ಚೆನ್ನೈ-ಮಂಗಳೂರಿನ ಎಕ್ಸ್ ಪ್ರೆಸ್ ರೈಲನ್ನು ನಿರ್ವಹಿಸುವ ಮಹಿಳಾ ತಂಡ.
ಚೆನ್ನೈ: ಮಹಿಳೆಯರಿಗೆ ಭಾರತೀಯ ರೈಲ್ವೆಯಲ್ಲಿ ಪುರುಷರಿಗೆ ಸರಿಸಮನಾಗಿ ಸ್ಥಾನಗಳನ್ನು ನೀಡಲಾಗುತ್ತಿದ್ದು ದಕ್ಷಿಣ ರೈಲ್ವೆ ವಲಯದಲ್ಲಿ ಇದಾಗಲೇ ಗೂಡ್ಸ್ ಗಾರ್ಡ್, ಲೋಕೋ ಪೈಲಟ್ ಗಳಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಚೆನ್ನೈ ವಲಯವು ಇನ್ನೊಂದು ಹೆಜ್ಜೆ ಮುಂದುವರಿದು ಪುರುಷ ಉದ್ಯೋಗಿಗಳ ಪ್ರಾಬಲ್ಯವಿರುವ ರೈಲ್ವೆ ಕೋಚ್ ನಿರ್ವಹಣಾ ಹೊಣೆಯನ್ನೂ ಮಹಿಳೆಯರಿಗೆ ನೀಡಿದೆ.
ಚನ್ನೈನಿಂದ ಮಂಗಳೂರಿಗೆ ಹೊರಡುವ ಮಂಗಳೂರು ಎಕ್ಸ್ ಪ್ರೆಸ್, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪಯಣಿಸುವ ರೈಲುಗಳಲ್ಲಿ ಒಂದಾಗಿದ್ದು ಕಳೆದೊಂದು ವರ್ಷದಿಂದ ಈ ರೈಲಿನ ಸಂಪೂರ್ಣ ನಿರ್ವಹಣೆಯನ್ನು ಮಹಿಳಾ ಸಿಬ್ಬಂದಿಗಳೇ ನೋಡಿಕೊಳ್ಲುತ್ತಿದ್ದಾರೆ.
ಚೆನ್ನೈ ವಿಭಾಗದಲ್ಲಿ ಹಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ವೈ.ಕೆ. ಗೀತಾ ರೈಲ್ವೆನಲ್ಲಿ ಉದ್ಯೋಗಿಗಳಾಗಿರುವ ಮಹಿಳೆಯರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ತಂತ್ರಜ್ಞರು ಮತ್ತು ಸಹಾಯಕರು ಒಳಗೊಂಡ 24 ಮಹಿಳಾ ಸಿಬ್ಬಂದಿಗಳ ತಂಡವನ್ನು ಗೀತಾ ಮೇಲ್ವಿಚಾರಣೆ ನಡೆಸುತ್ತಿದ್ದು ಈ ತಂಡವು ಕಳೆದೊಂದು ವರ್ಷದಿಂದ ಬೇಸಿನ್ ಬ್ರಿಡ್ಜ್ ಯಾರ್ಡ್ ನಲ್ಲಿ ಚೆನ್ನೈ-ಮಂಗಳೂರು ರೈಲ್ವೆಯ 43 ಕೋಚ್ ಗಳನ್ನು ನಿರ್ವಹಿಸುತ್ತಿದ್ದಾರೆ.
ಕಾಮರ್ಸ್ ಪದವೀಧರೆಯಾಗಿರುವ ಗೀತಾ 2002ರಲ್ಲಿ ದಕ್ಷಿಣ ರೈಲ್ವೇಯಲ್ಲಿ ತಂತ್ರಜ್ಞನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.2015 ರಲ್ಲಿ ಕಿರಿಯ ಇಂಜಿನಿಯರ್ ಆಗಿ ಮತ್ತು 2016 ರಲ್ಲಿ ಹಿರಿಯ ಇಂಜಿನಿಯರ್ ವಿಭಾಗಕ್ಕೆ ಭಡ್ತಿ ಪಡೆದಿದ್ದಾರೆ.
"ಪ್ರಾರಂಭದಲ್ಲಿ ನಾನೊಬ್ಬ ತಂತ್ರಜ್ಞಳಾಗಿ ಕೋಚ್ ಗಳ ಪರಿಶೀಲನೆಗೆ ತೆರಳಲು ನನಗ್ಗೆ ಸ್ವಲ್ಪ ಹಿಂಜರಿಕೆ ಇತ್ತು. ಆದರೆ ನಂತರದ ದಿನಗಳಲ್ಲಿ ಸಹೋದ್ಯೋಗಿಗಳ ಸಹಕಾರದಿಂಡ ನಾನು ಈ ಕಾರ್ಯ ನಿರ್ವಹಿಸುವುದನ್ನು ರೂಢಿಸಿಕೊಂಡೆನು" ಗೀತಾ ಹೇಳಿದ್ದಾರೆ.
"ನಾವು ಲೈನ್ ಗಳ ನಿರ್ವಹಣೆ, ಬ್ರೇಕ್ ಪರಿಶೀಲನೆ, ಕೋಚ್ ಗಳ ವಾತಾವರಣದಲ್ಲಿನ ಒತ್ತಡದ ಪರಿಶೀಲನೆಗಳನ್ನು ನಡೆಸುತ್ತೇವೆ.ಜತೆಗೆ ಕೋಚ್ ಗಳ ಪ್ರತಿಯೊಂದು ಚಕ್ರಗಳನ್ನು ಪರಿಶೀಲಿಸುವುದು, ರೈಲಿನ ಒಳಗೆ ಪ್ರಯಾಣಿಕರಿಗೆ ಆರಾಮದಾಯಕ ವಾತಾವರಣವಿದೆ ಎನ್ನುವುದು ಖಚಿತಪಡಿಸಿಕೊಳ್ಳುವುದು ಸಹ ನಮ್ಮ ವ್ಯಾಪ್ತಿಯ ಕೆಲಸಗಳಲ್ಲಿ ಸೇರಿದೆ.
"ನಾವು ಲಿಂಗತಾರತಮ್ಯ ನಿವಾರಣೆಗೆ ಪ್ರಮುಖ ಹೆಜ್ಜೆಯನಿಟ್ಟಿದ್ದು ಮಹಿಳೆಯರು ಸಹ ಪುರುಷರಂತೆ ಭಾರೀ ಗಾತ್ರದ ಕಬ್ಬಿಣದ ಸಲಕರಣೆಗಳನ್ನು ನಾವು ಎತ್ತುವುದು, ಸಾಗಿಸುವುದು ಮಾಡಬೇಕಾಗಿದೆ. ಕರ್ತವ್ಯದ ಭಾಗವಾಗಿ ನಾವದನ್ನು ನಿಭಾಯಿಸುವುದು ಅನಿವಾರ್ಯವಾಗಿತ್ತು" ಗೀತಾ ಹೇಳಿದ್ದಾರೆ.
"ರೈಲಿನ ಏರ್ ಬ್ರೇಕ್ ಗಳ ಪರಿಶೀಲನೆ ಅತ್ಯಂತ ನಿರ್ಣಾಯಕವಾಗಿದೆ. ರೈಲು ಚಾಲನೆಗೊಳ್ಳುವ ಮೊದಲು ನಾವು ಕೋಚ್ ಗಳ ಪ್ರತಿಯೊಂದು ಚಕ್ರಗಳನ್ನು ಪರಿಶೀಲಿಸುತ್ತೇವೆ. ರೈಲ್ವೆ ಪ್ರಯಾಣಿಕರ ಸುರಕ್ಷತೆಯು ಅತ್ಯಂತ ಮುಖ್ಯ ಆದ್ಯತೆಯಾಗಿದೆ" ಗೀತಾ ಹೇಳಿದರು.
ಮಹಿಳಾ ಸಿಬ್ಬಂದಿಗಳು ನಿರ್ವಹಿಸುವ ಕೋಚ್ ಗಳ ಬ್ಗೆಗೆ ಇದುವರೆಗೆ ಯಾವ ದೂರುಗಳೂ ಬಂದಿಲ್ಲ ಎನ್ನುವುದು ಮಹಿಳಾ ಸಿಬ್ಬಂದಿಗಳ ದಕ್ಷತೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಾಗಿದೆ. ಬೇಸಿನ್ ಬ್ರಿಡ್ಜ್ ಯಾರ್ಡ್ ನಲ್ಲಿ ಒಟ್ಟು 1,500 ಸಿಬ್ಬಂದಿಗಳಿದ್ದು ಇದರಲ್ಲಿ ಎಲ್ಲಾ ವಿಭಾಗಗಳ್ ಒಟ್ಟು ಮಹಿಳಾ ಸಿಬ್ಬಂದಿಗಳ ಸಂಖ್ಯೆ ಸುಮಾರು 300ರಷ್ಟಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos