ವಿಶೇಷ

'ಮೂರ್ತಿ ಶಾಸ್ತ್ರೀಯ ಗ್ರಂಥಾಲಯ' ಬಿಡುಗಡೆ: ೧೦೦ ವರ್ಷಗಳಲ್ಲಿ ೫೦೦ ಪುಸ್ತಕಗಳ ಗುರಿ

Guruprasad Narayana

ಬೆಂಗಳೂರು: ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಅವರ ಕನಸಿನ ಕೂಸಾದ 'ಮೂರ್ತಿ ಕ್ಲಾಸಿಕಲ್ ಲೈಬ್ರರಿ' ಯೋಜನೆಯ ಮೊದಲ ಕಂತಿನ ಐದು ಪುಸ್ತಕಗಳು ಬುಧವಾರ ಬಿಡುಗಡೆಯಾದವು. ಗಣಿತಜ್ಞ ಮಂಜುಳ್ ಭಾರ್ಗವ, ಈ ಗ್ರಂಥಾಲಯದ ಸಂಪಾದಕ ಶೆಲ್ಡನ್ ಪೊಲಾಕ್ ಹಾಗೂ ರೋಹನ್ ಮೂರ್ತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

೨೧೦೪ರ ಫೀಲ್ದ್ ಮೆಡಲ್ ವಿಜೇತ ಮಂಜುಳ್ ಭಾರ್ಗವ ಮಾತನಾಡಿ, ನಾನು ವಿದೇಶದಲ್ಲೇ ಹುಟ್ಟಿ ಬೆಳೆದಿದ್ದರೂ ಭಾರತವನ್ನು ಬಹಳಷ್ಟು ಬಲ್ಲೆ. ಇಲ್ಲಿನ ಶಾಸ್ತ್ರೀಯ ಸಾಹಿತ್ಯ ಮತ್ತು ಶಾಸ್ತ್ರೀಯ ಸಂಗೀತದಿಂದ ಕಲಿಯುವುದು ಸಾಕಷ್ಟಿದೆ. ಆಗಿನ ಕಾಲಕ್ಕೆ ಭಾಸ್ಕರಾಚಾರ್ಯರ ಲೀಲಾವತಿಯಲ್ಲಿ 'ಕ್ವಾಡ್ರ್ಯಾಟಿಕ್ ಪ್ರಮೇಯಗಳ' ಬಗ್ಗೆ ಪದ್ಯ ಇರುವುದು ನನಗೆ ಬಹಳಷ್ಟು ಕಾಡಿದೆ. ಹಾಗೆಯೇ ಶಾಸ್ತ್ರಿಯ ಸಂಗೀತದಲ್ಲಿ ಯಾವ ತರಂಗಾಂತರ ಮನುಷ್ಯನಲ್ಲಿ ಯಾವ ಭಾವನೆ ಮೂಡಿಸುತ್ತದೆ ಎಂಬ ವಿಷಯ ನಮ್ಮ ಹಿಂದಿನವರಿಗೆ ತಿಳಿದಿತ್ತು ಎಂದ ಅವರು, ಈ ಹಿಂದೆ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರೆಸ್ ನವರು ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯವನ್ನು ಇಂಗ್ಲಿಶ್ ಭಾಷೆಗೆ ಸಾಕಷ್ಟು ಪರಿಚಯಿಸಿದ್ದಾರೆ. ಈಗ ಭಾರತೀಯ ಶಾಸ್ತ್ರೀಯ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಅಭಿನಂದನೀಯ ಎಂದರು.

ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಈ ಗ್ರಂಥಗಳ ಪ್ರಧಾನ ಸಂಪಾದಕ ಶೆಲ್ಡನ್ ಪೊಲಾಕ್ ೮೦ ರ ದಶಕದ ತಮ್ಮ ಬೆಂಗಳೂರು ಒಡನಾಟವನ್ನು ನೆನಪಿಸಿಕೊಂಡರು. ರಾಮಕೃಷ್ಣ ಹೆಗಡೆ ತಮಗೆ ಬೆಂಗಳೂರಿಗೆ ಬರಲು ಆಹ್ವಾನಿಸಿದ್ದು, ಹಾಗೆಯೇ ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಎ ಕೆ ರಾಮಾನುಜನ್ ಅವರ ಒಡನಾಟ ಹೇಗೆ ತಮ್ಮ ಚಿಂತನೆಗೆ ಸಹಕಾರಿಯಾಗಿದೆ ಎಂದು ನೆನಪಿಸಿಕೊಂಡರು. ಹಳೆಗನ್ನಡದ 'ಕವಿರಾಜಮಾರ್ಗ' ಕೃತಿಯ ಬಗ್ಗೆ ಮುಕ್ತ ಪ್ರಶಂಸೆಯನ್ನು ಸುರಿಸಿದ ಪೊಲಾಕ್, ಕರ್ನಾಟಕದ ಬಹುಸಂಸ್ಕೃತಿಗೆ ಕವಿರಾಜಮಾರ್ಗ ಆದಿ ಎಂದರು.

ಯಾವುದೆ ಲಾಭವಿಲ್ಲದ ಈ ಯೋಜನೆಗೆ ೫ ದಶಲಕ್ಷ ಯುಎಸ್ ಡಾಲರ್ ಗಳ ದೇಣಿಗೆ ನೀಡಿರುವ ರೋಹನ್ ಮೂರ್ತಿ ಮಾತನಾಡಿ, ತಾವು ಬಿಷಪ್ ಕಾಟನ್ ನಲ್ಲಿ ಕಲಿಯುತ್ತಿದ್ದಾಗ ಟಾಲ್ಸ್ಟಾಯ್, ವಾಲ್ಟ್ ವಿಟ್ಮ್ಯಾನ್ ಇವರುಗಳನ್ನೆಲ್ಲಾ ಓದುತ್ತಿದ್ದೆವು. ಆದರೆ ನಮ್ಮ ದೇಶದ ಗ್ರಂಥಗಳನ್ನೇ ನಾವು ಓದಲಿಲ್ಲ. ಇದು ದುರಂತ. ನಮ್ಮ ಶಾಸ್ತ್ರೀಯ ಸಾಹಿತ್ಯ ಅನನ್ಯ ಮಾಹಿತಿ ಒಳಗೊಂಡಿದೆ. ಇದರ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಮುಂದಿನ ೧೦೦ ವರ್ಷಗಳ ಈ ಯೋಜನೆಯಲ್ಲಿ ವರ್ಷಕ್ಕೆ ಐದು ಗ್ರಂಥಗಳಂತೆ ೫೦೦ ಪುಸ್ತಕಗಳನ್ನು ಹೊರತರುವ ಯೋಜನೆ ಇದೆ ಎಂದರು.

ಮೊದಲ ಕಂತಿನಲ್ಲಿ ಹೊರಬಂದಿರುವ ಪುಸ್ತಕಗಳಿ ಇಂತಿವೆ.
೧. ಥೇರಿಘಟ್ಟ (ಮೊದಲ ಬೌದ್ಧ ಮಹಿಳೆ) ಪದ್ಯಗಳು
೨. ಬುಲ್ಲೆ ಷಾ - ಸೂಫಿ ಪದ್ಯಗಳು
೩. ಅಕ್ಬರ್ ನಾಮ (ಭಾಗ ೧)
೪. ಸುರ್ ಸಾಗರ - ಸೂರ್ ದಾಸ್ ಅವರ ಪದ್ಯಗಳು
೫. ಅಲ್ಲಸಾನಿ ಪೆದ್ದಣ್ಣನ ಮನುಚರಿತ್ರಮು (ತೆಲುಗು)

ಕನ್ನಡದ ಯಾವ ಪುಸ್ತಕಗಳು ಬರಲಿವೆ ಎಂಬ ಪ್ರಶ್ನೆಗೆ, ಸದ್ಯಕ್ಕೆ ರಾಘವಾಂಕನ ಹರಿಶ್ಚಂದ್ರ ಕಾವ್ಯ ಸಿದ್ಧತೆಯಲ್ಲಿದೆ ಎಂದ ಪೊಲಾಕ್, ಮುಂದೆ ಕುಮಾರವ್ಯಾಸ ಭಾರತ ಮತ್ತು ಕವಿರಾಜ ಮಾರ್ಗ ಕೃತಿಗಳನ್ನು ಈ ಯೋಜನೆಯಲ್ಲಿ ಇಂಗ್ಲಿಶ್ ಗೆ ಅನುವಾದಿಸುವ ಚಿಂತನೆಯಿದೆ ಎಂದರು. ಭಾರತದ ಎಲ್ಲ ೧೪ ಶಾಸ್ತ್ರೀಯ ಭಾಷೆಗಳ ಸಾಹಿತ್ಯವನ್ನು ಈ ಯೋಜನೆ ಒಳಗೊಳ್ಳಲಿದೆ. 

SCROLL FOR NEXT