ವಿಶೇಷ

72ರ ಇಳಿವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ!

Sumana Upadhyaya

ನವದೆಹಲಿ: ಪಂಜಾಬ್ ನ ಅಮೃತಸರ ಮೂಲದ 72 ವರ್ಷದ ದಲ್ಜಿಂದರ್ ಕೌರ್ ಎಂಬ ಮಹಿಳೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿರುವ ಆಶ್ಚರ್ಯಕರ ಘಟನೆ ನಡೆದಿದೆ.

ಕೌರ್ ಅವರಿಗೆ ಕಳೆದ ಎಪ್ರಿಲ್ 19ರಂದು ಮಗುವಾಗಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗಿ 46 ವರ್ಷದ ಬಳಿಕ ಮತ್ತು ಋತುಬಂಧ ನಿಂತ 20 ವರ್ಷದ ನಂತರ ಮಗುವಾಗಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಈ ಇಳಿ ವಯಸ್ಸಿನಲ್ಲಿ  ಮಗು ಹೊಂದಬೇಕೆಂಬ ದಂಪತಿಯ ಬಯಕೆಗೆ ನೆರವಾದದ್ದು ಪ್ರನಾಳಿಯ ಫಲೀಕರಣ (ಐವಿಎಫ್ ಟೆಸ್ಟ್ ಟ್ಯೂಬ್) ತಂತ್ರಜ್ಞಾನ. ಅಂಡಾಣು ಹಾಗೂ ವೀರ್ಯದ ಮೂಲಕ ಕೃತಕ ಗರ್ಭಧಾರಣೆಗಾಗಿ ವೈದ್ಯರು 2013ರಲ್ಲಿ ಐವಿಎಫ್ ತಂತ್ರಜ್ಞಾನ ಪ್ರಯೋಗಿಸಿದರು. ಆದರೆ ಪ್ರಯತ್ನ ಫಲ ನೀಡಲಿಲ್ಲ. ಎರಡನೇ ಸಲ ಕೂಡ ವಿಫಲವಾದಾಗ ಕೌರ್ ಹಾಗೂ 79ರ ಪತಿ ಮೋಹಿಂದರ್ ಸಿಂಗ್ ನಿರಾಶರಾಗಿದ್ದರು. ಆದರೆ ಮೂರನೇ ಬಾರಿ ಪ್ರಯತ್ನ ಫಲ ಕೊಟ್ಟಿತು.

ಅಪಾರ ಖುಷಿಯಾಗಿರುವ ದಂಪತಿ ವೈದ್ಯರಿಗೆ ಧನ್ಯವಾದ ಹೇಳುತ್ತಾರೆ. ಹರ್ಯಾಣದ ಹಿಸ್ಸಾರ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಫರ್ಟಿಲಿಟಿ ಮತ್ತು ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯ ಅನುರಾಗ್ ಬಿಷ್ಣೋಯಿ, ಎಲ್ಲಾ ಮಕ್ಕಳಂತೆ ಈ ಮಗು ಕೂಡಾ ಬೆಳವಣಿಗೆ ಹೊಂದಲಿದೆ. ಆಸ್ಪತ್ರೆಯಲ್ಲಿ 2006ರಲ್ಲಿ 70 ವರ್ಷದ ವೃದ್ಧೆ ರಾಜೋ ದೇವಿ ಎಂಬವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.2008ರಲ್ಲಿ 66 ವರ್ಷದ ಮಹಿಳೆ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಜನ್ಮವೆತ್ತಿದ್ದರು. ಇದು ಮೂರನೇ ಪ್ರಕರಣ ಎಂದು ಹೇಳಿದ್ದಾರೆ.

SCROLL FOR NEXT