ವಿಶೇಷ

ಹೌರಾ: ಅಶಾಂತಿಯ ನಡುವೆ ಮುಸ್ಲಿಂ ವಿಧವೆಯ ಮಗಳ ಮದುವೆಗೆ ಸಹಾಯ ಮಾಡಿದ ಹಿಂದೂಗಳು!

Lingaraj Badiger

ಕೋಲ್ಕತ್ತಾ: ಬಿಜೆಪಿ ನಾಯಕರ ದ್ವೇಷ ಭಾಷಣದ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾದ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೇರಿಯಾದಲ್ಲಿ ಕೋಮು ಸೌಹಾರ್ದತೆಯನ್ನು ಸಾರುವ ಘಟನೆಯೊಂದು ನಡೆದಿದೆ.

ಭಾನುವಾರ ನಿಗದಿಯಾಗಿದ್ದ ಮುಸ್ಲಿಂ ವಿಧವೆಯ ಮಗಳ ಮದುವೆ ಅಶಾಂತಿಯಿಂದಾಗಿ ಮುಂದೂಡಬೇಕಾಗುತ್ತದೆ ಎಂಬ ಆತಂಕದಲ್ಲಿದ್ದ ಮುಸ್ಲಿಂ ಬಾಂಧವರಿಗೆ ಹಿಂದೂಗಳು ನೆರವಾಗಿದ್ದಾರೆ. ಹಿಂದೂ ನೆರೆಹೊರೆಯವರು ಮುಸ್ಲಿಂ ವಿಧವೆಯ ಬೆಂಬಲಕ್ಕೆ ನಿಂತು, ಅವರ ಮಗಳ ಮದುವೆಯನ್ನು ಮಾಡಿದ್ದಾರೆ. ವಧುವಿನ ಅತ್ತೆಯ ಮನೆಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ನೆರೆಹೊರೆಯವರು ವರ ಮತ್ತು ಇತರ ಅತಿಥಿಗಳನ್ನು ಸ್ವಾಗತಿಸುವುದರಿಂದ ಹಿಡಿದು ಎಲ್ಲವನ್ನೂ ಹಿಂದೂಗಳೇ ನೋಡಿಕೊಂಡಿದ್ದಾರೆ.

ಇದ್ದೆನೆಸಾ ಮುಲ್ಲಿಕ್ ಅವರು ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಎನ್ಎಚ್-6 ರ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ.  ಅವರ ಮನೆ ಬಳಿಯೇ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ನಮ್ಮ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ಸೆಕ್ಷನ್ 144 ಅನ್ನು ಜಾರಿಗೊಳಿಸಿದಾಗ ನಾನು ಚಿಂತಿತನಾಗಿದ್ದೆ. ಭಾನುವಾರ ನಿಗದಿಯಾಗಿದ್ದ ನನ್ನ ಮಗಳು ಪಾಕೀಜಾಳ ಮದುವೆ ಮುಂದೂಡುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ಆದರೆ ನನ್ನ ಹಿಂದೂ ನೆರೆಹೊರೆಯವರು ಮುಂದೆ ಬಂದು ಎಲ್ಲವನ್ನೂ ಅವರು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು ಎಂದು ಇದ್ದೆನೆಸಾ ಅವರು ಹೇಳಿದ್ದಾರೆ.

ಇದ್ದೆನೆಸಾನ ನೆರೆಹೊರೆಯವರಾದ ತಪಸ್ ಕೊಡಲಿ, ಲಖಿಕಾಂತ ಕಯಾಲ್ ಮತ್ತು ಉತ್ತಮ್ ಡೋಲುಯಿ ಅವರು ಮದುವೆಯ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡರು. ನಾವು ಒಟ್ಟಿಗೆ ಒಂದೇ ಹಳ್ಳಿಯಲ್ಲಿ ಬೆಳೆದಿದ್ದೇವೆ. ನಾವು ಯಾವಾಗಲೂ ಪರಸ್ಪರ ಪಕ್ಕದಲ್ಲಿಯೇ ಇದ್ದೇವೆ. ಪಾಕೀಜಾಳ ತಾಯಿ ಚಿಂತಾಕ್ರಾಂತರಾದಾಗ ನಾವು ಅವರಿಗೆ ಸಹಾಯ ಮಾಡಲು ನಿರ್ಧರಿಸಿದೆವು ಎಂದು ಕೊಡಲಿ ಅವರು ತಿಳಿಸಿದ್ದಾರೆ.

ನಾವು ಮೂವರೂ ಪೊಲೀಸ್ ಠಾಣೆಗೆ ತೆರಳಿ ನಿಷೇಧಾಜ್ಞೆ ಜಾರಿ ಇದ್ದರೂ ಮದುವೆಗೆ ಅನುಮತಿ ಪಡೆದೆವು. ಎಂಟು ವರ್ಷಗಳ ಹಿಂದೆ ಇದ್ದೆನೆಸಾ ಅವರು ತಮ್ಮ ಪತಿಯನ್ನು ಕಳೆದುಕೊಂಡಿದ್ದು ಸ್ಥಳೀಯ ಕ್ಲಬ್ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಾಯಿ ಮತ್ತು ಅವರ ಮಕ್ಕಳು ಭಾಗವಹಿಸುತ್ತಾರೆ. ಮನುಷ್ಯರಾಗಿ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯವಾಗಿತ್ತು ಎಂದು ಕಯಲ್ ಅವರು ಹೇಳಿದ್ದಾರೆ.

SCROLL FOR NEXT