ವಿಶೇಷ

ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸಿದ ಶಿವಮೊಗ್ಗ ಜಿಲ್ಲೆಯ ರೈತ: ಇದು ಕೊರೋನಾ ಕಲಿಸಿದ ಪಾಠ!

Sumana Upadhyaya

ಶಿವಮೊಗ್ಗ: ಕೊರೋನಾ ಸಂಕಷ್ಟದ ಈ ಸಮಯದಲ್ಲಿ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ, ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ಹಲವರು ಹಣ್ಣು-ತರಕಾರಿ, ಹೂವುಗಳನ್ನು ರಸ್ತೆಯಲ್ಲಿ, ಹೊಂಡಕ್ಕೆ ಚೆಲ್ಲಿದ ಘಟನೆಗಳು ಹಲವು ಜಿಲ್ಲೆಗಳಲ್ಲಿ ನಡೆದಿದೆ.

ಆದರೆ ಶಿವಮೊಗ್ಗ ಜಿಲ್ಲೆಯ ಹೊಟೇಲ್ ಉದ್ಯಮಿ ಹಾಗೂ ಕೃಷಿಕ ಕೊರೋನಾ ಸಂಕಷ್ಟದಲ್ಲಿ ಸೃಜನಶೀಲತೆ ತೋರಿಸಿದ್ದಾರೆ, ಹೇಗೆ ಅಂತೀರಾ ಅವರ ಸಾಧನೆ ಕೇಳಿ:

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಜಯರಾಮ್ ಶೆಟ್ಟಿ ತಮ್ಮ ಎಂಟು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. ಕಲ್ಲಂಗಡಿ ಹಣ್ಣು ಜಮೀನಿನಲ್ಲಿ ಬೆಳೆದಿದೆ, ಕೊಳ್ಳುವವರಿಲ್ಲ ಏನು ಮಾಡುವುದಪ್ಪಾ, ಬೆಳೆದ ಬೆಳೆಯೆಲ್ಲವೂ ನಷ್ಟವಾಯಿತಲ್ಲಾ ಎಂದು ಕೈಚೆಲ್ಲಿ ಕುಳಿತುಕೊಳ್ಳದೆ ಅದರಿಂದ ಬೆಲ್ಲ ತಯಾರಿಸಿದ್ದಾರೆ. ಕಬ್ಬಿನಿಂದ ಹೇಗೆ ಸಾಂಪ್ರದಾಯಿಕವಾಗಿ ಬೆಲ್ಲ ತೆಗೆಯುತ್ತಾರೆಯೋ ಅದೇ ರೀತಿ ಇಲ್ಲಿ ಕಲ್ಲಂಗಡಿ ಹಣ್ಣಿನಿಂದಲೂ ಜಯರಾಮ್ ಶೆಟ್ಟಿ ಬೆಲ್ಲ ತಯಾರಿಸಿದ್ದಾರೆ.

42 ವರ್ಷದ ಜಯರಾಮ್ ಶೆಟ್ಟಿ ಮುಂಬೈಯಲ್ಲಿ ಕಳೆದ 30 ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಕಳೆದ ವರ್ಷ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮೂರಿಗೆ ಹಿಂತಿರುಗಿದರು. ಜಮೀನಿನಲ್ಲಿ ಬೆಳೆ ಬೆಳೆಯಲು ಆರಂಭಿಸಿದರು. ಈಗ ನಿಟ್ಟೂರಿನಲ್ಲಿ ಹೊಟೇಲೊಂದನ್ನು ನಡೆಸುತ್ತಿದ್ದಾರೆ.

ಜಯರಾಮ್ ಶೆಟ್ಟಿ 

ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಮಾತನಾಡಿದ ಅವರು, ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಹಣ್ಣು ಬೆಳೆದೆವು. ಆದರೆ ಕೊರೋನಾ ಲಾಕ್ ಡೌನ್ ನಿರ್ಬಂಧದಿಂದಾಗಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಕೆಲವು ಕೇರಳದ ವ್ಯಾಪಾರಿಗಳು ಒಂದಷ್ಟು ಕಲ್ಲಂಗಡಿಯನ್ನು ಕೆಜಿಗೆ 4 ರೂಪಾಯಿ ಕೊಟ್ಟು ಖರೀದಿಸಿದರು, ಅದರಿಂದ ನಮಗೆ ಅಸಲು ಹಣ ಕೂಡ ಸಿಗಲಿಲ್ಲ. ಆಗ ನಾವು ಮತ್ತು ನಮ್ಮ ಹೊಟೇಲ್ ನ ಸಿಬ್ಬಂದಿ ಸೇರಿ ಬೆಲ್ಲ ತಯಾರಿಸುವ ಕುರಿತು ಯೋಚಿಸಿದೆವು. ತಯಾರಿಸಿಬಿಟ್ಟು ಕೆಲವು ತಿನಿಸುಗಳ ಜೊತೆ ಸೇರಿಸಿ ತಿಂದಾಗ ಒಳ್ಳೆ ರುಚಿ ಬಂತು. ಈ ವರ್ಷ ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಬೆಳೆದು ಮತ್ತೆ 4 ಎಕರೆ ನನ್ನ ಸ್ನೇಹಿತನ ಜಮೀನಿನಲ್ಲಿ ಬೆಳೆದಿದ್ದೇವೆ. ವ್ಯಾಪಾರಿಗಳಲ್ಲಿ ಕೇಳಿದರೆ ಕೆಜಿಗೆ 1 ರೂಪಾಯಿ ಹೇಳುತ್ತಾರೆ, ಹಾಗಾಗಿ ಈ ವರ್ಷ ಕೂಡ ಬೆಲ್ಲ ತಯಾರಿಸಲು ತೀರ್ಮಾನಿಸಿದೆವು ಎಂದರು.

ಕಲ್ಲಂಗಡಿ ಹಣ್ಣಿನಿಂದ ಜ್ಯೂಸ್ ತೆಗೆದು ಅದನ್ನು ಎರಡು ಬಾರಿ ಫಿಲ್ಟರ್ ಮಾಡಲಾಗುತ್ತದೆ. ನಂತರ ಜ್ಯೂಸ್ ನ್ನು 4 ಗಂಟೆಗಳ ಕಾಲ ಕುದಿಸಿ ಅದು ದಪ್ಪ ಆಗುವವರೆಗೆ ಕುದಿಸುತ್ತೇವೆ. ಸುಮಾರು 75 ಕೆಜಿ ಬೆಲ್ಲವನ್ನು ಒಂದು ಟನ್ ಕಲ್ಲಂಗಡಿಯಿಂದ ತೆಗೆಯಬಹುದು ಎನ್ನುತ್ತಾರೆ ಜಯರಾಮ್ ಶೆಟ್ಟಿ.

ನನ್ನ ಬಳಿ ಈಗ 250 ಕೆಜಿ ಬೆಲ್ಲದ ದಾಸ್ತಾನು ಇದೆ. ಆದರೆ ಅದು ಎಷ್ಟು ಸಮಯ ಉಳಿಯಬಹುದು ಎಂಬ ಬಗ್ಗೆ ಖಾತ್ರಿಯಿಲ್ಲ, ಇದು ಐದು ದಿನಗಳ ನಂತರವೂ ಉತ್ತಮ ರುಚಿಯನ್ನು ಹೊಂದಿರುತ್ತದೆ. ಇದನ್ನು ಹೆಚ್ಚು ಸಮಯ ಇರಿಸಿಕೊಳ್ಳಲು ಬಯಸಿದರೆ, ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು ಎನ್ನುತ್ತಾರೆ.

ಕಲ್ಲಂಗಡಿಯಿಂದ ಬೆಲ್ಲ ತಯಾರಿಸಿದ ತಮ್ಮ ಪ್ರಕ್ರಿಯೆ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ವಾಣಿಜ್ಯೀಕರಣವಾಗಿ ಯಶಸ್ವಿಗೊಳಿಸಬೇಕು, ಇದರಿಂದ ರೈತರಿಗೆ ಅನುಕೂಲವಾಗಬಹುದು ಎಂದು ಜಯರಾಮ್ ಶೆಟ್ಟಿ ಹೇಳುತ್ತಾರೆ. 

SCROLL FOR NEXT