ಎಲ್ಲವನ್ನೂ ಸರ್ಚ್ ಮಾಡುವ ಗೂಗಲ್‌ಗೆ ಸರ್ಚ್ ಮಾಡಲು ಕಲಿಸಿದ್ಯಾರು ಅಂತ ಯೋಚಿಸಿದ್ದೀರ? ಗೂಗಲ್ ಸರ್ಚ್ ಬಾರ್‌ನಲ್ಲಿ ಪದಗಳನ್ನು ಟೈಪ್ ಮಾಡಿ ಸರ್ಚ್ ಬಟನ್ ಒತ್ತಿದ ಕೂಡಲೇ ಸಾವಿರಾರು ಮಾಹಿತಿಗಳು ಒಮ್ಮೆಲೆ ತೆರೆದುಕೊಳ್ಳುತ್ತವೆ. ಈ ಮಾಹಿತಿಗಳು ತೆರೆದುಕೊಳ್ಳುವುದರ ಜತೆ ನಾವು ಹುಡುಕುತ್ತಿರುವ ಸಂಗತಿಗಳೇನು? ಮತ್ತೆ ಮತ್ತೆ ಹುಡುಕಿದ ಸಂಗತಿಗಳನ್ನು ನೆನಪಿಟ್ಟುಕೊಂಡು ನಮ್ಮ ಹುಡುಕಾಟವನ್ನು ಗೂಗಲ್ ಮತ್ತಷ್ಟು ಸುಲಭವಾಗಿಸುತ್ತದೆ. ಹೀಗೆ ಕ್ಷಣ ಮಾತ್ರದಲ್ಲಿ ನಮ್ಮ ಹುಡುಕುಪದಗಳನ್ನು ಹೊಂದಿರುವ ವೆಬ್ ಪೇಜ್‌ಗಳನ್ನು ಲಭ್ಯವಾಗಿಸಲು ರ್ಯಾಂಕಿಂಗ್ ಅಲ್‌ಗೋರಿಥಂನ್ನು ತಯಾರಿಸಲಾಗುತ್ತದೆ. ಈ ರ್ಯಾಂಕಿಂಗ್ ಅಲ್‌ಗೋರಿಥಂನ್ನು ತಯಾರಿಸುವ ಸರ್ಚ್ ಕ್ವಾಲಿಟಿ ವಿಭಾಗದ ಕೆಲಸ ತುಂಬಾ ಜಾಣ್ಮೆಯಿಂದ ಕೂಡಿರುತ್ತದೆ. ಇಂಥಾ ವಿಭಾಗದಲ್ಲಿ 10 ವರ್ಷಗಳಿಗಿಂತಲೂ ಹೆಚ್ಚು ಕೆಲಸ ಮಾಡಿದ ಒಬ್ಬ ಭಾರತೀಯನಿದ್ದಾನೆ. ಅವರ ಹೆಸರು ಅಮಿತ್ ಸಿಂಘಾಲ್. ಗೂಗಲ್ ಸಂಸ್ಥೆಯ ಇಂಟರ್‌ನೆಟ್ ಸರ್ಚ್ ಬ್ಯುಸಿನೆಸ್‌ನ ಮುಖ್ಯಸ್ಥರಾಗಿದ್ದ ಸಿಂಘಾಲ್ ಈಗ ಪ್ರಸ್ತುತ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.
ಅಮಿತ್ ಸಿಂಘಾಲ್‌ನ ಗೂಗಲ್ ಪಯಣ
ಗೂಗಲ್ ಸಂಸ್ಥಾಪಕ ಲಾರೆನ್ಸ್ ಲಾರಿ ಪೇಜ್ ಮತ್ತು ಸೆರ್ಜಿ ಬ್ರಿನ್ ಸಿದ್ಧಪಡಿಸಿದ್ದ ಒರಿಜಿನಲ್ ಸರ್ಚ್ ಅಲ್‌ಗೋರಿಥಂನ್ನು ತಿದ್ದಿದ್ದು ಇದೇ ಅಮಿತ್. ಈ ಅಲ್‌ಗೋರಿಥಂನ್ನು ರಹಸ್ಯವಾಗಿಯೇ ಕಾಪಾಡಲಾಗಿದ್ದು, ಇದನ್ನು ಯಾರೊಂದಿಗೂ ಚರ್ಚಿಸುವ ಹಕ್ಕುಗಳು ಸಿಂಘಾಲ್‌ಗೆ ಇಲ್ಲ !. ಈ ರಹಸ್ಯ ಬಯಲಾದರೆ ಇದು ಗೂಗಲ್‌ನ ಎಲ್ಲ ರೀತಿಯ ಕಾರ್ಯಗಳನ್ನು ಬಾಧಿಸುತ್ತದೆ ಎಂಬ ಕಾರಣದಿಂದಲೇ ಈ ರೀತಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೀಗೆ ಗೂಗಲ್‌ನ ಜೀವನಾಡಿಯಾಗಿ ಕೆಲಸ ನಿರ್ವಹಿಸಿದ್ದ ಸಿಂಘಾಲ್ ಫೆಬ್ರವರಿ 26 ರಂದು ನಿವೃತ್ತರಾಗಲಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಮೂಲದ ಸಿಂಘಾಲ್ 2000 ಇಸ್ವಿಯಿಂದ ಗೂಗಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಗೂಗಲ್ ಫೆಲೋ ಪದವಿಗೂ ಪಾತ್ರರಾಗಿದ್ದಾರೆ.
ಸರ್ಚ್ ಕ್ವಾಲಿಟಿ ತಂಡದ ನೇತೃತ್ವದಲ್ಲಿ ಪ್ರತೀ ವಾರವೂ ಅಲ್‌ಗೋರಿಥಂನಲ್ಲಿ ಬದಲಾವಣೆಗಳನ್ನು ಮಾಡಲ್ಪಡುತ್ತವೆ. ಉದಾಹರಣೆಗೆ ಲಾಲಿಪಾಪ್ ಎಂದು ಯಾರಾದರೂ ಸರ್ಚ್ ಮಾಡಿದರೆ ಅದು ಲಾಲಿಪಾಪ್ ಸಿಹಿತಿಂಡಿಯೋ ಅಥವಾ ಆಂಡ್ರಾಯ್ಡ್ ವರ್ಶನ್ ಬಗ್ಗೆ ಹುಡುಕಿದ್ದೋ ಎಂದು ಅರಿಯುವ ಸಾಮರ್ಥ್ಯ ಆ ಅಲ್‌ಗೋರಿಥಂಗೆ ಇರಬೇಕು. ದಿನ ನಿತ್ಯ 112 ಭಾಷೆಗಳಲ್ಲಿ, ಕೋಟಿಗಟ್ಟಲೆ ಜನರು, ಬಿಲಿಯನ್‌ಗಟ್ಟಲೆ ಪೇಜ್‌ಗಳನ್ನು ಹುಡುಕುತ್ತಿರುತ್ತಾರೆ. ಇದಕ್ಕೆಲ್ಲದಕ್ಕೂ ಗೂಗಲ್ ಉತ್ತರಿಸಬೇಕು. ಅಷ್ಟೇ ಅಲ್ಲ buganizer ಎಂಬ ಆಂತರಿಕ ವ್ಯವಸ್ಥೆ ಮೂಲಕ ಗೂಗಲ್ ಸಂಸ್ಥೆಯ ಉದ್ಯೋಗಿಗಳೇ ಸರ್ಚ್ ಬಗ್ಗೆ ದೂರು ನೀಡುವ ವ್ಯವಸ್ಥೆಯಿದೆ. ಇದಕ್ಕೆಲ್ಲಾ ಉತ್ತರಿಸುವ ಹೊಣೆ ಸಿಂಘಾಲ್‌ದ್ದು.
ಗೂಗಲ್‌ಗೆ ಅತೀ ಹೆಚ್ಚು ಲಾಭ ಗಳಿಸಿಕೊಟ್ಟ AdWords ಆರಂಭವಾಗಿದ್ದು ಸಿಂಘಾಲ್ ಅವರ ಅವಧಿಯಲ್ಲಾಗಿತ್ತು. ನನಗೆ ಸಿಕ್ಕಿದ ಭಾಗ್ಯ ಸಿಗದೇ ಇರುವವರು ಹಲವಾರು ಮಂದಿ ಇರಬಹುದು. ಅವರಿಗೆ ನನ್ನ ಜ್ಞಾನವನ್ನು ದಾಟಿಸಬೇಕಾಗಿದೆ. ಇನ್ನು ಮುಂದಿನ ಕಾಲ ಅದನ್ನು ಮಾಡಬೇಕಾಗಿದೆ ಎಂದು ಅಮಿತ್ ನಿವೃತ್ತರಾಗುವ ಮುನ್ನ ನೀಡಿದ ಪತ್ರದಲ್ಲಿ ಬರೆದಿದ್ದಾರೆ. ಅಮಿತ್ ಅವರ ಆಶಯ ನೆರವೇರಲಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos