ವಿಶೇಷ

ಯೋಧರಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 61'ರ ವೃದ್ಧ ಮ್ಯಾರಥಾನರ್ ಓಟ: ಅಂಥದ್ದೇನು ವಿಶೇಷ ಅಂತೀರಾ? ಹೀಗಿದೆ ವಿವರ

Srinivas Rao BV

ಜಮ್ಮು: ತನ್ನ ವಿಶಿಷ್ಟ ದಾಖಲೆ ನಿರ್ಮಾಣದ ಮೂಲಕ ವಿಕಲಚೇತನ ಯೋಧರಿಗಾಗಿ ನಿಧಿ ಸಂಗ್ರಹದ ಗುರಿಯೊಂದಿಗೆ 61 ವಯಸ್ಸಿನ ವೃದ್ಧ ಮ್ಯಾರಥಾನರ್ (ಓಟಗಾರ) ಕುಮಾರ್ ಅಜ್ವಾನಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಓಟವನ್ನು ಪ್ರಾರಂಭಿಸಿದ್ದಾರೆ.
 
4,444 ಕಿ.ಮೀ ದೂರವನ್ನು 76 ದಿನಗಳಲ್ಲಿ ಓಡುವ ಮೂಲಕ ಈ ವಯಸ್ಸಿನಲ್ಲಿ ಯಾವುದೇ ಭಾರತೀಯರು ಓಟದ ಮೂಲಕ ಕ್ರಮಿಸದ ದೂರವನ್ನು ಕ್ರಮಿಸಿ ದಾಖಲೆ ನಿರ್ಮಾಣ ಮಾಡುವ ಉದ್ದೇಶವನ್ನು ಕುಮಾರ್ ಅಜ್ವಾನಿ ಹೊಂದಿದ್ದಾರೆ. 

ಜಾಗೃತಿ ಮೂಡಿಸುವುದು ಹಾಗೂ ವಿಶೇಷಚೇತನ ಯೋಧರಿಗೆ ನೆರವಾಗುವ ನಿಟ್ಟಿನಲ್ಲಿ ನಿಧಿ ಸಂಗ್ರಹ ಮಾಡುವುದು ಕುಮಾರ್ ಅಜ್ವಾನಿ ಅವರ ಪ್ರಮುಖ ಉದ್ದೇಶವಾಗಿದೆ ಎಂದು ಜಮ್ಮು-ಕಾಶ್ಮೀರ ಮೂಲದ ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ. 

ನ.19 ರಂದು ಉಧಮ್ ಪುರದ ಜಿಲ್ಲೆಯ ಪಟ್ನಿಟಾಪ್ ಹಿಲ್ ರೆಸಾರ್ಟ್ ನಿಂದ ಓಟ ಪ್ರಾರಂಭಿಸಿ ಮೂರನೇ ದಿನಕ್ಕೆ ತಮ್ಮ ಓಟವನ್ನು ಮುಂದುವರೆಸಿರುವ ಕುಮಾರ್ ಅಜ್ವಾನಿ ಅವರಿಗೆ ಜಮ್ಮು-ಕಾಶ್ಮೀರದ ಸೈನಿಕ ಕಲ್ಯಾಣ ಇಲಾಖೆಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.

ನಿವೃತ್ತ ಸೇನಾನಿಗಳ ಸಮ್ಮುಖದಲ್ಲಿ ರಾಜ್ಯ ಸೈನಿಕ ಮಂಡಳಿಯ ಅಧ್ಯಕ್ಷರಾದ ಬ್ರಿಗೆಡಿಯರ್ ಗುರ್ಮೀತ್ ಸಿಂಗ್ ಶಾನ್ ಓಟಕ್ಕೆ ಚಾಲನೆ ನೀಡಿದ್ದರು. 

ಫಿಟ್ನೆಸ್ ಹಾಗೂ ಜಾಗೃತಿ ಮೂಡಿಸುವ, ದಾನದ ಮೂಲಕ ಆನಂದವನ್ನು ಸಾಧಿಸುವ ವಿಷಯವಾಗಿ ಜಾಗೃತಿ ಮೂಡಿಸುತ್ತಿರುವ ಟೀಮ್ ಎಫ್ಎಬಿ ಎಂಬ ಎನ್ ಜಿಒದ ಸ್ಥಾಪಕ-ನಿರ್ದೇಶಕರಾಗಿರುವ ಅಜ್ವಾನಿ ತಮ್ಮ ಈ ಓಟಕ್ಕೆ ಆತ್ಮನಿರ್ಭರ್ ಭಾರತ್ ರನ್ ಎಂಬ ಹೆಸರನ್ನು ನೀಡಿದ್ದಾರೆ. ಕೇವಲ ಯೋಧರಿಗಾಗಿ ನಿಧಿ ಸಂಗ್ರಹವಷ್ಟೇ ಅಲ್ಲದೇ, ಗುಣಮಟ್ಟದ ಶಿಕ್ಷಣ, ಬುಡಕಟ್ಟು ಶಾಲೆಗಳ ಉನ್ನತೀಕರಣ, ಒಂದೇ ಭಾರತ, ಒಗ್ಗಟ್ಟಿನ ಭಾರತ ಎಂಬ ಸಂದೇಶ ಸಾರುವುದೂ ಸಹ ಈ ಓಟದ ಪ್ರಮುಖ ಉದ್ದೇಶವಾಗಿದೆ. 

ಅಜ್ವಾನಿ ಅಲ್ಟ್ರಾ ಮ್ಯಾರಥಾನ್ ರನ್ನರ್ ಆಗಿದ್ದು, ಸಾಮಾಜಿಕ ಉದ್ದೇಶಗಳಿಗಾಗಿ ಅಂತಾರಾಜ್ಯ, ಅಂತರ ನಗರಗಳನ್ನು ಮ್ಯಾರಥಾನ್ ಓಟದ ಮೂಲಕ ತಲುಪಿದ್ದಾರೆ.

SCROLL FOR NEXT