ವಿಶೇಷ

ಜನ ಗಣ ಮನ ರಾಷ್ಟ್ರಗೀತೆಯ ಸಂಪೂರ್ಣ ಚರಣ ಹಾಡುವ ಈ ಅಜ್ಜಿಯ ಗಾನ ಕೇಳಿ!

Sumana Upadhyaya

ಮೈಸೂರು: ವಿಷಯದ ಮೇಲಿನ ಆಸಕ್ತಿ, ಉತ್ಸಾಹವಿದ್ದರೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಮೈಸೂರಿನ 88 ವರ್ಷದ ಈ ಅಜ್ಜಿಯೇ ಸಾಕ್ಷಿ. 


ನಮ್ಮ ಮೂಲ ರಾಷ್ಟ್ರಗೀತೆಯಲ್ಲಿ 5 ಚರಣಗಳಿವೆ. ಅದರಲ್ಲಿ ಒಂದು ಸಣ್ಣ ಭಾಗವನ್ನು ಇಂದು ನಾವೆಲ್ಲರೂ ಹಾಡುತ್ತೇವೆ. ಆದರೆ ಈ ಅಜ್ಜಿ ಐದೂ ಚರಣಗಳನ್ನು ನೆನಪಿನಲ್ಲಿಟ್ಟುಕೊಂಡು ಸಂಪೂರ್ಣವಾಗಿ ಹಾಡುತ್ತಾರೆ. 


ಇಂದು ಸ್ವಾತಂತ್ರ್ಯ ದಿನಾಚರಣೆ, ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ಈ ಅಜ್ಜಿ ತಮ್ಮ ಮಕ್ಕಳು, ಮೊಮ್ಮಕ್ಕಳು, ಅಕ್ಕಪಕ್ಕದ ಮನೆಯವರನ್ನು ಒಟ್ಟು ಸೇರಿಸಿ ಕೂರಿಸಿ ಇಡೀ ರಾಷ್ಟ್ರಗೀತೆಯನ್ನು ಹಾಡುತ್ತಾರೆ. ಈ ಅಜ್ಜಿಯ ಹೆಸರು ಸರಸ್ವತಿ ಬಡೆಕ್ಕಿಲ್ಲ. 


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅಜ್ಜಿ ಸರಸ್ವತಿ, ನಾನು ನಾಲ್ಕನೇ ಕ್ಲಾಸಿನಲ್ಲಿರುವಾಗ ರವೀಂದ್ರನಾಥ ಠಾಕೂರರು ಬಂಗಾಳಿಯಲ್ಲಿ ಬರೆದ ಮೂಲ ರಾಷ್ಟ್ರಗೀತೆಯ ಸಂಪೂರ್ಣ 5 ಚರಣಗಳನ್ನು ಹೊತ್ತ ಕಿರು ಪುಸ್ತಕವನ್ನು ನಮಗೆ ಕೊಟ್ಟಿದ್ದರು. ಅದರಲ್ಲಿ ಒಂದು ಭಾಗವನ್ನು ಇಂದು ನಾವು ಹಾಡುತ್ತೇವೆ. ನಾನು ಪ್ರತಿ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರಗೀತೆಯ ಇಡೀ ಚರಣವನ್ನು ಹಾಡುತ್ತೇನೆ ಎಂದರು.


ಈ ದೇಶದ ಪ್ರಜೆಯಾಗಿ ಇಡೀ ಗೀತೆಯನ್ನು ಕಲಿಯುವುದು ನನ್ನ ಕೆಲಸ ಎಂದು ಭಾವಿಸಿ ಅದನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದ್ದೇನೆ. ಇದರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ನಡೆದ ಹೋರಾಟ, ಮಹನೀಯರು ಪಟ್ಟ ಶ್ರಮ ಹಾಗೂ ದೇಶಪ್ರೇಮದ ಬಗ್ಗೆ ವಿವರಿಸಲಾಗಿದೆ. ಮೂಲ ರಾಷ್ಟ್ರಗೀತೆಯಿಂದ ಹೆಕ್ಕಿ ನಾವೆಲ್ಲಾ ಇಂದು ಕೇವಲ 52 ಸೆಕೆಂಡ್ ಗಳ ಗೀತೆಯನ್ನು ಹಾಡುತ್ತೇವೆ ಎಂದರು.


ಸರಸ್ವತಿ ಬಡೆಕ್ಕಿಲ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಇಡೀ ರಾಷ್ಟ್ರಗೀತೆಯನ್ನು ಕಲಿಸಲು ಪ್ರಯತ್ನಿಸುತ್ತೇನೆ. ಅವರು ಕೇಳಲು ಇಷ್ಟಪಡುತ್ತಾರೆಯೇ ಹೊರತು ಕಲಿಯುವುದಿಲ್ಲ. ಯಾರಾದರೂ ಮೂಲಗೀತೆಯನ್ನು ಕಲಿಯಲು ಇಚ್ಛಿಸಿದಲ್ಲಿ ನಾನು ಹೇಳಿಕೊಡಲು ಸಿದ್ದ ಎನ್ನುತ್ತಾರೆ ಅಜ್ಜಿ ಸರಸ್ವತಿ.


1918ರಲ್ಲಿ ಮಂಗಳೂರಿನ ಅನ್ನಿ ಬೆಸೆಂಟ್ ಅವರು ಸ್ಥಾಪಿಸಿದ ಬೆಸೆಂಟ್ ನ್ಯಾಷನಲ್ ಗರ್ಲ್ಸ್ ಶಾಲೆಯಲ್ಲಿ 1947ರವರೆಗೆ ಸರಸ್ವತಿ ಅಜ್ಜಿ ಎಸ್ಎಸ್ಎಲ್ ಸಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಗುರುಗಳಾದ ಪಿ ಕೆ ನಾರಾಯಣ ಅವರು ಬರೆದ ಹಲವು ಗೀತೆಗಳನ್ನು ಕೂಡ ಈ ಅಜ್ಜಿ ಹಾಡುತ್ತಾರೆ.


ಇವರ ತಂದೆ ಕನ್ನಡ ಸಾಹಿತಿಯಾಗಿದ್ದರಂತೆ ಮತ್ತು ಪಂಪಮಹಾಕವಿ ಪ್ರಶಸ್ತಿ ಪುರಸ್ಕೃತರು, ಅವರು ಅಂದಿನ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿದ್ದರಂತೆ. 


ಮಹಾತ್ಮಾ ಗಾಂಧೀಜಿಯವರು ಮಂಗಳೂರಿಗೆ ಬಂದಿದ್ದಾಗ ನಾನು ಎರಡೂವರೆ ವರ್ಷದ ಪುಟ್ಟ ಮಗು. ಆಗ ನನ್ನ ಮೈಮೇಲೆ ಬಿಸಿನೀರು ಬಿದ್ದು ಗಾಯವಾಗಿದ್ದರಿಂದ ನನ್ನ ತಂದೆ ಗಾಂಧೀಜಿಯವರನ್ನು ನೋಡಲು ಕರೆದುಕೊಂಡು ಹೋಗಿರಲಿಲ್ಲ. ಇಲ್ಲದಿದ್ದರೆ ನನಗೆ ಗಾಂಧೀಜಿಯವರನ್ನು ನೋಡುವ ಸೌಭಾಗ್ಯ ಸಿಗುತ್ತಿತ್ತು ಎಂದು ಅಜ್ಜಿ ಸರಸ್ವತಿ ಹೇಳುತ್ತಾರೆ. 


ಅಪಾರ ದೇಶಪ್ರೇಮ ಇರಿಸಿಕೊಂಡಿರುವ ಈ ಅಜ್ಜಿ ಇದುವರೆಗೆ ಒಂದು ಚುನಾವಣೆಯನ್ನು ಕೂಡ ತಪ್ಪಿಸಿಕೊಂಡಿಲ್ಲವಂತೆ. ಈ ದೇಶದ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎನ್ನುತ್ತಾರೆ ಸರಸ್ವತಿ ಅಜ್ಜಿ.

SCROLL FOR NEXT