ಬದುಕಿನ ಮಹತ್ವ ತಿಳಿಯುವುದು ಸಾವಿನ ಸಾಮ್ನಾ ಆದಾಗ ಮಾತ್ರ ಎಂಬುದು ವಿಪರ್ಯಾಸದ ಸತ್ಯ. ಮನುಷ್ಯ ತನ್ನ ಜೀವಿತಕಾಲದಲ್ಲಿ ಕಮ್ಮಿಯೆಂದರೂ ಸುಮಾರು 3 ತಿಂಗಳಷ್ಟು ಆಸ್ಪತ್ರೆಯಲ್ಲಿಯೇ ಕಳೆಯುತ್ತಾನೆ. ನಾವೆಷ್ಟೆ ಅದೃಷ್ಟವಂತ ಎಂದುಕೊಂಡರೂ ಅಸ್ಪತ್ರೆವಾಸ ತಪ್ಪಿದ್ದಲ್ಲ. ಒಂದು ಬಾರಿಯೂ ಅಸ್ಪತ್ರೆಗೆ ಕಾಲಿಡದವನ ಕುರಿತು 'ಆತನಿಗೆ ಏನಾದರೂ ಗಂಭೀರ ಸಮಸ್ಯೆಯಿರಬಹುದು' ಎಂದುಕೊಳ್ಳುವಷ್ಟರ ಮಟ್ಟಿಗೆ ಅಸ್ಪತ್ರೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ವೈದ್ಯನೊಬ್ಬನ ಮೇಲೆ ಆರೋಪಗಳನ್ನೇನನ್ನೇ ಹೊರಿಸಿದರೂ ಆ ಕ್ಷಣಕ್ಕೆ ಆಸ್ಪತ್ರೆ ಬೆಡ್ಡಿನಲ್ಲಿ ಮಲಗಿದ ರೋಗಿ ಮತ್ತು ಆತನ ಮನೆಯವರಿಗೆ ವೈದ್ಯರು ಅಕ್ಷರಶಃ ದೇವರೇ. ಸೃಷ್ಟಿಯ ವೈಚಿತ್ರ್ಯ ಎಸಗುವ ಪ್ರಮಾದ, ಸಂದಿಗ್ಧತೆ ಎಲ್ಲವಕ್ಕೂ ಸವಾಲೆಸೆಯುವಂತೆ ಉತ್ತರಗಳನ್ನು ಹುಡುಕಿಕೊಳ್ಳುವ ವೈದ್ಯಕೀಯ ಲೋಕದಲ್ಲಿ ಒಂದು ಸುತ್ತು. ಪವಾಡವೆಂಬಂತೆ ತೋರುವ ಇಲ್ಲಿನ ವೈದ್ಯಕೀಯ ಕತೆಗಳು ನಿಮ್ಮ ಸ್ಫೂರ್ತಿಗಾಗಿ ಮತ್ತು ಅಚ್ಚರಿಗಾಗಿ...
ಚೀನಾದ ಅರ್ಧ ಮನುಷ್ಯ
ನಾವು ಮನುಷ್ಯರು ಸದಾ ಒಂದಿಲ್ಲೊಂದು ಚಿಂತೆಗಳಲ್ಲಿ ನಮ್ಮನ್ನು ನಾವು ಮುಳುಗಿಸಿಕೊಂಡಿರುತ್ತೇವೆ. ಎಷ್ಟಿದ್ದರೂ ನಮಗೆ ಸಾಲದು, ಇನ್ನೂ ಬೇಕು ಎಂಬ ಹಪಾಹಪಿ. ನಮಗೆ ಬೇಕುಗಳೇ ಇರಬಾರದು ಎನ್ನುವುದೂ ಸರಿಯಲ್ಲ. 'ಬೇಕು'ಗಳು ಇರಬೇಕು ಆದರೆ ಮಾರ್ಕೆಟಿಂಗ್ ಮಂದಿ ಅರ್ಧ ಗಂಟೆ ಕ್ಲಾಸಿನಲ್ಲಿ ಬ್ರೈನ್ ವಾಶ್ ಮಾಡುವ ಧಾಟಿಯಲ್ಲಿ ಅರಚಿಕೊಳ್ಳುವಷ್ಟು ತೀವ್ರವಾಗಿರಬೇಕೆಂದಿಲ್ಲ ನಮ್ಮ ಆಸೆ ಆಕಾಂಕ್ಷೆಗಳು. ಇಷ್ಟು ದೊಡ್ಡ ಬ್ರಹ್ಮಾಂಡ ವಿಶ್ವದಲ್ಲಿ, ಸೂಜಿ ಮೊನೆಗೂ ಸಮನಾಗದ ಬದುಕು ನಮ್ಮದು. ಈ ಚಿಕ್ಕ ವಿಷಯ ನಮಗೆ ಅರಿವಾಗುವುದು ಪೆಂಗ್ ಶೂಲಿನ್‌ನಂತಹವರನ್ನು ಕಂಡಾಗಲೇ. ಚೀನಾದವನಾದ ಪೆಂಗ್ ಶೂಲಿನ್ ಮೇಲೆ ಲಾರಿ ಹರಿದು ಆತನನ್ನು ಅಕ್ಷರಶಃ ಅರ್ಧ ತುಂಡರಿಸಿತ್ತು. ಆತನನ್ನು ಚಿಕಿತ್ಸೆಗೊಳಪಡಿಸಿದ ವೈದ್ಯರಿಗೆ ಆತನ ಸೊಂಟದ ಕೆಳಗೆ ಪೂರ್ತಿ ತುಂಡರಿಸದೆ ಬೇರೆ ದಾರಿಯೇ ಇರಲಿಲ್ಲ. ಅದೂ ಹೇಳಿದಷ್ಟು ಸುಲಭವಿರಲಿಲ್ಲ ಸುಮಾರು ಎರಡು ವರ್ಷಗಳ ಕಾಲ ಆತ ಆಸ್ಪತ್ರೆಯಲ್ಲೇ ಇರಬೇಕಾಯಿತು. ಅಷ್ಟರಲ್ಲಿ ಅನೇಕ ಅಪರೇಷನ್ನುಗಳನ್ನು ಆತನ ಮೇಲೆ ನಡೆಸಲಾಗಿತ್ತು, ಆತನ ದೇಹದೊಳಗಿನ ರಕ್ತಪರಿಚಲನೆಯ ಮಾರ್ಗವನ್ನು ಬದಲಾಯಿಸಲಾಯಿತು, ಜೀರ್ಣಾಂಗಗಳಿಗೆ ಮಾರ್ಪಾಡುಗಳನ್ನು ಮಾಡಲಾಯಿತು, ಹೊಟ್ಟೆಯ ಕೆಳಗಿನ ಭಾಗವನ್ನು ತಲೆಯ ಚರ್ಮ ಬಳಸಿ ಹೊಲಿಯಲಾಯಿತು. ಇದ್ಯಾವುದೂ ಅವನ ಬದುಕುವ ಉತ್ಸಾಹಕ್ಕೆ ಕುಂದು ತರಲಿಲ್ಲ. ಆಸ್ಪತ್ರೆಯಲ್ಲಿದ್ದಷ್ಟೂ ಸಮಯ ಆತ ಫಿಸಿಯೋಥೆರಪಿಸ್ಟ್ ನೆರವಿನಿಂದ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವಂತೆ ತರಬೇತಿ ಪಡೆಯುತ್ತಿದ್ದ. ಮನೆ ಸೇರಿದ ನಂತರ ಪೆಂಗ್ ಶೂಲಿನ್‌ಗೆ ಯಾರ ಸಹಾಯವೂ ಇಲ್ಲದೆ ನಡೆಯಬೇಕೆನ್ನುವ ಅದಮ್ಯ ಬಯಕೆ ಗಟ್ಟಿಯಾಗತೊಡಗಿತ್ತು. ಅದಕ್ಕಾಗಿ ಆತ ಕಸರತ್ತು ನಡೆಸತೊಡಗಿದ್ದ. ಆದರೆ ಆತನ ಕನಸು ಬಾಹ್ಯ ಉಪಕರಣಗಳ ಸಹಾಯವಿಲ್ಲದೆ ನನಸಾಗುವಂತಿರಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಯಾವೊಂದು ಉಪಕರಣಗಳೂ ಆತನಿಗೆ ಸರಿಹೊಂದುತ್ತಿರಲಿಲ್ಲ. ಇದಕ್ಕಾಗಿ ಅನೇಕ ಸಂಸ್ಥೆಗಳಿಗೆ ಭೇಟಿ ಕೊಟ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಸಂಸ್ಥೆಯೊಂದು ಈತನಿಗೆ ಸಹಕರಿಸಲು ಮುಂದೆ ಬಂದಿತು. ಕೃತಕ ಕಾಲುಗಳು ಮತ್ತು ಅದನ್ನು ಆತನ ದೇಹಕ್ಕೆ ಜೋಡಿಸಲನುವಾಗುವಂತೆ ಬೇರೆಯದೇ ಉಪಕರಣ ಹೀಗೆ ಅನೇಕ ವಿಧಗಳಲ್ಲಿ ಪೆಂಗ್ ಶೂಲಿನ್‌ನನ್ನು ಪರೀಕ್ಷೆಗೊಳಪಡಿಸಿ ಉಪಕರಣಗಳನ್ನು ಪ್ರತ್ಯೇಕವಾಗಿ ಅವನಿಗೆಂದೇ ಡಿಸೈನ್ ಮಾಡಲಾಯಿತು. ಈಗ ಅದರ ಸಹಾಯದಿಂದ ಅಪಘಾತವಾದ ಹತ್ತು ವರ್ಷಗಳ ನಂತರ ಚೀನಾದ ಹ್ಯುನಾನ್ ಪ್ರಾಂತ್ಯದಲ್ಲಿ ಪೆಂಗ್ ಶೂಲಿನ್ ನಡೆಯುತ್ತಿದ್ದಾನೆ.
ಎರಡು ಬಾರಿ ಹುಟ್ಟಿದವಳ ಕತೆ
ಮಹಾತ್ಮರು ದೈವಾಧೀನರಾದಾಗ ಜನರು ಅವರನ್ನು ಕುರಿತು 'ಮತ್ತೊಮ್ಮೆ ಹುಟ್ಟಿ ಬಾ' ಎಂದು ಹೇಳುವುದಿದೆ. ಅದು ಇಲ್ಲಿಯ ತನಕ ನಿಜವಾಗಿಲ್ಲ. ಆದರೆ ಇಲ್ಲಿ ಹೇಳ ಹೊರಟಿರುವುದು ಹಾಗೆ ಎರಡು ಸಾರಿ ಹುಟ್ಟಿ ಬಂದ ಕಂದಮ್ಮ ಮೇಸೀ ಹೋಪ್‌ಳ ಕತೆ. ಕೆರ್ರಿ ಗರ್ಭಿಣಿಯಾಗಿ 22 ವಾರಗಳು ತುಂಬಿತ್ತು. ಅಲ್ಟ್ರಾಸ್ಕ್ಯಾನಿಂಗ್‌ಗೆಂದು ಬಂದಿದ್ದ ಅಮೆರಿಕದ ಚಾಡ್ ಮತ್ತು ಕೆರ್ರಿ ದಂಪತಿಗಳು ಬಹಳ ಸಂತಸಗೊಂಡಿದ್ದರು. ಆದರೆ ಸ್ಕ್ಯಾನಿಂಗ್ ಮಾನಿಟರ್ ಬಳಿ ನಿಂತಿದ್ದ ಸಹಾಯಕಿಯ ಮುಖದಲ್ಲಿ ಆತಂಕ ಕಾಣಿಸಿಕೊಂಡಿದ್ದು ಚಾಡ್‌ಗೆ ತಿಳಿಯದೇ ಇರಲಿಲ್ಲ. ಆ ಸಹಾಯಕಿ ಕೂಡಲೆ ಹೊರ ಹೋಗಿ ಸೀನಿಯರ್ ಡಾಕ್ಟರ್ ಒಬ್ಬರನ್ನು ಕರೆತಂದರು. ಗರ್ಭಚೀಲದಲ್ಲಿ ಬಲೂನಿನ ಆಕೃತಿಯ ವಸ್ತುವೊಂದು ಕಾಣಿಸಿತ್ತು. ಸ್ವಲ್ಪ ಹೊತ್ತಿನ ನಂತರ ಚಾಡ್ ಬಳಿ ಬಂದ ಡಾಕ್ಟರ್ ಆತನ ಪತ್ನಿಯ ಗರ್ಭದಲ್ಲಿ ಮಗುವಿಗೆ ಅಂಟಿಕೊಂಡಂತೆ ಗೆಡ್ಡೆ ಇರುವುದನ್ನು ಖಚಿತ ಪಡಿಸಿದರು. ಗೆಡ್ಡೆ, ಮಗುವಿಗೆ ಪೂರೈಕೆಯಾಗುತ್ತಿದ್ದ ರಕ್ತ ಮತ್ತು ಇನ್ನಿತರ ಸತ್ವಗಳನ್ನು ಹೀರಿಕೊಳ್ಳುತ್ತಿತ್ತು. ಇದು ಮುಂದುವರೆದರೆ ಮಗು ಬದುಕುಳಿಯುವ ಸಾಧ್ಯತೆಯೆ ಇರಲಿಲ್ಲ. ದಂಪತಿಗಳು ಸರ್ಜರಿಗೆ ಸಿದ್ಧರಾದರು. ಯಾವುದೇ ಖಾತರಿಯನ್ನು ವೈದ್ಯರು ನೀಡಿರಲಿಲ್ಲ, ದಂಪತಿಗಳು ಮಗು ಇನ್ನಿಲ್ಲದಂತಾದರೂ ಹೆಸರಿಲ್ಲದಂತೆ ಹೋಗುವುದು ಬೇಡವೆಂಬ ಕಾರಣಕ್ಕೆ ಇನ್ನೂ ಹೊಟ್ಟೆಯಲ್ಲಿದ್ದ ಮಗುವಿಗೆ ಮೇಸೀ ಹೋಪ್(ಆಶಾವಾದ) ಎಂಬ ಹೆಸರಿಟ್ಟರು. ಅದೊಂದು ವಿಲಕ್ಷಣ ಆಪರೇಷನ್ ಆಗಿತ್ತು. ಗರ್ಭಚೀಲದಿಂದ ಮಗು ಭ್ರೂಣವನ್ನು ಹೊರತೆಗೆದೇ ಗೆಡ್ಡೆಯನ್ನು ಕತ್ತರಿಸಬೇಕಿತ್ತು. ಅಂತೆಯೇ ವೈದ್ಯರು ಅತ್ಯಂತ ಜಾಗರೂಕತೆಯಿಂದ ಆ ಕೆಲಸವನ್ನು ಮಾಡಿ ಮೇಸೀಗೆ ಮೊದಲ ಹುಟ್ಟು ನೀಡಿದ್ದಾಯಿತು, ಅದಕ್ಕಿಂತ ಸೂಕ್ಷ್ಮವಾದದ್ದು ಮತ್ತೆ ಮಗುವನ್ನು ಮುಂಚಿದ್ದಂತೆಯೇ ಚೀಲದೊಳಕ್ಕೆ ಸೇರಿಸಿ ಒಂಚೂರೂ ಬಿರುಕಿಲ್ಲದಂತೆ ಮಾಡಿದ್ದು. ಏಕೆಂದರೆ ಮಗು ಇನ್ನೂ ಹೊಟ್ಟೆಯಲ್ಲಿ ಕೆಲ ತಿಂಗಳುಗಳ ಕಾಲ ಇದ್ದು ಬೆಳೆಯಬೇಕಿತ್ತಲ್ಲ. ಡಾಕ್ಟರರು ಕೊನೆಗೂ ದಂಪತಿಗಳ ಮುಖದಲ್ಲಿ ಮಂದಹಾಸ ಮೂಡಿಸುವಲ್ಲಿ ಸಫಲರಾದರು. 'ವೈದ್ಯೋ ನಾರಾಯಣ ಹರಿ' ಎನ್ನುವುದು ಸುಮ್ಮನೆಯಲ್ಲ ಎಂದು ತಿಳಿಯುವುದು ಇಂತಹ ಸನ್ನಿವೇಶಗಳಲ್ಲೇ. ಮೂರು ತಿಂಗಳ ನಂತರ ಮೇಸೀ ಹೋಪ್ ಎರಡನೆಯ ಬಾರಿ ತಾಯಿಯ ಗರ್ಭದಿಂದ ಯಾವುದೇ ತೊಂದರೆ ಇಲ್ಲದೆ ಹೊರಬಂದಳು!
-ಹರ್ಷವರ್ಧನ್
harsh.9mile@gmail.com
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.