ವಿಶೇಷ

ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ 2021: ಭಾರತ ತಂಡಕ್ಕೆ ಬೆಳಗಾವಿಯ ಮೂವರು ಫುಟ್ಬಾಲ್ ಆಟಗಾರರು ಆಯ್ಕೆ

Srinivas Rao BV

ಬೆಳಗಾವಿ: ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್-2021 ನಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಬೆಳಗಾವಿಯ ಮೂವರು ಫುಟ್ಬಾಲ್ ಆಟಗಾರರು ಆಯ್ಕೆಯಾಗಿದ್ದಾರೆ. 

ಉಕ್ರೇನ್ ನಲ್ಲಿ ಈ ತಿಂಗಳು ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್-2021 ನಡೆಯಲಿದೆ. ಅಂಜಲಿ ಹಿಂಡಲ್ಗೆಕರ್, ಅದಿತಿ ಜಾಧವ್, ಪ್ರಿಯಾಂಕ ಕಂಗ್ರಾಲ್ಕರ್ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದು, ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

ಇವರ ಜೊತೆಗೆ ಬೆಂಗಳೂರಿನ ವಿಭಾ, ಸಂಜನಾ ಅವರೂ ರಾಷ್ಟ್ರ ಮಟ್ಟದ ತಂಡಕ್ಕೆ ಆಯ್ಕೆಯಾಗಿದ್ದು, 11 ಮಂದಿಯ ಭಾರತ ಫುಟ್ಬಾಲ್ ತಂಡದಲ್ಲಿ 5 ಸದಸ್ಯರೊಂದಿಗೆ ಕರ್ನಾಟಕದ ಪ್ರತಿನಿಧಿಗಳು ಸಿಂಹಪಾಲು ಹೊಂದಿದ್ದಾರೆ. 

ಬೆಂಗಳೂರಿನಲ್ಲಿ ಜುಲೈ ಕೊನೆಯ ವಾರದಲ್ಲಿ ಆಯ್ಕೆಯಾಗಿರುವ ಎಲ್ಲಾ ಆಟಗಾರರು 8 ದಿನಗಳ ಕಾಲ ವಿಶೇಷ ತರಬೇತಿ ಪಡೆದಿದ್ದಾರೆ. ಅಂಜಲಿ, ಅದಿತಿ, ಪ್ರಿಯಾಂಕ ಬೆಳಗಾವಿಯ ಯುನೈಟೆಡ್ ಫುಟ್ಬಾಲ್ ಅಕಾಡೆಮಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದು ಮಟೀನ್ ಇನಾಮ್ದಾರ್ ಅವರು ಕೋಚ್ ಆಗಿದ್ದಾರೆ. 

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸೂಪರ್ ಡಿವಿಷನ್ ಲೀಗ್ ಪಂದ್ಯಗಳಿಂದ ಯುವ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಂಜಲಿ ಹಿಂಡಲ್ಗೆಕರ್ ಬಿಕಾಂ ವಿದ್ಯಾರ್ಥಿನಿಯಾಗಿದ್ದು ಕೆಎಲ್ಇಯ ಲಿಂಗರಾಜ ಕಾಲೇಜು, ಬೆಳಗಾವಿಯಲ್ಲಿ ವ್ಯಾಸಂಗ  ಮಾಡುತ್ತಿದ್ದಾರೆ. "ಭಾರತ ತಂಡದ ಭಾಗವಾಗುವುದಕ್ಕೆ ನಾನು ಉತ್ಸುಕಳಾಗಿದ್ದೇನೆ. ಆಯ್ಕೆಯಾಗುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಉತ್ತಮವಾಗಿ ಆಡಲಿದ್ದೇನೆ ಎಂಬ ವಿಶ್ವಾಸವಿದ್ದು ಬೆಳಗಾವಿ ಹೆಮ್ಮೆಪಡುವಂತೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. 

SCROLL FOR NEXT