ವಿಶೇಷ

1934ರಲ್ಲಿ ಮಹಾತ್ಮಾ ಗಾಂಧಿಯವರನ್ನು ದಾವಣಗೆರೆಗೆ ಕರೆತರುವಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಮಹತ್ವದ್ದು

Sumana Upadhyaya

ದಾವಣಗೆರೆ: 1934ರಲ್ಲಿ ಭಾರತ ಪ್ರವಾಸ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರಿಗೆ ದಾವಣಗೆರೆಗೆ ಭೇಟಿ ಮಾಡುವ ಯಾವುದೇ ಯೋಜನೆಯಿರಲಿಲ್ಲ. ಆದರೆ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ದೃಢ ಸಂಕಲ್ಪದಿಂದ ಗಾಂಧೀಜಿಯವರ ಪ್ರಶ್ನೆಗಳಿಗೆ ಉತ್ತರಿಸಿ ಅವರ ಷರತ್ತುಗಳನ್ನು ಈಡೇರಿಸಿ ದಾವಣಗೆರೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದರು.

ಇಂದು 87 ವರ್ಷಗಳ ಬಳಿಕ ಕರ್ನಾಟಕದ ಕೇಂದ್ರ ನಗರ ದಾವಣಗೆರೆ ಖುಷಿಯಿಂದ ಸಂಭ್ರಮಿಸಲು ಕಾರಣ ಇಲ್ಲಿ ದೇಶದ ಪಿತಾಮಹ ಬಾಪೂಜಿಯವರು ಇಲ್ಲಿನ ಹರಿಜನ ಕಾಲೊನಿಯಲ್ಲಿ ಹರಿಜನರೊಂದಿಗೆ ಸಂವಾದ ನಡೆಸಿದ್ದರು. ಅದನ್ನೀಗ ಗಾಂಧಿನಗರ ಎಂದು ಕರೆಯಲಾಗುತ್ತಿದೆ. ಗಾಂಧೀಜಿಯವರು ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಹಾಸ್ಟೆಲ್ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಇಂದು ಮಹಾತ್ಮಾ ಗಾಂಧಿಯವರ 152ನೇ ಜಯಂತಿ ಸಂದರ್ಭದಲ್ಲಿ ದಾವಣಗೆರೆಗೆ ಗಾಂಧೀಜಿಯವರನ್ನು ಕರೆತಂದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾರೆ. ಈ ಬಗ್ಗೆ ಸ್ಮರಿಸಿಕೊಂಡಿರುವ ಹಿರಿಯ ಛಾಯಾಗ್ರಾಹಕ ಮತ್ತು ಇತಿಹಾಸತಜ್ಞ ಹೆಚ್ ಬಿ ಮಂಜುನಾಥ್, 1934ರಲ್ಲಿ ಕಸಾಲ ಶ್ರೀನಿವಾಸ್ ಶೆಟ್ಟಿ ಮತ್ತು ಪಾಂಡುರಂಗ ಶಿರೂರು ಮಹಾತ್ಮಾ ಗಾಂಧಿಯವರನ್ನು ಆಹ್ವಾನಿಸಲು ಯೋಜನೆ ಹಾಕಿಕೊಂಡಿದ್ದರು. ಭಾರತ ಪ್ರವಾಸದಲ್ಲಿದ್ದ ಗಾಂಧೀಜಿಯವರಿಗೆ ಪತ್ರ ಬರೆದು ದಾವಣಗೆರೆಗೆ ಭೇಟಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಗಾಂಧೀಜಿ ಹೇಳಿದ್ದೇನು?: ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಗಾಂಧೀಜಿ, ಇಬ್ಬರಿಗೂ ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುತ್ತೀರಾ, ಸ್ವದೇಶಿ ಬಟ್ಟೆಗಳನ್ನು ಧರಿಸುತ್ತೀರಾ ಮತ್ತು ಹರಿಜನರೊಂದಿಗೆ ಒಡನಾಟ ಹೊಂದಿದ್ದೀರಾ ಎಂದು.

ಆಗ ದೃಢವಾಗಿ ಹೌದು ಎಂದು ಇಬ್ಬರೂ ಪ್ರತಿಕ್ರಿಯಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ಇನ್ನೊಬ್ಬರನ್ನು ಸಂಗ್ರಾಮದಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.ಸ್ವದೇಶಿ ಉಡುಪುಗಳನ್ನು ಧರಿಸುತ್ತಿರುವುದಾಗಿಯೂ ಹೇಳಿದರು. ಬೆಳಗ್ಗೆ ಮೆರವಣಿಗೆ ಮುಗಿಸಿ ನಿಯಮಿತವಾಗಿ ಹರಿಜನರೊಂದಿಗೆ ಉಪಾಹಾರ ಸೇವಿಸುತ್ತಿರುವುದಾಗಿ ತಿಳಿಸಿದರು. ಇಬ್ಬರ ಉತ್ತರದಿಂದ ಸಂತುಷ್ಟರಾದ ಗಾಂಧೀಜಿಯವರು ಮತ್ತೊಂದು ಷರತ್ತು ಹಾಕಿದ್ದರು. ಅದೆಂದರೆ ಹರಿಜನರಿಗೆ ಶಾಶ್ವತ ಶಾಲೆ ಮತ್ತು ಹಾಸ್ಟೆಲ್ ಸ್ಥಾಪಿಸಬೇಕೆಂದು, ನಿಯಮಿತವಾಗಿ ಹರಿಜನ ಕಾಲೊನಿಗೆ ಭೇಟಿ ನೀಡಬೇಕೆಂದು ಮತ್ತು ತಾವು ದಾವಣಗೆರೆಗ ಬಂದರೆ ಹರಿಜನರೊಂದಿಗೆ ಉಳಿದುಕೊಳ್ಳುತ್ತೇನೆಂದು ಮಾತು ಕೊಡಬೇಕೆಂದು ಹೇಳಿದರು. ಅದಕ್ಕೆಲ್ಲಾ ಕಸಾಳ ಶ್ರೀನಿವಾಸ ಶೆಟ್ಟಿ ಸಿದ್ಧತೆ ಮಾಡಿಕೊಂಡರು.

ಮಾರ್ಚ್ 2, 1934ರಲ್ಲಿ ಗಾಂಧೀಜಿಯವರು ದಾವಣಗೆರೆಗೆ ಬಂದರು. ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿಯವರ ಮಾವ ಚನ್ನಗಿರಿ ರಂಗಪ್ಪ ರೈಲ್ವೆ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋದರು. ನಂತರ ಗಾಂಧಿ ನಗರಕ್ಕೂ ಕರೆದುಕೊಂಡು ಹೋದರು. ಅದನ್ನು ಹಿಂದೆ ಹರಿಜನ ಕಾಲೊನಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಹರಿಜನ ಹಾಸ್ಟೆಲ್ ಗೆ ಗಾಂಧೀಜಿಯವರು ಶಂಕು ಸ್ಥಾಪನೆ ನೆರವೇರಿಸಿದರು. ಅದನ್ನು ಇಂದು ಗಾಂಧಿ ಸ್ಮಾರಕ ಮಂದಿರ ಎಂದು ಕರೆಯಲಾಗುತ್ತದೆ. 
ದಾವಣಗೆರೆ ಪಟ್ಟಣ ಪಂಚಾಯತ್ ನ ಉಪಾಧ್ಯಕ್ಷ ರಂಗಪ್ಪ ಹರಿಜನ ಹಾಸ್ಟೆಲ್ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನೆನಪು ಮಾಡಿಕೊಳ್ಳುತ್ತಾರೆ. 

SCROLL FOR NEXT