ವಿಶೇಷ

ಇಂದೋರ್ ನ ಶಾಲೆಯಲ್ಲಿ 23 ವರ್ಷಗಳಿಂದ ಮಕ್ಕಳಿಗೆ ಸಂಸ್ಕೃತ ಪಾಠ ಮಾಡುತ್ತಿರುವ ಪಿಯೋನ್!

Sumana Upadhyaya

ಇಂದೋರ್: ಶಾಲೆಗಳಲ್ಲಿ ಜವಾನ(ಪಿಯೋನ್)ನಿಗೇನು ಕೆಲಸ, ಎಲ್ಲರಿಗಿಂತ ಮೊದಲು ಬಂದು ಕಸ ಗುಡಿಸುವುದು, ಸ್ವಚ್ಛ ಮಾಡುವುದು, ವಸ್ತುಗಳನ್ನು ಸರಿಯಾಗಿಡುವುದು, ಶಿಕ್ಷಕರಿಗೆ, ಮಕ್ಕಳಿಗೆ ಬೇಕಾದ ನೀರನ್ನು ತಂದು ತುಂಬಿಸುವುದು ಇತ್ಯಾದಿ...ಇತ್ಯಾದಿ...


ಮಧ್ಯಪ್ರದೇಶದ ಇಂದೋರ್ ನ ಗಿರೊಟ ಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ಜವಾನರಾಗಿ ಸೇವೆ ಸಲ್ಲಿಸುತ್ತಿರುವ ವಾಸುದೇವ ಪಂಚಲ್(53ವ) ಇವೆಲ್ಲಕ್ಕಿಂತ ಮಿಗಿಲಾದ ಕೆಲಸವನ್ನು ಮಾಡುತ್ತಾರೆ. ಹಣೆಯಲ್ಲಿ ತಿಲಕವಿಟ್ಟು, ತಲೆಯಲ್ಲಿ ಜುಟ್ಟು ಬಿಟ್ಟು ಪ್ರತಿದಿನ ಬೆಳಗ್ಗೆ ಶಾಲೆಗೆ ಎಲ್ಲರಿಗಿಂತ ಮುಂಚೆಯೇ ಹೋಗುತ್ತಾರೆ. ತನ್ನ ನಿತ್ಯದ ಕಸ ಗುಡಿಸುವುದು, ಸ್ವಚ್ಛ ಮಾಡುವುದು, ಪೀಠೋಪಕರಣಗಳನ್ನು ಸ್ವಚ್ಛ ಮಾಡಿ ಒಪ್ಪ ಓರಣವಾಗಿ ಇಟ್ಟ ನಂತರ ಮಕ್ಕಳೆಲ್ಲ ಬಂದ ಮೇಲೆ ತನ್ನ ಮುಂದಿನ ಕಾಯಕಕ್ಕೆ ತೊಡಗುತ್ತಾರೆ.


ಅದೇನೆಂದರೆ ಮಕ್ಕಳಿಗೆ ಸಂಸ್ಕೃತ ಪಾಠ ಮಾಡುವುದು. ಈ ಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರು ಇಲ್ಲ, ಇಂದೋರ್ ಜಿಲ್ಲಾ ಕೇಂದ್ರದಿಂದ ಈ ಶಾಲೆ 40 ಕಿಲೋ ಮೀಟರ್ ದೂರದಲ್ಲಿರುವುದರಿಂದ ಯಾವ ಶಿಕ್ಷಕರು ಕೂಡ ಬರಲು ಒಪ್ಪುವುದಿಲ್ಲವಂತೆ, ಹೀಗಾಗಿ ಕಳೆದ 23 ವರ್ಷಗಳಿಂದ ಪಂಚಲ್ ಅವರೇ ಸಂಸ್ಕೃತವನ್ನು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಈ ಶಾಲೆಯಲ್ಲಿ ಸುಮಾರು 175 ಮಕ್ಕಳಿದ್ದಾರೆ, ಇವರಿಗೆ ಇರುವುದು ಮೂರೇ ಶಿಕ್ಷಕರು. ವಾಸುದೇವ ಪಂಚಲ್ ಇದೇ ಶಾಲೆಯಲ್ಲಿ ಓದಿ ಸಂಸ್ಕೃತ ಕಲಿತಿರುವುದರಿಂದ ಮಕ್ಕಳಿಗೆ ಸಂಸ್ಕೃತ ಹೇಳಿಕೊಡುತ್ತಾರೆ. ಪ್ರತಿದಿನ ಎರಡು ಕ್ಲಾಸ್ ತೆಗೆದುಕೊಳ್ಳುತ್ತಾರೆ. ಮಕ್ಕಳಿಗೆ ಸಹ ಇವರ ಪಾಠ ಇಷ್ಟವಾಗುತ್ತದೆ.


ಕಳೆದ ವರ್ಷ ಈ ಹೈಸ್ಕೂಲ್ ನಲ್ಲಿ 10ನೇ ತರಗತಿಯಲ್ಲಿ ಶೇಕಡಾ 100 ಫಲಿತಾಂಶ ಬಂದಿತ್ತು. ಪಂಚಲ್ ಅವರ ಶ್ರೇಷ್ಠ ಕಾಯಕವನ್ನು ರಾಜ್ಯ ಸರ್ಕಾರ ಗುರುತಿಸಿ ಮುಖ್ಯಮಂತ್ರಿಗಳ ವಿಶಿಷ್ಠ ಪ್ರಶಸ್ತಿಗೆ ಆಯ್ಕೆಮಾಡಿತ್ತು. ಭೋಪಾಲ್ ನಲ್ಲಿ ಕಳೆದ ವಾರ ಪಂಚಲ್ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಿದರು ಎಂದು ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ನಿಂಗವಾಲ್ ಹೇಳುತ್ತಾರೆ.

SCROLL FOR NEXT