ ಬಹಳ ಬೇಗ ಹೊಂದಿಕೊಂಡೆ. ನನಗೆ ಶಾಲೆ ಹುಡುಗಿಯ ಯೂನಿಫಾರ್ಮ್ ತೊಡಿಸಿ ಎರಡು ಜಡೆ ಹಾಕಿದರು. ಎಷ್ಟು ಸಾಧ್ಯವೋ ಅಷ್ಟು ಚಿಕ್ಕವಳಾಗಿ ಕಾಣಿಸಲು ಏನೆಲ್ಲ ಪ್ರಯತ್ನ ಮಾಡಿದರು. ಒಬ್ಬಳು ನಟಿಯಾಗಿ ನನ್ನ ನಟನೆಯನ್ನು ನಿರೀಕ್ಷೆಗಿಂತ ಹೆಚ್ಚು ಎಂಜಾಯ್ ಮಾಡಿದೆ. ಒಂದು ವರ್ಷದಲ್ಲಿ ಇಂಡಸ್ಟ್ರಿ ಬಿಟ್ಟು ದೂರ ಓಡಬೇಕು ಎಂಬ ಪ್ರತಿಜ್ಞೆಮರೆತುಬಿಟ್ಟೆ!
ನಾಚಿಕೆ ಎನ್ನುವುದು ಓಡಿಹೋಯ್ತು!
ಮೂಲತಃ ನಾನು ನಾಚಿಕೆ ಸ್ವಭಾವದ ಹುಡುಗಿ. ಆದರೆ ನಿಲಿ ಚಿತ್ರೋದ್ಯಮದಲ್ಲಿ ಸ್ಟಾರ್ ಆಗಿಹೋದೆ. ನನ್ನೊಳಗೊಂದು ಸ್ವತಂತ್ರ ಶಕ್ತಿಯಿರುವುದು ಬೆಳಕಿಗೆ ಬಂತು. ಅದನ್ನು ಮನಸಾರೆ ಅನುಭವಿಸಿದೆ. ಅನಿರೀಕ್ಷಿತ ವೃತ್ತಿಬದುಕಿಗೆ ಬಹಳ ಚೆನ್ನಾಗಿ ಹೊಂದಿಕೊಂಡೆ.
ಪೋರ್ನ್ ಉದ್ದಿಮೆಯಲ್ಲಿ ಜೆನ್ನಾ ಜೇಮ್ಸನ್ ಬಹಳ ದೊಡ್ಡ ನಟಿ. ಒಂದು ದಿನ ಹತ್ತು ಹುಡುಗಿಯರ ನಡುವೆ ನಡೆಯುವ ಕಾಮಕೇಳಿಯ ಶೂಟಿಂಗ್ ಇತ್ತು. ಅದರಲ್ಲಿ ಅವಳೇ ರಾಣಿ. ಅದಕ್ಕೂ ಮೊದಲು ಅವಳ ಜೊತೆ ಯಾವತ್ತೂ ನಾನು ದೈಹಿಕ ಸಂಪರ್ಕಕ್ಕೆ ಬಂದಿರಲಿಲ್ಲ. ನಿಜಕ್ಕೂ ಅವಳು ಅದ್ಭುತ ಸುಂದರಿ. ತನ್ನ ಸುತ್ತ ಇರುವವರನ್ನೆಲ್ಲ ಮಿಂಚಿಸಿಬಿಟ್ಟಳು. ಇಡೀ ಸೆಟ್ ಮೇಲೆ ಅವಳು ಪ್ರಭುತ್ವ ಸ್ಥಾಪಿಸಿದ ರೀತಿಯನ್ನು ನೋಡಿದ ಮೇಲೆ ಒಬ್ಬಳು ವಯಸ್ಕರ ಸಿನಿಮಾ ನಟಿ ತನ್ನ ಕೆಲಸದ ಮೇಲೆ ಎಂತಹ ಕಮಾಂಡ್ ಸ್ಥಾಪಿಸಿಕೊಳ್ಳಬಹುದೆಂದು ಅರ್ಥವಾಯಿತು. ನನಗದು ವಿಶೇಷ ಅನುಭವ.
ನೋಡನೋಡುತ್ತ ಮೂರು ವರ್ಷ ಕಳೆದುಹೋಯಿತು. 18ಕ್ಕೆ ಬಂದವಳು ಈಗ 21ರಲ್ಲಿದ್ದೆ. ಹೊಸ ಹುಡುಗಿಯ ಪಾತ್ರದಿಂದ ಅನುಭವಿ ನಟಿಯ ಸ್ಥಾನಕ್ಕೇರಿದ್ದೆ. ನಾನು ಇಂತಹ ಸೀನ್‌ಗಳನ್ನು ಮಾಡಬಲ್ಲೆ ಎಂದು ಮನಸ್ಸಿನಲ್ಲಿ ಕೂಡ ಯೋಚಿಸಿರದಿದ್ದಂತಹ ಸೀನ್‌ಗಳನ್ನು ಮಾಡಿದೆ. ಅನೇಕ ಹುಡುಗರ ಜೊತೆ, ಹುಡುಗಿಯರ ಜೊತೆ, ಎಂತೆಂಥದೋ ಭಂಗಿಗಳಲ್ಲಿ, ಎಂತೆಂಥದೋ ಜಾಗಗಳಲ್ಲಿ ನಟಿಸಿದೆ. ನನಗೂ ಅವುಗಳ ಬಗ್ಗೆ ಕುತೂಹಲವಿತ್ತು. ಈ ವೃತ್ತಿಯಲ್ಲಿ ಏನೇನಿದೆಯೋ ಎಲ್ಲವನ್ನೂ ನೋಡಿಯೇಬಿಡೋಣ ಎಂದು ನಿರ್ಧರಿಸಿದ್ದೆ.
ನೀಲಿ ಚಿತ್ರದ ಆಸ್ಕರ್ ಬಂತು!
250 ಸಿನೆಮಾಗಳನ್ನು ಮುಗಿಸಿದ ನಂತರ ನನಗೆ 'ವರ್ಷದ ನಟಿ' ಪ್ರಶಸ್ತಿ ಬಂತು. ಇದಕ್ಕೆ ಎವಿಎನ್ ಪ್ರಶಸ್ತಿ ಎನ್ನುತ್ತಾರೆ. ನೀಲಿ ಚಿತ್ರೋದ್ಯಮದ ಆಸ್ಕರ್ ಪ್ರಶಸ್ತಿಯಿದು. ನಾನಿದನ್ನು ನಿರೀಕ್ಷಿಸಿರಲೂ ಇಲ್ಲ. ನನ್ನ ಹೆಸರು ಕರೆದಾಗ ನಂಬುವುದಕ್ಕೇ ಆಗಲಿಲ್ಲ. ಆಘಾತ ಹಾಗೂ ಖುಷಿ ಎರಡೂ ಆಗಿತ್ತು. ಆದರೂ ನನಗೆ ನಾನು ಸ್ಟಾರ್ ಎಂದು ಅನ್ನಿಸುತ್ತಿರಲಿಲ್ಲ.
ನಿಮ್ಮ ಕೆಲಸದಲ್ಲಿ ಅತ್ಯುನ್ನತ ಪ್ರಶಸ್ತಿ ಬಂದ ಮೇಲೆ ಎಲ್ಲಿಗೆ ಹೋಗುತ್ತೀರಿ? ನೀಲಿ ಚಿತ್ರೋದ್ಯಮದವರು ಹೋಗುವುದು ಪ್ಲೇಬಾಯ್ ಟೀವಿಗೆ. ಅಲ್ಲಿ 'ಪ್ರೈವೇಟ್ ಕಾಲ್ಸ್' ಎಂಬ ಕಾರ್ಯಕ್ರಮ ನಡೆಸಿಕೊಡಲು ಒಪ್ಪಂದ ಮಾಡಿಕೊಂಡೆ. ನಂತರ ನಿರ್ದೇಶನಕ್ಕೂ ಕಾಲಿಟ್ಟೆ. ಸ್ವಲ್ಪ ಸಮಯದಲ್ಲೇ ಚಿತ್ರಕತೆ ಬರೆದೆ. ಅಕಾ-ಇಕಾ ಎನ್ನುವಷ್ಟರಲ್ಲಿ ಡಜನ್ ಸಿನೆಮಾಕ್ಕೆ ಚಿತ್ರಕತೆ, ನಿರ್ದೇಶನ ಮಾಡಿದ್ದೆ.
ಒಮ್ಮೆ ರೇಡಿಯೋ ಚಾನಲ್ಲಿನ ಸಂಪಾದಕರೊಬ್ಬರ ಬಳಿ ಕುರುಡನೊಬ್ಬ ನನ್ನನ್ನು ಬಹಳ ಹೊಗಳಿದ್ದನಂತೆ! ವಯಸ್ಕರ ಚಿತ್ರಗಳಲ್ಲಿ ನಾನು ಮಾಡುವ ಶಬ್ದದಿಂದಲೇ ಅವನು ನನ್ನನ್ನು ಇಷ್ಟಪಟ್ಟಿದ್ದನಂತೆ. ಇದನ್ನು ಕೇಳಿ ರೇಡಿಯೋ ಚಾನಲ್ಲಿನವರು ನನ್ನನ್ನು ಟಾಕ್ ಶೋಗೆ ಕರೆದರು. ನಮ್ಮ ಇಂಡಸ್ಟ್ರಿಯ ಹೊರತಾಗಿ ಹೊರ ಮಾಧ್ಯಮದಲ್ಲಿ ನನಗೆ ಸಿಕ್ಕ ಮೊದಲ ಪ್ರಚಾರವದು. ಆ ಟಾಕ್ ಶೋದಲ್ಲಿ ನನ್ನ ಶಬ್ದವನ್ನು 'ಬಾತುಕೋಳಿಯ ಶಬ್ದ' ಎಂದು ಹೊಗಳಲಾಯಿತು! ಆ ಶೋ ಎಷ್ಟು ಜನಪ್ರಿಯವಾಯಿತು ಅಂದರೆ, ನಂತರ ಅದೇ ರೇಡಿಯೋ ಚಾನಲ್ಲಿನಲ್ಲಿ ನಾನೇ ಒಂದು ಶೋ ನಡೆಸಿಕೊಡಲು ಆರಂಭಿಸಿದೆ. ನನ್ನ ವೃತ್ತಿಜೀವನ ಅತ್ಯಂತ ಉತ್ತುಂಗಕ್ಕೆ ಹೋದ ಸಮಯವದು.
ಒಂದು ದಿನ ಶೂಟಿಂಗ್‌ಗೆಂದು ಸೆಟ್‌ಗೆ ಹೋದಾಗ ನೀನಿವತ್ತು 'ಸೆಕ್ಸಿ ಮಮ್ಮಿ'ಯ ಪಾತ್ರ ಮಾಡುತ್ತಿದ್ದೀಯೆಂದು ಹೇಳಿದರು. ನನಗೆ ಶಾಕ್. ರಾತ್ರಿ ಕಳೆದು ಬೆಳಗಾಗುವುದರೊಳಗೆ ನಾನು ಅದು ಹೇಗೆ ಜನಪ್ರಿಯ ಪೋರ್ನ್‌ಸ್ಟ್ರಾರ್ ಮಟ್ಟದಿಂದ ಸೆಕ್ಸಿ ಮಮ್ಮಿಯ ಜಾಗಕ್ಕೆ ಹೋಗಿಬಿಟ್ಟೆ?
24ಕ್ಕೇ ಇಲ್ಲಿ ವಯಸ್ಸಾಗಿಬಿಡುತ್ತದೆ
ಈ ಇಂಡಸ್ಟ್ರಿಯಲ್ಲಿ ನಿಮಗೆ 24 ಕಳೆದ ಮೇಲೆ ಆಗುವುದು ಇದೇ. ಈ ವಯಸ್ಸಿನವರು ಕಾಲೇಜು ಹುಡುಗಿಯ ಪಾತ್ರ ಮಾಡುತ್ತಾರೆಂದೇ ನಾನು ಭಾವಿಸಿದ್ದೆ. ನನಗೆ ಅಷ್ಟೇನೂ ವಯಸ್ಸಾಗಿಲ್ಲ ಎಂಬ ಭ್ರಮೆಯಲ್ಲಿದ್ದೆ. ಆದರೆ ಪ್ರೊಡ್ಯೂಸರ್‌ಗಳು ಬಯೋಡೇಟಾದಲ್ಲಿ ನನಗೆ 24 ವರ್ಷ ಎಂದು ಓದಿದ ಮೇಲೆ ನಾನು ಹೇಗಿದ್ದೇನೆಂದು ನೋಡುವ ಗೋಜಿಗೂ ಹೋಗುತ್ತಿರಲಿಲ್ಲ. ಕಣ್ಣುಮುಚ್ಚಿಕೊಂಡು ನನ್ನನ್ನು 'ಹಿರಿಯ ಹೆಂಗಸರ' ಸಾಲಿಗೆ ಸೇರಿಸಿಬಿಡುತ್ತಿದ್ದರು. ನನ್ನ 'ಬೇರ್‌ಲಿ ಲೀಗಲ್' ದಿನಗಳು ಶಾಶ್ವತವಾಗಿ ಮುಗಿದುಹೋದವು.
ನಂತರ, ನಿಮಗೆ 18-21 ವರ್ಷ ಎಂದು ಹೇಳಿಕೊಳ್ಳಲು ಸಾಧ್ಯವಿದೆಯಾದರೆ ಯಾವುದೇ ಕಾರಣಕ್ಕೂ ಸೆಟ್‌ನಲ್ಲಿ ನಿಜವಾದ ವಯಸ್ಸು ಹೇಳಿಕೊಳ್ಳಬಾರದು ಎಂಬುದು ನನಗೆ ಅರ್ಥವಾಯಿತು. ಸಿನೆಮಾದಲ್ಲಿ ನಾನೆಷ್ಟೇ ಚಿಕ್ಕವಳಂತೆ ಕಂಡರೂ ಅವರು ಅದನ್ನು ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಇವಳಿಗೆ 24 ಆಯಿತು ಎಂಬುದೇ ಅವರಿಗೆ ದೊಡ್ಡ ಸಂಗತಿ. ಒಮ್ಮೆ ನನ್ನನ್ನು ನೋಡಿ ತನ್ನ ಸಿನೆಮಾದಲ್ಲಿ ಹಾಕಿಕೊಳ್ಳಲು ಒಪ್ಪಿದ ನಿರ್ದೇಶಕನೊಬ್ಬ ಆಮೇಲೆ ನನ್ನ ವಯಸ್ಸು ಕೇಳಿ ಹಿಂದೆಸರಿದುಬಿಟ್ಟಿದ್ದ. 21 ವರ್ಷಕ್ಕಿಂತ ಹಿರಿಯ ಹುಡುಗಿಯನ್ನು ನೀಲಿ ಚಿತ್ರದಲ್ಲಿ ಹಾಕಿಕೊಳ್ಳುವುದಕ್ಕೆ ಅವನು ಡೆಡ್ ಅಗೆನಸ್ಟ್. ಒಮ್ಮೆ ಇನ್ನೊಂದು ಸೆಟ್‌ನಲ್ಲಿ ಒಬ್ಬ ಫೋಟೋಗ್ರಾಫರ್ ನನ್ನ ಮಾದಕ ಫೋಟೋಗಳನ್ನು ಡೈರೆಕ್ಟರ್‌ಗೆ ತೋರಿಸಿ ನನ್ನನ್ನು ಅವನ ಸಿನೆಮಾದಲ್ಲಿ ಹಾಕಿಕೊಳ್ಳುವಂತೆ ಒಪ್ಪಿಸಿದ್ದ. ಆದರೆ, ಬ್ಲೂಫಿಲಂ ಇಂಡಸ್ಟ್ರಿಯ ಮಾನದಂಡದ ಪ್ರಕಾರ ಒಮ್ಮೆ ನಿಮಗೆ 25 ವರ್ಷಆಯಿತೆಂದರೆ ಮುಗಿಯಿತು, ಹೆಚ್ಚುಕಮ್ಮಿ ಅಲ್ಲಿಂದ ಔಟ್ ಎಂದೇ ಅರ್ಥ. ನನಗೀಗ ಈ ಆಟದ ರೂಲ್ಸ್‌ಗಳು ಚೆನ್ನಾಗಿ ಅರ್ಥವಾಗಿವೆ. ಇಂತಹ ಸಂಗತಿಗಳನ್ನೆಲ್ಲ ಭಾವನಾತ್ಮಕವಾಗಿ ತೆಗೆದುಕೊಳ್ಳುವುದರ ಬದಲು ಸೆಟ್‌ನಲ್ಲೇ ಬಿಟ್ಟು ಹೋಗಲು ಮನವರಿಕೆಯಾಗಿದೆ.
ಈಗ ಇಂಟರ್ನೆಟ್ ರಾಣಿ ನಾನು
ಇವತ್ತು ನನಗೆ 28. ನನ್ನ ಪ್ರಕಾರ ನಾನಿನ್ನೂ ಯಂಗ್. ಆದರೆ ನನಗೆ ವಯಸ್ಸಾಗಿದೆ ಎಂದು ನಮ್ಮ ಇಂಡಸ್ಟ್ರಿ ನಿರ್ಧರಿಸಿದ್ದಾಗಿದೆ. ಹಾಗಾಗಿ ಇದ್ದುದರಲ್ಲೇ ಒಳ್ಳೆಯ ಮಗ್ಗುಲನ್ನು ಹುಡುಕಿ ಹೊಸ ಥರದ ವಿಡಿಯೋಗಳನ್ನು ನಾನೇ ಶೂಟ್ ಮಾಡಿಸಿ ಮಾರಾಟಕ್ಕೆ ಬಿಡುತ್ತಿದ್ದೇನೆ. ವಯಸ್ಸಾದವರೂ ಸ್ವಲ್ಪ ಕ್ರಿಯೇಟಿವ್ ಆಗಿದ್ದರೆ ಅವರಿಗಿಲ್ಲಿ ಜಾಗವಿದೆ ಎಂಬುದು ಅರ್ಥಆಗಿದೆ. ಪೋರ್ನ್‌ನಲ್ಲಿ ಎಲ್ಲರಿಗೂ ಏನಾದರೂ ಇದೆ. ಸಣ್ಣ ಹುಡುಗಿಯ ಪಾತ್ರಕ್ಕಾಗಿ ನನಗೆ ಸಿಕ್ಕಿದ್ದ ಫ್ಯಾನ್‌ಗಳು ಆ ಹುಡುಗಿಗೇ ಅಂಟಿಕೊಂಡಿರಬಹುದು. ಹಾಗಾಗಿ ವಯಸ್ಸಾದ ಆಂಟಿಯಾಗಿ ಈಗ ಹೊಸ ಫ್ಯಾನ್‌ಗಳನ್ನು ಕಲೆಹಾಕುತ್ತಿದ್ದೇನೆ. ಈಗಷ್ಟೇ ಹೊಸ ಹೊಸ ಸಾಧ್ಯತೆಗಳನ್ನು ಹುಡುಕುವ ಕೆಲಸಕ್ಕೆ ಕೈಹಾಕಿದ್ದೇನೆ. ಈ ಉದ್ದಿಮೆ ದೊಡ್ಡದು. ನಾನಿನ್ನೂ ನಟಿಸದ, ಬೇರೆ ಪ್ರಕಾರದ ನೀಲಿ ಚಿತ್ರಗಳು ಬೇಕಾದಷ್ಟಿವೆ. ಅವುಗಳನ್ನೆಲ್ಲ ಬಳಸಿಕೊಳ್ಳಬೇಕು.
ನೀಲಿ ಚಿತ್ರೋದ್ಯಮದಲ್ಲಿ ಪ್ರಸ್ತುತ ನನ್ನ ಬದಲಾಗುತ್ತಿರುವ ಪಾತ್ರದಿಂದ ಮುಖ್ಯವಾಹಿನಿಯ ಜಗತ್ತಿಗೆ ಯಾವುದೇ ಬದಲಾವಣೆ ಕಾಣಿಸದೆ ಇರಬಹುದು. ಆದರೆ, ಇಂಟರ್‌ನೆಟ್‌ನ ಜನಪ್ರಿಯತೆಯಿಂದಾಗಿ ನನಗೆ ಬೇರೆಯದೇ ಮಾರುಕಟ್ಟೆ ಸೃಷ್ಟಿಆಗಿದೆ. ಪೋರ್ನ್ ಇಂಡಸ್ಟ್ರಿಗೆ ಯಾವುದು ಕೆಟ್ಟದ್ದೋ ಅದು ನನಗೆ ಒಳ್ಳೆಯದನ್ನು ಮಾಡುತ್ತಿದೆ. ಇಂಟರ್ನೆಟ್‌ನಲ್ಲಿ ನನ್ನ ಹೆಸರು ಹರಿದಾಡುತ್ತಿದೆ. ನೀಲಿ ಸಿನೆಮಾ ನೋಡದವರು ಕೂಡ ನನ್ನ ಹೆಸರು ಕೇಳುತ್ತಿದ್ದಾರೆ. ಈಗ ಮತ್ತೆ ಮುಖ್ಯವಾಹಿನಿಯ ವಯಸ್ಕರ ಸಿನೆಮಾಗಳಿಂದ ಆಫರ್‌ಗಳು ಬರತೊಡಗಿವೆ. ನೀಲಿ ಚಿತ್ರವಲ್ಲದೆ 'ಎ ಪ್ಲೇಸ್ ಟು ಡೈ' ಎಂಬ ಸಾಮಾನ್ಯ ಸಿನೆಮಾದಲ್ಲೂ ನಟಿಸುವ ಅವಕಾಶ ಸಿಕ್ಕಿದೆ. ಇಂತಹದೇ ಇನ್ನೊಂದೆರಡು ಸಿನೆಮಾಗಳು ಕೈಯಲ್ಲಿವೆ.
ಆದರೆ ಈಗಲೂ ನಾನು ಅದೇ ಹಳೆಯ ಹುಡುಗಿ. ಕಾಲೇಜಿನಲ್ಲಿ ಓದುತ್ತಿದ್ದಾಗ ಆ ಕೆಲಸ ಮಾಡುವುದನ್ನು ಬಿಟ್ಟು ಹಣಕ್ಕಾಗಿ ನೀಲಿ ಚಿತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಎಡವಟ್ಟು ಹುಡುಗಿ. ಆದರೆ ಈಗ ನನಗೊಂದು ಹೊಸ ಗುರಿಯಿದೆ. ಒಂದಲ್ಲಾ ಒಂದು ದಿನ ನಾನು ಲಾ ಸ್ಕೂಲ್‌ಗೆ ಹೋಗುತ್ತೇನೆ. ಪೋರ್ನ್ ಇಂಡಸ್ಟ್ರಿಯಲ್ಲಿ ಗಳಿಸಿದ ಅನುಭವದಿಂದಾಗಿ ನಾನು ಒಳ್ಳೆಯ ಲಾಯರ್ ಆಗುತ್ತೇನೆ ಎಂಬ ವಿಶ್ವಾಸವಿದೆ. ನಾನಿನ್ನೂ ನಾಚಿಕೆಯ ಹುಡುಗಿಯೇ ಆಗಿರಬಹುದು. ಆದರೆ, 'ಅರೋರಾ ಸ್ನೋ' ಆಗಿರುವುದು ನನ್ನ ಗುರಿ ನನ್ನನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಲಿದೆ ಎಂಬುದನ್ನು ಕಲಿಸಿದೆ.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40066 ಗೆ ಭೇಟಿನೀಡಿ.