ವಿಶೇಷ

1987 ರಲ್ಲೇ ರೊಬೋಟ್ ಆರತಿ, ಪೂಜೆ: ರೊಬೋಟಿಕ್ಸ್ ಪರಿಕಲ್ಪನೆ ಹೊಸದಾಗಿದ್ದಾಗಲೇ ತಯಾಗಿತ್ತು ಯಂತ್ರ!

Srinivas Rao BV
ತಿರುವನಂತಪುರಂ: ದೇವರ ಪೂಜೆಗೂ ರೋಬೋಟ್ ಗಳನ್ನು ಬಳಕೆ ಮಾಡುವುದು ಇಂದಿನ ಯಾಂತ್ರಿಕ ಯುಗದಲ್ಲಿ ಅಚ್ಚರಿ ಎಂದೇನು ಅನಿಸುವುದಿಲ್ಲ. ಇಂತಹ ಪರಿಕಲ್ಪನೆಯನ್ನು ರೊಬೋಟಿಕ್ಸ್ ಶಬ್ದವೇ ಹೊಸದಾಗಿದ್ದಾಗ ಜಾರಿಗೆ ತಂದಿದ್ದವರ ಯಶೋಗಾಥೆ  ಮಾತ್ರ ಅಚ್ಚರಿಯದ್ದೇ ಸರಿ. 
ವಿಎಸ್ ಸಾಬು 1987 ರಲ್ಲೇ ದೇವರಿಗೆ ಆರತಿ, ಪೂಜೆ ಮಾಡುವ ರೊಬೋಟ್ ನ್ನು ತಯಾರಿಸಿದ್ದರು. ಈ ಯಂತ್ರವನ್ನು ತಯಾರಿಸಿ 32 ವರ್ಷಗಳೇ ಕಳೆದಿದ್ದರೂ ಅಯ್ಯಪ್ಪ ವಿಗ್ರಹಕ್ಕೆ ಆರತಿ, ಪೂಜೆ ಮಾಡುವ ಮೂಲಕ ಈಗಲೂ ಕಾರ್ಯನಿರ್ವಹಿಸುತ್ತಿದೆ. 
ವಿಎಸ್ ಸಾಬು ತಯಾರಿಸಿದ ರೋಬೋಟ್, ದೇಶದಲ್ಲಿ ಮೊದಲ ಸ್ವಾಯತ್ತ ರೋಬೋಟ್ ಆಗಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯದಲ್ಲಿ ನಿರ್ಮಾಣಗೊಂಡಿತ್ತು. ಈ ಆವಿಷ್ಕಾರವನ್ನು ಸ್ವತಃ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಚೇರಿ ಹಾಗೂ ಕೇರಳದ ತಾಂತ್ರಿಕ ಶಿಕ್ಷಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿತ್ತು. 
"ಈ ರೋಬೋಟ್ ನ್ನು ಧಾರ್ಮಿಕ ಬಳಕೆಗಾಗಿ, ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಚನೆ ನನಗೆ ಇರಲಿಲ್ಲ. ಆದರೆ ಈ ರೋಬೋಟ್, ಆರತಿ, ದೇವರ ವಿಗ್ರಹಕ್ಕೆ ಹಾರ ಹಾಕುವುದು ಸೇರಿದಂತೆ ಬಹುತೇಕ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ" ಎನ್ನುತ್ತಾರೆ ಎಲೆಕ್ಟಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರುವ ವಿಎಸ್ ಸಾಬು.  
ಸುಮಾರು 40 ಕೆ. ಜಿ ತೂಕವಿರುವ ಈ ರೋಬೋಟ್ ನ್ನು ಸ್ಕ್ರ್ಯಾಪ್ ಹಾಗೂ ಇತರ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದು, 8-ಬಿಟ್ ಮೈಕ್ರೋ ಪ್ರೊಸೆಸರ್, 5 ಮೋಟರ್ ಗಳನ್ನು ಬಳಕೆ ಮಾಡಲಾಗಿದೆ. ಈ ರೋಬೋಟ್ ನ್ನು ಮ್ಯಾನುಯಲ್‌ ಆಗಿಯೂ ನಿಯಂತ್ರಿಸಬಹುದಾಗಿದೆ. 150 ವ್ಯಾಟ್ ಗಳಷ್ಟು ವಿದ್ಯುತ್ ಶಕ್ತಿಯಿಂದ ಚಾಲನೆ ಮಾಡಬಹುದಾದ ರೊಬೋಟ್ ಶೇ.98 ರಷ್ಟು ನಿಖರತೆ ಹೊಂದಿದೆ. 
SCROLL FOR NEXT