ವಿಶೇಷ

ಕೊರೋನಾ ಗೆದ್ದು ಬಂದ ಬಳ್ಳಾರಿಯ ಶತಾಯುಷಿ ದಂಪತಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ!

Sumana Upadhyaya

ಬಳ್ಳಾರಿ: ಜಿಲ್ಲೆಯ ಗ್ರಾಮವೊಂದರ ಶತಾಯುಷಿ ದಂಪತಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಬಂದಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತುಂಬರಗುಡ್ಡಿ ಗ್ರಾಮದ 103 ವರ್ಷದ ಈರಣ್ಣ ಮತ್ತು ಅವರ ಪತ್ನಿ 101 ವರ್ಷದ ಈರವ್ವ ದಂಪತಿ ಕೊರೋನಾ ಸೋಂಕು ಕಾಣಿಸಿಕೊಂಡು ಒಂದು ವಾರ ಆಸ್ಪತ್ರೆಯಲ್ಲಿದ್ದು ಗುಣಮುಖರಾಗಿ ಬಂದಿದ್ದು, ಗ್ರಾಮಸ್ಥರು ವೃದ್ಧ ದಂಪತಿಗೆ ಹೂವಿನ ಹಾರ ಹಾಕಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಈ ದಂಪತಿಗೆ ಆರಂಭದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗ ಮನೆಯಲ್ಲಿಯೇ ಹೋಂ ಐಸೊಲೇಷನ್ ಗೆ ಒಳಗಾದರು. ಐಸೊಲೇಷನ್ ನಲ್ಲಿದ್ದಾಗ ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಆಗ ಮನೆಯವರು ಅವರನ್ನು ಸಂಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಅದೃಷ್ಟವಶಾತ್ ಅವರಿಗೆ ಯಾವುದೇ ಸಮಸ್ಯೆ ಕಾಣಲಿಲ್ಲ. ಹೀಗಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆ ಕೂಡ ಕೊರೋನಾ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕಿ ನಲುಗಿ ಹೋಗಿದೆ. ಕಳೆದ ಎರಡು ತಿಂಗಳಲ್ಲಿ ಅನೇಕ ಸಾವು ಸಂಭವಿಸಿದೆ. 30ರಿಂದ 55 ವರ್ಷದೊಳಗಿನ ಹಲವರು ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ.

ಶತಾಯುಷಿ ಈರಣ್ಣ ಅವರ ಒಬ್ಬ ಮಗನಿಗೆ ಸೋಂಕು ಕಂಡುಬಂದು ಆಸ್ಪತ್ರೆಗೆ ಸೇರಿಸಿದ್ದರಂತೆ.ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಕೂಡ ವಾರದ ನಂತರ ಪರೀಕ್ಷೆ ನಡೆಸಲಾಗುತ್ತದೆ. ಆಗ ಮಕ್ಕಳಲ್ಲಿ ಕೂಡ ಸೋಂಕು ಕಂಡುಬಂತು. ಇದೀಗ ವೃದ್ಧ ದಂಪತಿ ಗುಣಮುಖರಾಗಿದ್ದು ಗ್ರಾಮಸ್ಥರಿಗೆ ಖುಷಿ ತಂದಿದೆ, ಗ್ರಾಮಸ್ಥರು ಅವರ ಮನೆಗೆ ಹೋಗಿ ಕೊರೋನಾ ವಿರುದ್ಧ ಹೇಗೆ ಹೋರಾಡಬೇಕು, ಏನು ಮದ್ದು ಮಾಡಬೇಕೆಂದು ಕೇಳುತ್ತಿದ್ದಾರೆ.

ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಜನಾರ್ದನ್ ಹೆಚ್ ಎಲ್, ರಾಜ್ಯದಲ್ಲಿ ಕೊರೋನಾದಿಂದ ಸಾಯುವವರ ಪ್ರಮಾಣಕ್ಕಿಂತ ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾದಿಂದ ಸಾಯುವವರ ಸಂಖ್ಯೆ ಅಧಿಕವಾಗಿದೆ. ಈ ಸಮಯದಲ್ಲಿ ಶತಾಯುಷಿಗಳು ಕೊರೋನಾದಿಂದ ಗುಣಮುಖರಾಗುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಜನರು ಕೊರೋನಾ ವಿರುದ್ಧ ಹೋರಾಟದಲ್ಲಿ ಈ ವೃದ್ಧ ದಂಪತಿಯ ಸ್ಪೂರ್ತಿಯನ್ನು ಪಡೆದುಕೊಳ್ಳಬೇಕು ಎನ್ನುತ್ತಾರೆ.

ಹಲವು ದಶಕಗಳಿಂದ ಈ ದಂಪತಿ ಉತ್ತಮ ಜೀವನಶೈಲಿ ಅನುಸರಿಸುತ್ತಿದ್ದಾರೆ. ಅವರ ದೇಹದಲ್ಲಿನ ರೋಗನಿರೋಧಕ ಶಕ್ತಿ, ಆತ್ಮವಿಶ್ವಾಸ ಮತ್ತು ಚಿಕಿತ್ಸೆಗೆ ಸ್ಪಂದಿಸಿದ ರೀತಿ ಚೆನ್ನಾಗಿತ್ತು. ವೃದ್ಧ ದಂಪತಿ ಆಸ್ಪತ್ರೆಯಲ್ಲಿರುವಾಗ ಬೆಳಗ್ಗೆಯೇ ಬೇಗನೆ ಎದ್ದು ವಾಕಿಂಗ್ ಹೋಗುತ್ತಿದ್ದರಂತೆ. ಸೋಂಕು ಬಂತೆಂದು ಹೆದರುತ್ತಿರಲಿಲ್ಲವಂತೆ, ಅದರ ವಿರುದ್ಧ ಉತ್ಸಾಹದಿಂದಲೇ ಹೋರಾಟ ನಡೆಸಿದ್ದರು.

ವೈದ್ಯರು ಹೇಳಿದ ಎಲ್ಲಾ ಸಲಹೆ, ಸೂಚನೆಗಳನ್ನು ಪಾಲಿಸಿದ್ದರು, ಹೀಗಾಗಿ ಎರಡೇ ವಾರಗಳಲ್ಲಿ ಸೋಂಕಿನಿಂದ ಗೆದ್ದು ಬಂದರು ಎನ್ನುತ್ತಾರೆ ಡಾ ಜನಾರ್ದನ್. 

SCROLL FOR NEXT