ವಿಶೇಷ

ಎಲ್ಲೆಲ್ಲೂ ಸಂಗೀತವೇ. . . !!

Rashmi Kasaragodu

ಅದು ಸಂಜೆಯ ಸುಸಮಯ. . ಹಿತವಾಗಿ ಬೀಸುತ್ತಿದ್ದ ತಿಳಿಗಾಳಿ. . ಆಗಾಗ ಪ್ರೋಕ್ಷಿಸಿ ಹಾಜರಿ ಹಾಕುತ್ತಿದ್ದ ಮುಂಗಾರಿನ ಹನಿಗಳು. ..ಸಭಾಂಗಣದ ತುಂಬೆಲ್ಲ ಸಂಗೀತ ಸರಸತಿಯ ಆರಾಧಕರ ಸಂಗಮ. . ವೇದಿಕೆಯ ಮೇಲೆ ಸಂಗೀತ ಸಾಮ್ರಾಜ್ಯದ ದಿಗ್ಗಜರು. ಇಂತಹದ್ದೊಂದು ಅಪರೂಪದ ಸಂಜೆಗೆ ಸಾಕ್ಷಿಯಾಗಲು, ಮನಸಾ ಅನುಭವಿಸಲು ನಾನೂ ಕಾತರಳಾಗಿದ್ದೆ. ಝಗಮಗಿಸುವ ದೀಪಗಳ ಜುಗಲ್ಬಂಧಿ ! ಅದ್ಭುತವಾಗಿ ಅಲಂಕರಿಸಿದ ರಂಗಮಂಟಪದ ಮೇಲೆ ಕುಳಿತ ವಿದ್ವನ್ಮಣಿ, ಸಂಗೀತ ಸರಸತಿಯ ಪುತ್ರಿ ಶ್ರೀಮತಿ ಸವಿತಾ ಅಮರೇಶ ನುಗಡೋಣಿ. ದೈವ ಪ್ರಾರ್ಥನೆಯೊಂದಿಗೆ ಅವರ ಸಂಗೀತ ಸೇವೆ ಆರಂಭವಾಗಿತ್ತು. ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದ ಎಲ್ಲ ಮಟ್ಟುಗಳನ್ನೂ ಒಂದಾದ ಮೇಲೊಂದರಂತೆ ಉಣಬಡಿಸತೊಡಗಿದ್ದರು. ಕೇಳುಗರ ಬೇಡಿಕೆಗೂ ಅವರ ಉತ್ಸಾಹಕ್ಕೂ ಒಂದಕ್ಕೊಂದು ತಾಳಮೇಳ ಚಂದಿತ್ತು. . ನಿಜಕ್ಕೂ ಅದೊಂದು ಅನನ್ಯವಾದ ಕಾರ್ಯಕ್ರಮ. ಪ್ರತೀ ಪ್ರಯೋಗದ ಕೊನೆಯಲ್ಲಿ ಸುರಿದಿಟ್ಟ ಚಪ್ಪಾಳೆ. ..ನಲ್ಮೆಯ ಕರತಾಡನ. .!! ನಾನಂತೂ ಧನ್ಯಳಾಗಿಬಿಟ್ಟೆ. ಸಂಗೀತದ ಮೇಲಿನ ಅವರ ತಾದಾತ್ಮ್ಯತೆಗೆ ತಲೆದೂಗಿದೆ. ನಿಮಗೂ ಇಂತಹ ಅನುಭವ ಆಗಿರುತ್ತದೆ. ಅಲ್ಲವೇ !

ಸಂಗೀತ ನಮ್ಮ ಬದುಕಿನ ಭಾಗ. ಶೃತಿ, ಲಯಗಳ ಅರಿವಿಲ್ಲದವನೂ ಸಂಗೀತದ ರಾಗ ತಾಳ ಮಾಧುರ್ಯವನ್ನು ಅನುಭವಿಸಬಲ್ಲ. ಅಂತಹ ಅದ್ಭುತ ಮಾಂತ್ರಿಕ ಶಕ್ತಿ ಸಂಗೀತದ್ದು. ರಾಗವಿದ್ದವನು ಹಾಡಬಲ್ಲ. . ಯೋಗವಿದ್ದವನು ಕೇಳಬಲ್ಲ. ಎರಡೂ ಇಲ್ಲದ ಅರಸಿಕ ಜೀವನದ ಅತ್ಯಂತ ಅಮೂಲ್ಯ ಕೊಡುಗೆಯನ್ನು ಕಳೆದುಕೊಳ್ಳುತ್ತಾನೆ. ಹೌದು ಸಾಹಿತ್ಯ ಸಂಗೀತದ ಆಸಕ್ತಿಯಿಲ್ಲದವನು ತನ್ನ ಬದುಕನ್ನೂ ಆತ್ಮಪೂರ್ವಕವಾಗಿ ಪ್ರೀತಿಸಲಾರ. ನಮ್ಮೊಳಗಿನ ನೋವುಗಳನ್ನು, ದುಗುಡವನ್ನು, ಚಿಂತೆಯನ್ನು ಮರೆಸಬಲ್ಲ ಶಕ್ತಿ ಸಂಗೀತಕ್ಕಿದೆ. ಆದ್ದರಿಂದಲೇ ಯಾವುದೋ ಗೀತೆಯ ಮರೆಯಲ್ಲಿ ನಮ್ಮ ದುಮ್ಮಾನ ಮರೆಯಾಗುತ್ತದೆ. ಮನಸನ್ನು ಉಲ್ಲಸಿತಗೊಳಿಸುತ್ತದೆ. ಅದು ರಾಗವಾಗಿರಲಿ, ಹಾಡಾಗಿರಲಿ ಅಥವಾ ಯಾವುದೇ ಪ್ರಕಾರವಾಗಿರಲಿ. . ಅದಕ್ಕೆ ನಮಿಸದವನಿಲ್ಲ. ಆರಾಧಿಸದವನಿಲ್ಲ . ಅದೊಂದು ಮಾನಸಿಕ ಚಿಕಿತ್ಸಕ. ಸಮ್ಮೋಹನಗೊಳಿಸುವ ಪ್ರೇರಕ. ಆದ್ದರಿಂದಲೇ ಸಂಗೀತಕ್ಕೆ ಜಾಗತಿಕ ಮಾನ್ಯತೆ. ಆದಿಮಾನವನಿಂದ ಆಡಾಡುತ್ತಲೇ ಹುಟ್ಟಿಕೊಂಡ ಸಂಗೀತಕ್ಕೆ ಸಾರ್ವಕಾಲಿಕ ಯೋಗ್ಯತೆಯಿದೆ. ಪ್ರತಿಯೊಂದು ರಾಗದಲ್ಲೂ ವಿಶಿಷ್ಟವಾದ ಶಕ್ತಿಯಿದೆ. ಶ್ರೀಕೃಷ್ಣನ ಕೊಳಲಗಾನಕ್ಕೆ ಮಾತುಬಾರದ ಗೋವುಗಳೇ ಮನಸೋತು ಹಾಲು ಕರೆಯುತ್ತಿದ್ದವೆಂದು ನಮ್ಮ ಪುರಾಣಗಳು ಹೇಳುತ್ತವೆ. ಅದು ವೈಜ್ಞಾನಿಕ ಸತ್ಯವೆಂದೂ ಸಾಬೀತಾಗಿದೆ. ನಾವು ಪೂಜಿಸುವ ದೈವಗಳಿಗೂ ಸಂಗೀತಾರಾಧನೆಯೂ ಒಂದು ಸೇವೆ. ಹಾಡುತ್ತಲೇ ದೈವವನ್ನೊಲಿಸಿಕೊಂಡ ಭಕ್ತೆ ಮೀರಾ , ಪುರಂದರದಾಸರಾದಿಯಾಗಿ ಎಲ್ಲ ದಾಸವರೇಣ್ಯರು, ತಮ್ಮ ಸಂಗೀತಸೇವೆಯಿಂದಲೇ ಭಕ್ತಿಯ ಪರಾಕಾಷ್ಟೆಯನ್ನು ಮುಟ್ಟಿದವರು. ಈ ಎಲ್ಲವೂ ಸಂಗೀತದ ಸಾರ್ವಕಾಲಿಕ ಸತ್ಯವನ್ನು ಅರುಹುತ್ತವೆ.
ಇಂತಹ ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹಾಸುಹೊಕ್ಕಿದೆ. ಸಾಹಿತ್ಯವಿಲ್ಲದೆ ಸಂಗೀತವಿಲ್ಲ . . ಸಂಗೀತಕ್ಕಳವಟ್ಟರೆ ಸಾಹಿತ್ಯವೂ ಕರ್ಣಾಮೃತ. ಒಂದನ್ನೊಂದು ಬೆರೆತ ಅವುಗಳನ್ನಭವಿಸುವುದೇ ಪರಮಾನಂದ. ಮಹದಾನಂದ!! ಸಂಗೀತ ನಿಮ್ಮ ಅಂತರಾತ್ಮದ ಹಾಡಾಗುತ್ತ ಬದುಕಿನ ಪ್ರೀತಿಯನ್ನು ಹೆಚ್ಚಿಸುವುದು ನಿಸ್ಸಂಶಯ. . !!

-ಭವಾನಿ ಲೋಕೇಶ್

SCROLL FOR NEXT