ವಿಶೇಷ

ಅದ್ದೂರಿ ವಿವಾಹಕ್ಕೆ ಬ್ರೇಕ್ ಹಾಕಿ, ಸರಳ ವಿವಾಹವಾದ ಜೋಡಿ; ಕೋವಿಡ್ ರಿಲೀಫ್ ಫಂಡ್ ಗೆ 37 ಲಕ್ಷ ರೂ. ದೇಣಿಗೆ!

Srinivasamurthy VN

ತಿರುಪ್ಪೂರ್: ತಮಿಳುನಾಡಿನ ವಿಶೇಷ ಜೋಡಿಯೊಂದು ತಮ್ಮ ಅದ್ದೂರಿ ವಿವಾಹಕ್ಕೆ ಬ್ರೇಕ್ ಹಾಕಿ ಅದೇ ಹಣವನ್ನು ಕೋವಿಡ್- ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ.

ಹೌದು.. ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಅನು ಮತ್ತು ಅರುಳ್ ಪ್ರಾಣೇಶ್ ಜೋಡಿ ಸರಳವಾಗಿ ವಿವಾಹವಾಗಿ ಬಾಕಿ ಹಣವನ್ನು ಕೋವಿಡ್ ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ. ಇದೇ ಜೂನ್ 14ರಂದು ಈ ಜೋಡಿಯ ವಿವಾಹ ನೆರವೇರಿದ್ದು, ಮದುವೆಗಾಗಿ ಈ ಜೋಡಿ 50 ಲಕ್ಷ  ರೂಗಳನ್ನು ಅಂದಾಜಿಸಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಇವರ ಮದುವೆಗೆ ಸುಮಾರು 13 ಲಕ್ಷ ರೂ. ಖರ್ಚಾಗಿದ್ದು ಬಾಕಿ 37 ಲಕ್ಷ ರೂಗಳನ್ನು ಕೋವಿಡ್ ರಿಲೀಫ್ ಫಂಡ್ ಗೆ ನೀಡಿದ್ದಾರೆ. ಈ ಪೈಕಿ ಕೆಲ ಸರ್ಕಾರಿ ಸಂಸ್ಥೆಗಳಿಗೆ ಮತ್ತೆ ಒಂದಷ್ಟು ಹಣವನ್ನು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ನೀಡಿದೆ ಎನ್ನಲಾಗಿದೆ.

ಅರುಳ್ ಪ್ರಾಣೇಶ್ ಪ್ಲಾಸ್ಟಿಕ್ ವಸ್ತುಗಳನ್ನು ಉತ್ಪಾದನೆ ಮಾಡುವ ಉದ್ಯಮವನ್ನು ಹೊಂದಿದ್ದಾರೆ. ಮದುವೆ ನಿಶ್ಚಯವಾದಾಗ ಸಾಕಷ್ಟು ಸಂಬಂಧಿಕರು ಕೊರೋನಾ ಸೋಂಕು ಹೆಚ್ಚಳದ ಹಿನ್ನಲೆಯಲ್ಲಿ ಮದುವೆಗೆ ಬರಲು ನಿರಾಕರಿಸಿದರು. ಅಲ್ಲದೆ ಮದುವೆಗಾಗಿ ಬುಕ್ ಮಾಡಲಾಗಿದ್ದ ಮದುವೆ ಹಾಲ್ ನ ಮಾಲೀಕರು ಕೂಡ ಹಣವನ್ನು ವಾಪಸ್ ಮಾಡಿದ್ದರು. ಹೀಗಾಗಿ ನಾವು ನಮ್ಮ ಮದುವೆಯನ್ನು ಮಂದೂಡಬೇಕಾಯಿತು. ಆದರೆ ಜೂನ್ 14ರಂದು ಸರ್ಕಾರದ ಅನುಮತಿ ಮೇರೆಗೆ ವಟ್ಟಮಲೈ ದೇಗುಲದಲ್ಲಿ ಸರಳವಾಗಿ ವಿವಾಹವಾದೆವು ಎಂದು ಅರುಳ್ ಹೇಳಿದ್ದಾರೆ. 

ಅಂತೆಯೇ ನಾನು ತಿರುಪ್ಪೂರು ವೆಸ್ಟ್ ರೋಟರಿ ಕ್ಲಬ್ ನ ಸದಸ್ಯನಾಗಿದ್ದು, ನಮ್ಮ ಮದುವೆಯಲ್ಲಿ ಬಾಕಿ ಉಳಿದ ಹಣವನ್ನು ವಿವಿಧ ಚಾರಿಟಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

SCROLL FOR NEXT