ವಿಶೇಷ

ಆ ಪೊಲೀಸ್ ಪಾನಮತ್ತನಾಗಿರಲಿಲ್ಲ, ಆತನಿಗೆ ಸ್ಟ್ರೋಕ್ ಆಗಿತ್ತು!

Rashmi Kasaragodu
ಆ ಪೊಲೀಸ್ ಪೇದೆಯನ್ನು ನೆನಪಿದೆಯಾ? ದೆಹಲಿ ಮೆಟ್ರೋದಲ್ಲಿ ಕುಡಿದು ಪಾನಮತ್ತರಾಗಿ ಬಿದ್ದ ಕೇರಳದ ಸಲೀಂ ಎಂಬ ಪೊಲೀಸ್ ಪೇದೆಯನ್ನು ಜನರು ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ಅವರು ಮೆಟ್ರೋ ರೈಲಿನಲ್ಲಿ ಅಡ್ಡಾದಿಡ್ಡಿ ನಡೆದಾಡಿ ಬೀಳುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್  ಆಗಿತ್ತು!
ಮದ್ಯಪಾನ ಮಾಡಿ ಓಲಾಡುತ್ತಿರುವ ಪೊಲೀಸ್ ಎಂಬ ಶೀರ್ಷಿಕೆಯಲ್ಲಿ ಈ ವೀಡಿಯೋ ಹರಿದಾಡಿತ್ತು. ನೆಟಿಜನ್‌ಗಳ ಪಾಲಿಗೆ ಅದು ತಮಾಷೆ ವೀಡಿಯೋ ಆಗಿತ್ತು. ಆದರೆ ಅಲ್ಲಿ ನಡೆದದ್ದು ಏನೆಂಬುದು ಬೆಳಕಿಗೆ ಬರಲು ತುಂಬಾ ಸಮಯ ಹಿಡಿಯಿತು. 
ಅಂದು ಸಲೀಂ ಮದ್ಯ ಸೇವನೆ ಮಾಡಿರಲಿಲ್ಲ, ಅವರಿಗೆ ಆ ಹೊತ್ತು ಸ್ಟ್ರೋಕ್ (ಲಕ್ವ) ಆಗಿತ್ತು. ಯೆಸ್ ....ಮೆಟ್ರೋನಲ್ಲಿ ಸಂಚರಿಸುತ್ತಿದ್ದಾಗ ಸ್ಟ್ರೋಕ್ ನಿಂದಾಗಿ ಅವರು ಅತ್ತಿತ್ತ ಓಲಾಡಿ ಬಿದ್ದಿದ್ದರು. ಮೂರು ವರ್ಷದ ಹಿಂದೆ ಸಲೀಂ ಸ್ಟ್ರೋಕ್‌ಗೊಳಗಾಗಿದ್ದು ಅದು ಅವರ ದೇಹವನ್ನು ಕುಗ್ಗಿಸಿತ್ತು. ಮುಖದ ಆಕೃತಿಯೂ ಸ್ವಲ್ಪ ಬದಲಾಗಿದ್ದು  ಮಾತನಾಡಲು ಕಷ್ಟವಾಗಿತ್ತು. ಇಂತಿರ್ಪ ಶಾರೀರಿಕವಾಗಿ ಅಸ್ವಸ್ಥನಾಗಿ ಒದ್ದಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಸೋಷ್ಯಲ್ ಮೀಡಿಯಾ ಪಾನಮತ್ತ ಫನ್ನೀ ಮ್ಯಾನ್ ಎಂದು ನಗೆಯಾಡಿತ್ತು!
ಅಗಸ್ಟ್  19,  2015 ರಂದು ಸಲೀಂ ಪಿ.ಕೆ ಎಂಬ ಪೊಲೀಸ್ ಪೇದೆ ಕುಸಿದು ಬೀಳುತ್ತಿರುವ ವೀಡಿಯೋ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿತ್ತು. ಈ ವೀಡಿಯೋ ವೈರಲ್ ಆದಾಗ ಅವರನ್ನು ನೌಕರಿಯಿಂದ ವಜಾಗೊಳಿಸಲಾಯಿತು. ಇದನ್ನು ಕೇಳಿದ ಪತ್ನಿಗೆ ಹೃದ್ರೋಗವೂ ಬಂತು. ಈ ಬಗ್ಗೆ ಸಲೀಂ ನೀಡಿದ ದೂರಿನ ಬಗ್ಗೆ ತನಿಖೆ ನಡೆದಾಗ ಆತನಗೆ ಸ್ಟ್ರೋಕ್ ಬಂದಿರುವುದು ಎಂಬುದು ತಿಳಿದು ಬಂತು. ಆಮೇಲೆ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು.
ವೀಡಿಯೋ ವೈರಲ್ ಆದ ಕಾಲದಲ್ಲಿ ದೆಹಲಿ ಪೊಲೀಸ್ ಕಮಿಷನರ್ ಬಿ.ಎಸ್ ಬಸ್ಸಿ ಅವರಲ್ಲಿ, ನಾನು ಮದ್ಯ ಸೇವನೆ ಮಾಡಿರಲಿಲ್ಲ. ಔಷಧಿ ಸೇವಿಸಿರಲಿಲ್ಲ. ದೇಹ ಸುಸ್ತಾಗಿ ಬಿದ್ದು ಬಿಟ್ಟೆ ಎಂದು ಸಲೀಂ ಪರಿಪರಿಯಾಗಿ ಬೇಡಿಕೊಂಡರೂ ಆಗ ಯಾರೊಬ್ಬರೂ ಸಲೀಂ ಮಾತು ಕೇಳಲಿಲ್ಲ. 
ಮಾಧ್ಯಮಗಳು ಕೂಡಾ ಸಲೀಂನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಭಾರೀ ಸುದ್ದಿ ಮಾಡಿದ್ದವು. ಈ ಬಗ್ಗೆ ಸಲೀಂ ಅವರಿಗೆ ತುಂಬಾ ಬೇಸರವಿದೆ. ಇಷ್ಟೆಲ್ಲಾ ಆದರೂ, ಸಲೀಂ ಮತ್ತೆ ಸೇವೆಗೆ ಸೇರಿರುವ ಬಗ್ಗೆಯಾಗಲೀ, ಸಲೀಂ ತಪ್ಪಿತಸ್ಥ ಅಲ್ಲ ಎಂಬುದರ ಬಗ್ಗೆಯಾಗಲೀ ಯಾವುದೇ ಮಾಧ್ಯಮಗಳು ವರದಿ ಮಾಡಲಿಲ್ಲ.
ಸಲೀಂ ಅವರ ನಿಜವಾದ ಪರಿಸ್ಥಿತಿ ಅವರ ಕುಟುಂಬದವರಿಗೆ ಮಾತ್ರ ಗೊತ್ತು. ಆದರೆ ವೀಡಿಯೋ ಮೂಲಕ ನಗೆಪಾಟಲಿಗೀಡಾಗಿ ಅವಮಾನಿತನಾದ ಸಲೀಂ, ಈಗ ವೀಡಿಯೋ ಮಾಡಿದವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ. 
ನಿಜ ಪರಿಸ್ಥಿತಿಯನ್ನರಿಯದೆ ವೀಡಿಯೋ ಮಾಡಿ ಅದನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟು ತಮಾಷೆ ಮಾಡುವ ಮುನ್ನ ಗಮನಿಸಿ...ನಿಮ್ಮ ಒಂದು ಕ್ಷಣದ ತಮಾಷೆ ಆ ವ್ಯಕ್ತಿಯ ಬದುಕನ್ನೇ ದುಸ್ಥರವನ್ನಾಗಿ ಮಾಡಿಬಿಡಬಹುದು. ಇನ್ನೊಬ್ಬರ ಬದುಕಿನ ಜತೆ ಆಡುವಾಗ ನಾಳೆ ಆ ಸ್ಥಾನದಲ್ಲಿ ನಾವಿದ್ದರೆ? ಎಂದು ಒಮ್ಮೆ ಯೋಚಿಸಿದರೆ ಸಾಕು...
SCROLL FOR NEXT