ವಿಶೇಷ

ಬೆಂಗಳೂರು: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕರ ಬಯಕೆ ಈಡೇರಿಸಿದ ಪೊಲೀಸರು!

Shilpa D

ಬೆಂಗಳೂರು: ಗುಣಮುಖವಾಗದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕರ ಬಹುದಿನದ ಬಯಕೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಈಡೇರಿಸಿದ್ದಾರೆ.

ಕೇರಳದ ಮೊಹಮದ್ ಸಲ್ಮಾನ್ ಮತ್ತು ಬೆಂಗಳೂರಿನ ಬಿ, ಮಿಥಿಲೇಶ್ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು ಇಬ್ಬರು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಇಬ್ಬರು ಬಾಲಕರು ಪೊಲೀಸ್ ಅಧಿಕಾರಿಯಾಗಬೇಕೆಂದು ಮೇಕ್ ಎ ವಿಶ್ ಇಂಡಿಯಾ ಎಂಬ ಎನ್ ಜಿ ಒ ಕಾರ್ಯಕರ್ತರ ಬಳಿ ತಮ್ಮ ಆಸೆ ವ್ಯಕ್ತಪಡಿಸಿದ್ದರು. ಅದರಂತೆ ಈ ಎನ್ ಜಿ ಒ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಜೊತೆಗೆ ಅದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿದ್ದರು.

ಅಧಿಕಾರಿಗಳು ಅವರಿಗೆ ಅಧಿಕಾರ ವ್ಯಾಪ್ತಿಯ ಪರಿಕಲ್ಪನೆಯನ್ನು ವಿವರಿಸಿದರು. ನಂತರ ಸಲ್ಮಾನ್ ಮತ್ತು ಮಿಥಿಲೇಶ್ ಡಿಸಿಪಿ ಬಳಿ ಮಾತನಾಡಿ ಐಪಿಎಸ್ ಅಧಿಕಾರಿಯಾಗುವುದು ಹೇಗೆ ಎಂದು ಕೇಳಿದರು. ಪೊಲೀಸ್ ಅಧಿಕಾರಿ ಸಾರ್ವಜನಿಕರಿಂದ ದೂರುಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಹುಡುಗರಿಗೆ ವಿವರಿಸಲಾಯಿತು.

ಕೆಲವು ಮಕ್ಕಳು, ಲ್ಯಾಪ್ ಟಾಪ್, ಸೆಲಬ್ರಿಟಿ ಭೇಟಿ ಮಾಡುವುದು, ಅಥವಾ ಯಾವುದಾದರೂ ಸ್ಥಳಕ್ಕೆ ಕರೆದೊಯ್ಯುವಂತೆ ಕೇಳುತ್ತಾರೆ ಎಂದು ಎನ್ ಜಿ ಒ ಬೆಂಗಳೂರು ಶಾಖೆಯ ಮೇಲ್ವಿಚಾರಕ ಅರುಣ್ ಕುಮಾರ್ ತಿಳಿಸಿದ್ದಾರೆ. ಇದುವರೆಗೂ 77,358 ಮಕ್ಕಳ ಆಸೆಯನ್ನು ಈಡೇರಿಸಿರುವುದಾಗಿ ತಿಳಿಸಿದ್ದಾರೆ.

SCROLL FOR NEXT