ನವದೆಹಲಿ: ಇದು ವೈದ್ಯಲೋಕಕ್ಕೆ ವಿಸ್ಮಯ ಮೂಡಿಸಿದ ಪ್ರಕರಣ. ನವಜಾತ ಶಿಶುವಿನ ಗರ್ಭದಲ್ಲಿ ಅವಳಿ ಮಕ್ಕಳ ಭ್ರೂಣ ವಿರುವುದು ಭಾರತದಲ್ಲಿ ಪತ್ತೆಯಾಗಿರುವುದು ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ.
ನವಜಾತ ಶಿಶುವಿನ ಭ್ರೂಣದೊಳಗಿನ ಅವಳಿ ಭ್ರೂಣವು ಸಂಪೂರ್ಣ ಬೆಳವಣಿಗೆ ಕಂಡು ಮೆದುಳು, ಕೈ, ಕಾಲುಗಳನ್ನು ಹೊಂದಿರುವುದನ್ನು ವೈದ್ಯರ ಗಮನಕ್ಕೆ ಬಂದಿದೆ.
ವಿಶ್ವದಲ್ಲಿ ಈ ವರೆಗೆ ಪತ್ತೆಯಾಗಿರುವ ಸುಮಾರು 200 ಅತ್ಯಪರೂಪದ ಭ್ರೂಣದೊಳಗಿನ ಭ್ರೂಣದ ಪ್ರಕರಣಗಳಲ್ಲಿ ಇದೂ ಒಂದೆನಿಸಿದೆ.
ನವಜಾತ ಶಿಶುವಿನ ಗರ್ಭದಲ್ಲಿದ್ದ ಸುಮಾರು 7 ಸೆ.ಮೀ. ಉದ್ದದ ಈ ಭ್ರೂಣವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಮುಂಬ್ರಾದ ಬಿಲಾಲ್ ಆಸ್ಪತ್ರೆಯ ರೇಡಿಯಾಲಜಿಸ್ಟ್ ಡಾ. ಭಾವನಾ ಥೋರಟ್ ಅವರು 19 ವರ್ಷದ ಗರ್ಭಿಣಿ ತಾಯಿಯ ಸ್ಕ್ಯಾನಿಂಗ್ ನಡೆಸುವಾಗ ಆಕೆಯ ಹೊಟ್ಟೆಯೊಳಗಿನ ಮಗುವಿನ ಗರ್ಭದೊಳಗೆ ಅದರ ಅವಳಿ ಮಕ್ಕಳ ಭ್ರೂಣ ಇರುವುದನ್ನು ಪತ್ತೆ ಮಾಡಿದ್ದರು.
ಮಗು ಜನಿಸಿದ 9 ದಿನಗಳ ನಂತರ ನವಜಾತ ಶಿಶುವಿನ ಹೊಟ್ಟೆಯ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಅವಳಿ ಸಹೋದರರ ಭ್ರೂಣವಿರುವುದು ತಿಳಿದು ಬಂದಿದೆ.
ಮಗುವಿನ ಗರ್ಭದೊಳಗೆ ಭ್ರೂಣ ಇರುವುದನ್ನು ಮತ್ತು ಅದರ ಮೇಲ್ಭಾಗ ಮತ್ತು ಕಾಲುಗಳ ಕೆಳ ಭಾಗದ ಎಲುಬನ್ನು ನಾನು ಗರ್ಭಿಣಿ ತಾಯಿಯ ಸ್ಕ್ಯಾನಿಂಗ್ ವೇಳೆ ಪತ್ತೆ ಹಚ್ಚಿದೆ. ಇದರಲ್ಲಿನ ಅತ್ಯಂತ ವಿಶೇಷದ ಸಂಗತಿ ಎಂದರೆ ಆ ಬೆಳೆದ ಭ್ರೂಣದ ತಲೆಯನ್ನು ಮತ್ತು ಅದರೊಳಗಿನ ಮೆದುಳನ್ನು ಗುರುತಿಸಿದ್ದಾಗಿ ರೇಡಿಯಾಲಜಿಸ್ಟ್ ಡಾ.ಥ್ರೋಟ್ ಹೇಳಿದ್ದಾರೆ.
ನವಜಾತ ಶಿಶುವಿನ ಗರ್ಭದೊಳಗಿನ ಸುಮಾರು 150 ಗ್ರಾಂ ತೂಕದ ಈ ಬೆಳೆದ ಭ್ರೂಣವನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆಯನ್ನು ಥಾಣೆಯ ಟೈಟಾನ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಶಸ್ತ್ರ ಚಿಕಿತ್ಸೆಗೆ ಒಳಗಾದ ನವಜಾತ ಶಿಶು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಕೆಲವೊಂದು ಬಾರಿ ಈ ರೀತಿಯಾದಾಗ ಪೌಷ್ಟಿಕಾಂಶದ ಕೊರತೆಯಿಂದ ಶಿಶು ಸಾವನ್ನಪ್ಪುವ ಸಾಧ್ಯತೆಯಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos