ವಿಶೇಷ

ಸುತ್ತ ಮರಾಠಿ ವಾತಾವರಣ, ಆದರೆ ಇಲ್ಲಿನ ಜನರಿಗೆ ಕನ್ನಡದ ಮೇಲೆ ಪ್ರೀತಿ: ಬೀದರ್ ನ ಚೋಂಡಿ ಮುಖೇಡ್ ಗ್ರಾಮಸ್ಥರ ಹೃದಯಲ್ಲಿದೆ ಕನ್ನಡತನ!

Sumana Upadhyaya

ಬೀದರ್: ಹೊಸದಾಗಿ ರಚನೆಯಾದ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಚೋಂಡಿ ಮುಖೇಡ್ ಗ್ರಾಮವು ಮಹಾರಾಷ್ಟ್ರದಿಂದ ಸುತ್ತುವರೆದಿದ್ದು, ಕರ್ನಾಟಕ ರಾಜ್ಯದ ಏಕೈಕ ಬಹಿರ್ಮುಖಿ ಪ್ರದೇಶವಾಗಿದ್ದರೂ, ಈ ಭಾಗದ ಜನರು ಕನ್ನಡ ಮತ್ತು ಕರ್ನಾಟಕವನ್ನು ಪ್ರೀತಿಸುವಲ್ಲಿ ಹಿಂದೆ ಬಿದ್ದಿಲ್ಲ.

2011 ರ ಜನಗಣತಿಯ ಪ್ರಕಾರ ಚೋಂಡಿ ಮುಖೇಡ್ ಗ್ರಾಮದ ಜನಸಂಖ್ಯೆಯು 1,617 ಆಗಿತ್ತು. ಇತ್ತೀಚೆಗೆ ನಡೆಸಿದ ಇತರ ಸಮೀಕ್ಷೆಗಳ ಪ್ರಕಾರ, ಇದು 3,200 ಕ್ಕೆ ಏರಿದೆ. ಹಳ್ಳಿಯ ಬಹುಪಾಲು ಜನರು ತಮ್ಮನ್ನು ಕರ್ನಾಟಕದೊಂದಿಗೆ ಗುರುತಿಸಿಕೊಳ್ಳುತ್ತಾರೆ. ನೆರೆಯ ರಾಜ್ಯ ಮಹಾರಾಷ್ಟ್ರದೊಂದಿಗೆ ವಿಲೀನವಾಗುವುದನ್ನು ವಿರೋಧಿಸುತ್ತಾರೆ. 

ಇಲ್ಲಿನ ಶೇಕಡಾ 90ರಷ್ಟು ಜನರು ಮರಾಠಿ ಮಾತನಾಡುತ್ತಿದ್ದರೂ ಸಹ ಗ್ರಾಮಸ್ಥರು ಮಹಾರಾಷ್ಟ್ರದ ಜತೆ ಹೋಗುವ ಇಚ್ಛೆಯನ್ನು ಒಮ್ಮೆಯೂ ವ್ಯಕ್ತಪಡಿಸಿಲ್ಲ ಎಂದು ಚಿಕ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೂ ಆಗಿರುವ ಗ್ರಾಮದ ಸತ್ಯಕಲಾಬಾಯಿ ರಕ್ಷಾಲ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡುತ್ತಾ ಹೇಳುತ್ತಾರೆ. ನಮ್ಮ ಮಾತೃಭಾಷೆ ಮರಾಠಿಯಾದರೂ ಕನ್ನಡವನ್ನು ಅಷ್ಟೇ ಪ್ರೀತಿಸುತ್ತೇವೆ. ನಾವು ಕರ್ನಾಟಕದೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದೇವೆ ಎಂದು ಅವರು ಹೇಳುತ್ತಾರೆ.

ಬಿಜೆಪಿ ಮುಖಂಡ ಸತ್ಯಕಲಾಬಾಯಿ ಅವರ ಪುತ್ರ ಪ್ರದೀಪ್ ರಕ್ಷಾಲ್ ಅವರು ಚೊಂಡಿ ಮುಖೇಡ್ ನ್ನು ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುತ್ತಾರೆ. ಔರಾದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿವಂಗತ ಮಾಣಿಕ್ ರಾವ್ ಪಾಟೀಲ್ ಕುಶನೂರ್ ಮತ್ತು ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರು ಚೊಂಡಿ ಮುಖೇದ್ ಗ್ರಾಮಕ್ಕೆ ಹೆಚ್ಚಿನ ಕೆಲಸ ಮಾಡಿಲ್ಲ. ಗ್ರಾಮದಲ್ಲಿ ಕನ್ನಡ ಮತ್ತು ಮರಾಠಿ ಮಾಧ್ಯಮದ ಶಾಲೆಗಳನ್ನು ಸ್ಥಾಪಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿತ್ತು. ಆದರೆ ಸರಕಾರ 8ನೇ ತರಗತಿವರೆಗೆ ಮರಾಠಿ ಮಾಧ್ಯಮ ಶಾಲೆಯನ್ನು ಮಾತ್ರ ತೆರೆಯಿತು. ಮಂಜೂರಾದ ಏಳು ಶಿಕ್ಷಕರ ಪೈಕಿ ಕೆಲವರು ಮಾತ್ರ ಕಾಯಂ ಆಗಿದ್ದಾರೆ ಎನ್ನುತ್ತಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮದಾಸ್, ಸರಕಾರ ಕನ್ನಡ ಭಾಷೆಗೆ ಅತಿಥಿ ಶಿಕ್ಷಕರನ್ನು ನೇಮಿಸಿದೆ. ಗ್ರಾಮದಲ್ಲಿ ಕನ್ನಡ ಕಲಿಸುವ ಅತಿಥಿ ಶಿಕ್ಷಕರಿಗೆ ಬೇರೆ ಗ್ರಾಮದಲ್ಲಿ ಅದೇ ಕೆಲಸವನ್ನು ವಹಿಸಲಾಗಿದೆ. ಹೀಗಾಗಿ ಉಪನ್ಯಾಸಕರು ವಾರಕ್ಕೊಮ್ಮೆ ಮಾತ್ರ ಚೊಂಡಿ ಮುಖೇಡ್‌ಗೆ ಭೇಟಿ ನೀಡುತ್ತಾರೆ ಎನ್ನುತ್ತಾರೆ. 

ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಮುಂದುವರಿಸಲು ಹೆಚ್ಚಿನ ವಿದ್ಯಾರ್ಥಿಗಳು ಮಹಾರಾಷ್ಟ್ರದ ಉದಗೀರ್‌ನ (ಚೋಂಡಿ ಮುಖೇಡ್‌ನಿಂದ ಸುಮಾರು 25-30 ಕಿ.ಮೀ ದೂರ) ಮುಕ್ರಂಬಾದ್‌ಗೆ ಹೋಗಬೇಕಾಗಿದೆ ಎಂದು ಪ್ರದೀಪ್ ಹೇಳುತ್ತಾರೆ. ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜೂನ್‌ನಲ್ಲಿ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ (ಗ್ರಾಮ ವಾಸ್ತವ್ಯ ಕಾರ್ಯಕ್ರಮ) ನಡೆಸಿ ಗ್ರಾಮದ ಸಮಸ್ಯೆಗಳನ್ನು ಒಂದೊಂದಾಗಿ ಬಗೆ ಹರಿಸಲಾಗುತ್ತಿದೆ ಎಂದರು.

SCROLL FOR NEXT