ವಿಶೇಷ

ಗದಗದ ಈ ಪಂಪನಾಶಿ ಗ್ರಾಮದಲ್ಲಿ ಯೋಗವೇ ಉಸಿರು

Nagaraja AB

ಗದಗ: ಗದಗದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಕಪ್ಪತಗುಡ್ಡ ತಪ್ಪಲಿನ  ಪಂಪನಾಶಿ ಗ್ರಾಮದ  ನಿವಾಸಿಗಳು ತಮ್ಮ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ದೈನಂದಿನ ಹೊಲದ ಕೆಲಸಕ್ಕೂ ಮುನ್ನ ರೈತರು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾರೆ. ಇತರ ಗ್ರಾಮಸ್ಥರು ಕೂಡಾ ಪ್ರತಿದಿನ, ಎರಡು ಬಾರಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಸುಮಾರು 2,000 ಜನಸಂಖ್ಯೆ ಇರುವ ಈ ಗ್ರಾಮ 'ಯೋಗ ಗ್ರಾಮ' ವೆಂದೇ ಹೆಸರಾಗಿದೆ. 

ಈ ಗ್ರಾಮದ ಶೇಕಡಾ 80 ರಷ್ಟು ಜನರು, ಔಷಧೀಯ ಸಸ್ಯಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದು, ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ವಿವಿಧ ಅನಾರೋಗ್ಯಕ್ಕೆ ಸಂಬಂಧಿಸಿ ಆಯುರ್ವೇದ ಸಸ್ಯಗಳ ಬಳಕೆ ಬಗ್ಗೆಯೂ ಪಂಪನಾಶಿ ಗ್ರಾಮಸ್ಥರಿಗೆ ಗೊತ್ತಿದೆ. ಆಯುರ್ವೇದ ವೈದ್ಯ ಅಶೋಕ್ ಮತ್ತಿಕಟ್ಟಿ ಅವರಿಂದ 2020 ಫೆಬ್ರವರಿಯಲ್ಲಿ ಮೊದಲಿಗೆ ಯೋಗ ತರಬೇತಿ ಆರಂಭಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಮಾರ್ಚ್ 2020 ರಿಂದ ಯೋಗ ತರಗತಿಗೆ ತಡೆ ಉಂಟಾಯಿತು.

ಆದಾಗ್ಯೂ, ಕೋವಿಡ್ ಶಿಷ್ಟಾಚಾರದ ಪಾಲನೆಯೊಂದಿಗೆ ತಮ್ಮ ಹೊಲಗಳಲ್ಲಿ ಯೋಗಾಭ್ಯಾಸ ಮುಂದುವರೆಸುವಂತೆ ರೈತರನ್ನು ವೈದ್ಯರು ಮನವೊಲಿಸಿದ್ದಾರೆ. ಲಾಕ್ ಡೌನ್ ನಂತರ ಗ್ರಾಮಸ್ಥರು ಯೋಗಾಭ್ಯಾಸ, ತರಬೇತಿಯನ್ನು ಮುಂದುವರೆಸಿದರು. ಎರಡು ವರ್ಷಗಳ ಹಿಂದೆ ಕೆಲ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೂ ಮತ್ತಿಕಟ್ಟಿ ತರಬೇತಿ ನೀಡಲು ಆರಂಭಿಸಿದ ಕೂಡಲೇ ಇತರ ಗ್ರಾಮಸ್ಥರು ಅದಕ್ಕೆ ಸೇರ್ಪಡೆಯಾದರು. 

ಶಿಕ್ಷಕಿ ಸುಧಾ ಪಾಟೀಲ್,  ಯೋಗ ಕಲಿತು ಇತರ ಗ್ರಾಮಸ್ಥರಿಗೆ ಕಲಿಸಲು ವೈದ್ಯರನ್ನು ಸಂಪರ್ಕಿಸಿದರು. ಆಕೆಯನ್ನು ಯೋಗ ಶಿಕ್ಷಕಿಯಾಗಿ ನೇಮಿಸಿದ ಆಯುಷ್ ಇಲಾಖೆ,  ವಾರಕ್ಕೆ ಒಂದು ತರಗತಿಯನ್ನು ತೆಗೆದುಕೊಳ್ಳುವಂತೆ ಹೇಳಿದೆ. ಆದರೆ ಗ್ರಾಮಸ್ಥರ ತೀವ್ರ ಆಸಕ್ತಿಗೆ ಸ್ಪಂದಿಸಿದ ಸುಧಾ ದಿನಕ್ಕೆ ಎರಡು ಬಾರಿ ಯೋಗ ಕಲಿಸಲು ಪ್ರಾರಂಭಿಸಿದರು.

ಆರಂಭದಲ್ಲಿ ಯೋಗ ಕಲಿಯುವುದು ಗ್ರಾಮಸ್ಥರಿಗೆ ಕಷ್ಟಕರವಾಗಿತ್ತು. ಇದೀಗ ರೈತರು, ಕೂಲಿ ಕಾರ್ಮಿಕರು ಊರಿನಿಂದ ಹೊರಗಡೆ ಹೋಗಿ, ಹೊಲಗಳಲ್ಲಿ, ಪ್ರಮುಖ ರಸ್ತೆಗಳು, ಮನೆಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. 12 ರಿಂದ ವರ್ಷದೊಳಗಿನ ಬಹುತೇಕ ಮಕ್ಕಳು ಯೋಗ ಕಲಿತಿದ್ದು, ಗ್ರಾಮಸ್ಥರಿಗೆ ವಿವಿಧ ಆಸನಗಳನ್ನು ಹೇಳಿಕೊಡುತ್ತಿದ್ದಾರೆ. 

ಆರಂಭದಲ್ಲಿ, ಕೆಲವು ಪೋಷಕರು ಇತರ ಕಾರಣಗಳನ್ನು ನೀಡಿ, ಸಮಯವಿಲ್ಲ ಎಂದು ಹೇಳುತ್ತಿದ್ದರು. ಆದರೆ ಮಕ್ಕಳು ವಾರದಲ್ಲಿ ಎರಡು ಬಾರಿ ಯೋಗ ಮಾಡಲು ಒತ್ತಾಯಿಸಿದಾಗ ಅವರು ಒಪ್ಪಿದ್ದಾರೆ. ಮತ್ತು ಈಗ ದಿನನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ. ನಾವು ನಿಯಮಿತವಾಗಿ ಯೋಗ ಮಾಡುತ್ತಿದ್ದೇವೆ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಇತರರು ಪಂಪನಾಶಿಯನ್ನು ‘ಯೋಗ ಹಳ್ಳಿ’ ಅಥವಾ ‘ಯೋಗ ಗ್ರಾಮ’ ಎಂದು ಕರೆಯುತ್ತಾರೆ ಎಂದು ಹೆಮ್ಮೆಪಡುತ್ತೇವೆ ಎಂದು ನಿವಾಸಿಯೊಬ್ಬರು ಹೇಳಿದರು.

ನಿವಾಸಿಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಳಿಗ್ಗೆ 5.30 ಮತ್ತು ಸಂಜೆ 5 ಕ್ಕೆ ದಿನಕ್ಕೆ ಎರಡು ಬಾರಿ ತರಬೇತಿ ನೀಡುತ್ತಿದ್ದೇವೆ, ಅಂತರಾಷ್ಟ್ರೀಯ ಯೋಗ ದಿನವು ಜಾಗೃತಿ ಮೂಡಿಸುವಲ್ಲಿ ಪಾತ್ರವನ್ನು ಹೊಂದಿದೆ ಎಂದು ಸುಧಾ ತಿಳಿಸಿದರು. ಹೆಚ್ಚಿನ ಗ್ರಾಮಸ್ಥರು ಇದನ್ನು ತಮ್ಮ ದಿನಚರಿಯಾಗಿ ಮಾಡಿಕೊಂಡಿದ್ದಾರೆ ಮತ್ತು ಇನ್ನೂ ಅನೇಕರು ಭಾನುವಾರ ಮತ್ತು ರಜಾದಿನಗಳಲ್ಲಿ ನಮ್ಮೊಂದಿಗೆ ಸೇರುತ್ತಾರೆ ಎಂದು ಮತ್ತಿಕಟ್ಟಿ ಎಂದರು. 

ಪಿಯು ವಿದ್ಯಾರ್ಥಿನಿ ಚೈತ್ರಾ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಯೋಗ ಕಲಿತು ಅಭ್ಯಾಸ ಮಾಡುತ್ತಿದ್ದೇವೆ. ಕೆಲವು ಗ್ರಾಮಸ್ಥರು ಯೋಗ ಹೇಳಿಕೊಡುವಂತೆ ಹೇಳಿದ್ದರಿಂದ ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ತರಗತಿ ಆರಂಭಿಸಿದ್ದೇವೆ. ಅನೇಕ ಜನರು ಅದರಲ್ಲಿ ಆಸಕ್ತಿ ಹೊಂದಿರುವುದು ನಮಗೆ ಆಶ್ಚರ್ಯವಾಯಿತು ಎಂದರು. 

ಕೇವಲ ನಾಲ್ವರಿಗೆ ಕೋವಿಡ್ -19: ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಪಂಪನಾಶಿ ಗ್ರಾಮದಲ್ಲಿ ಕೇವಲ ನಾಲ್ಕು ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ. ದೈನಂದಿನ ಯೋಗ ಅಭ್ಯಾಸ ಮೂರು ಅಲೆಗಳ ಉದ್ದಕ್ಕೂ ಗ್ರಾಮಸ್ಥರ ಯೋಗಕ್ಷೇಮ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. 

ಮತ್ತಿಕಟ್ಟಿ ಅವರಿಂದ ಜಲ ನೇತಿ ತರಬೇತಿ: ಮುಚ್ಚಿಹೋಗಿರುವ ಮೂಗಿನ ಮಾರ್ಗಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಒಂದು ರೀತಿಯ ಮೂಗಿನ ಚಿಕಿತ್ಸೆಯಾದ ಜಲ ನೇತಿ ತರಬೇತಿಯನ್ನು ಮತ್ತಿಕಟ್ಟಿ ನೀಡುತ್ತಿದ್ದಾರೆ.  ಇದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಾಂಕ್ರಾಮಿಕ ಸಮಯದಲ್ಲಿ ಅನೇಕ ಹಳ್ಳಿಗರು ಇದನ್ನು ಅಭ್ಯಾಸ ಮಾಡಿದರು ಮತ್ತು ಅದನ್ನು ಮುಂದುವರೆಸಿದರು. ಮತ್ತಿಕಟ್ಟಿ ಮಾತನಾಡಿ, ಜಲ ನೇತಿ ಯೋಗದ ಒಂದು ಭಾಗವಾಗಿದ್ದು, ಲೋಳೆಯ ಜೊತೆಗೆ ಸಿಕ್ಕಿಹಾಕಿಕೊಂಡಿರುವ ಕೊಳೆ ಹಾಗೂ ಬ್ಯಾಕ್ಟೀರಿಯಾವನ್ನು ಹೋಗಲಾಡಿಸಿ ಮೂಗಿನ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಿದೆ ಎಂದರು.

SCROLL FOR NEXT