ವಿಶೇಷ

ರಾಜಸ್ಥಾನ: ಮಹಿಳಾ ಸರ್ಪಂಚ್ ನೇತೃತ್ವ; ಗ್ರಾಮವನ್ನು ಮದ್ಯ ಮುಕ್ತ ಮಾಡಲು ಮತ ಚಲಾಯಿಸಿದ ಹಳ್ಳಿಗರು!

Lingaraj Badiger

ಜೈಪುರ: ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ಥಾನೆಟಾ ಗ್ರಾಮದ ಮಹಿಳಾ ಸರ್ಪಂಚ್ ನೇತೃತ್ವದಲ್ಲಿ ತಮ್ಮ ಗ್ರಾಮವನ್ನು ಮದ್ಯ ಮುಕ್ತ ಮಾಡಲು ಗ್ರಾಮಸ್ಥರು ಶುಕ್ರವಾರ ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದ್ದು, ಪಂಚಾಯತ್‌ನಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಗೆಲುವು ಸಿಕ್ಕಿದೆ.

ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಮಾಡಬೇಕೆ ಅಥವಾ ಬೇಡವೇ ಎಂಬ ವಿಚಾರವನ್ನು ಮತಕ್ಕೆ ಹಾಕಲಾಗಿದ್ದು, ಅರ್ಹ 3245 ಮತದಾರರಲ್ಲಿ 2206 ಮಂದಿ ಮದ್ಯ ನಿಷೇಧದ ಪರವಾಗಿ ಮತ ಚಲಾಯಿಸಿದ್ದಾರೆ. ನಿಷೇಧದ ವಿರುದ್ಧ ಕೇವಲ 61 ಮತ ಚಲಾಯಿಸಲಾಗಿದ್ದು, 40 ಮತಗಳು ಅಮಾನ್ಯವೆಂದು ಘೋಷಿಸಲಾಗಿದೆ. ಅಂತಿಮವಾಗಿ ಗ್ರಾಮದ ಮಹಿಳೆಯರ ಮದ್ಯ ವಿರೋಧಿ ಅಭಿಯಾನಕ್ಕೆ ಜಯ ಸಿಕ್ಕಿದೆ.

ಗ್ರಾಮದಲ್ಲಿ ಶುಕ್ರವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮತ್ತು ಕಲೆಕ್ಟರ್ ಅರವಿಂದ್ ಪೋಸ್ವಾಲ್ ಮತ್ತು ಎಸ್‌ಡಿಎಂ ಸಿಪಿ ವರ್ಮಾ ಸೇರಿದಂತೆ ರಾಜಸಮಂದ್ ಜಿಲ್ಲಾಡಳಿತದ ಅಧಿಕಾರಿಗಳು ಈ ಮತದಾನದ ಮೇಲ್ವಿಚಾರಣೆ ಮಾಡಿದರು. ಈ ವಿಶೇಷ ಮತದಾನವನ್ನು ರಾಜಸ್ಥಾನ್ ಅಬಕಾರಿ ನಿಯಮಗಳ ಅಡಿಯಲ್ಲಿ ನಡೆಸಲಾಯಿತು, ಈ ನಿಯಮ ಶೇ. 50 ರಷ್ಟು ನಿವಾಸಿಗಳು ಮಧ್ಯ ನಿಷೇಧದ ಪರವಾಗಿ ಮತ ಚಲಾಯಿಸಿದರೆ ಮದ್ಯದಂಗಡಿಯೊಂದನ್ನು ಮುಚ್ಚುವ ಅಧಿಕಾರವನ್ನು ಪಂಚಾಯತ್‌ಗೆ ನೀಡುತ್ತದೆ.

ಈ ಫಲಿತಾಂಶದಿಂದ ನಮಗೆ ಸಂತೋಷವಾಗಿದೆ. ನಮ್ಮ ಹಳ್ಳಿಯ ಜನ ಬಯಸಿದಂತೆ ಅಂತಿಮವಾಗಿ ಮದ್ಯ ನಿಷೇಧವಾಗಿದೆ. ಎಲ್ಲಾ ಮದ್ಯದಂಗಡಿಗಳನ್ನು ನಿಷೇಧಿಸಬೇಕೆಂದು ನಾವು ಬಯಸುತ್ತೇವೆ. ಮದ್ಯ ನಿಷೇಧ ಸಂಬಂಧ ನಾವು ಕಳೆದ ಹಲವಾರು ತಿಂಗಳುಗಳಿಂದ ಜನರ ಬೆಂಬಲದೊಂದಿಗೆ ನಡೆಸಿದ ಹೋರಾಟ ಫಲ ನೀಡಿದೆ ಎಂದು ಥಾನೆಟಾ ಗ್ರಾಮ ಸರ್ಪಂಚ್, ದೀಕ್ಷಾ ಚೌಹಾನ್ ಅವರು ಹೇಳಿದ್ದಾರೆ.

SCROLL FOR NEXT