ಜುಬಿಕ್ಷಾ ಠಾಕೂರ್ (ಫೋಟೋ ಕೃಪೆ-ಫೇಸ್ ಬುಕ್/ಟ್ವಿಟ್ಟರ್)
ಭದರ್ವಾ:ಜಮ್ಮು-ಕಾಶ್ಮೀರದ ಕುಗ್ರಾಮವೊಂದರಿಂದ ಬಂದಿರುವ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪೈಲಟ್ 24 ವರ್ಷದ ಜುಬಿಕ್ಷಾ ಠಾಕೂರ್ ಇಂದಿನ ಯುವಕ-ಯುವತಿಯರಿಗೆ ಮಾದರಿಯಾಗಿದ್ದಾರೆ.
ಭಾರತೀಯ ಸೇನೆ ಭದರ್ವಾನಲ್ಲಿ ಆಯೋಜಿಸಿದ್ದ ಸಂಗಮ್ ಯೂತ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದು ತನ್ನ ಜೀವನದ ದಿಕ್ಕನ್ನೇ ಬದಲಿಸಿತು ಎನ್ನುತ್ತಾರೆ ಜುಬಿಕ್ಷಾ ಠಾಕೂರ್.
ಜಮ್ಮುವಿನ ಉದಂಪುರ್ ಜಿಲ್ಲೆಯ ಬಿಲನ್ ಬೌಲಿಯನ್ ಗ್ರಾಮದ ಜುಬಿಕ್ಷಾ ಠಾಕೂರ್ ಈ ವರ್ಷ ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನ ಪೈಲಟ್ ಆಗಿ ಸೇರಿಕೊಂಡರು. ದೇಶದ ಬೆರಳೆಣಿಕೆಯ ಮಹಿಳಾ ಯುದ್ಧ ಪೈಲಟ್ ಗಳಲ್ಲಿ ಜುಬಿಕ್ಷಾ ಠಾಕೂರ್ ಒಬ್ಬರು.
ಭದರ್ವಾದಲ್ಲಿ ನಿನ್ನೆ ರಾಷ್ಟ್ರೀಯ ರೈಫಲ್ಸ್ ಘಟಕದ ವತಿಯಿಂದ ನಡೆದ ಪ್ರೇರೇಪಣೆ ಉಪನ್ಯಾಸದಲ್ಲಿ ಜುಬಿಕ್ಷಾ ಇಂದಿನ ಯುವಜನಾಂಗಕ್ಕೆ ಪ್ರೇರಣೆಯಾಗುವ ಮಾತುಗಳನ್ನಾಡಿದರು. ಯುವ ಜನಾಂಗ ಹೇಗೆ ಕನಸು ಕಾಣಬೇಕು, ಕಂಡ ಕನಸನ್ನು ನನಸು ಮಾಡಲು ಜೀವನದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಹೇಳಿಕೊಟ್ಟರು.
ಅವರು ತಮ್ಮ ಭಾಷಣದಲ್ಲಿ ಹೇಳಿದ ಮಾತುಗಳ ಸಾರಾಂಶ ಇಂತಿದೆ: ''ನಿಮ್ಮ ಕನಸು ಈ ಕ್ಷಣಕ್ಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಅನಿಸಬಹುದು. ಆದರೆ ಅದು ವಾಸ್ತವವಾಗಲು ಕನಸಿನ ಬೆನ್ನತ್ತಿ ನೀವು ಹೋಗಬೇಕು, ಅದಕ್ಕೆ ಕಠಿಣ ಶ್ರಮ, ಸಾಧನೆ ಬೇಕು. ನಾನು ಸಾಧನೆಯನ್ನು ಹಂತ ಹಂತವಾಗಿ ಏರಿದ್ದು, ಈ ಮಧ್ಯೆ ಕೆಲವು ತಪ್ಪುಗಳನ್ನು ಮಾಡಿದ್ದೇನೆ, ಆದರೆ ಅವುಗಳಿಂದ ಕಲಿತು, ತಿದ್ದುಕೊಂಡು ಮುಂದುವರಿದೆ.
ನಿಮ್ಮ ಸೋಲಿಗೆ ಎದೆಗುಂದದೆ, ಕುಗ್ಗದೆ ಮತ್ತು ನಿಮ್ಮ ಮೇಲೆ ನೀವೇ ಕರುಣೆ ತೋರಿಸಿಕೊಳ್ಳದೆ ನಿಮ್ಮ ಏಕಾಗ್ರತೆ ನಿಮ್ಮ ಗುರಿಯನ್ನು ಸಾಧಿಸುವುದಾಗಿರಬೇಕು. ಅದನ್ನು ಈಡೇರಿಸಿಕೊಳ್ಳಲು ನೀವು ಪರಿಶ್ರಮಪಡಬೇಕು. ಶಾಲೆ, ಕಾಲೇಜಿನಲ್ಲಿ ನಾನು ಎನ್ ಸಿಸಿ ಕೆಡೆಟ್ ನಲ್ಲಿದ್ದದ್ದು ನನಗೆ ಕಷ್ಟದ ಸನ್ನಿವೇಶಗಳನ್ನು ಎದುರಿಸಿ ಮುನ್ನುಗ್ಗಲು ಸಹಾಯವಾಯಿತು'' ಎಂದು ಉಪನ್ಯಾಸದಲ್ಲಿ ಹೇಳಿದರು.
ನಂತರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಕೇಂದ್ರೀಯ ವಿದ್ಯಾಲಯದ 12ನೇ ತರಗತಿ ವಿದ್ಯಾರ್ಥಿನಿ ಆರುಶಿ ಮಾತನಾಡಿ, ನಾನು ಯಾವಾಗಲೂ ಡಾಕ್ಟರ್ ಆಗಬೇಕೆಂದು ಯೋಚಿಸುತ್ತಿದ್ದೆ. ಆದರೆ ಇಂದು ಜುಬಿಕ್ಷಾ ಠಾಕೂರ್ ಅವರ ಮಾತುಗಳು ನನ್ನ ಯೋಚನೆಯನ್ನೇ ಬದಲಾಯಿಸಿತು, ಸೇನೆ ಸೇರುವುದು ನನ್ನ ಬಾಲ್ಯದ ಕನಸಾಗಿತ್ತು. ನನ್ನ ಕನಸು ಈಡೇರಿಸಲು ನಾನು ಕಠಿಣ ಶ್ರಮ ವಹಿಸುತ್ತೇನೆ ಎಂದರು.
ಗರ್ ಭದರ್ವಾ ಗ್ರಾಮದ 27 ವರ್ಷದ ಕೋಮಲ್ ಕಟಲ್, ನಾನು ಭಾರತೀಯ ಸೇನೆಗೆ ಸೇರಬೇಕೆಂದು ಯೋಚಿಸಿದ್ದೆ, ಆದರೆ ಈ ರಾಜ್ಯದಲ್ಲಿ ನನಗೆ ಅಷ್ಟು ಅವಕಾಶ ಸಿಗಲಿಲ್ಲ . ನನಗೆ ಈಗ ವಯಸ್ಸು ಮೀರಿರುವುದರಿಂದ ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ, ಆದರೆ ಪ್ರಾಂತೀಯ ಸೇನೆಗೆ ಸೇರಲು ಪ್ರಯತ್ನಿಸುತ್ತೇನೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos