ವಿಶೇಷ

ಹುಬ್ಬಳ್ಳಿ: ಇದು ಎರಡು ನಾಯಿಗಳ ಕಥೆ; ರಕ್ತದಾನ ಮಾಡಿ ಮಾಯಾಳ ಜೀವ ಉಳಿಸಿದ ಚಾರ್ಲಿ!

Lingaraj Badiger

ಹುಬ್ಬಳ್ಳಿ: ಸಮಯೋಚಿತ ಸಹಾಯವು ಜೀವಗಳನ್ನು ಉಳಿಸುತ್ತದೆ. ಅಂತಹ ಒಂದು ಘಟನೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವರದಿಯಾಗಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಡಾಗ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೆಲ್ಜಿಯಂ ಶೆಫರ್ಡ್ ಅಸ್ವಸ್ಥ ನಾಯಿ ಮಾಯಾಳ ಜೀವ ಉಳಿಸಲು ಜರ್ಮನ್ ಶೆಫರ್ಡ್ ಚಾರ್ಲಿ ರಕ್ತದಾನ ಮಾಡಿದ್ದಾನೆ. ಈಗ ಮಾಯಾ ಚೇತರಿಸಿಕೊಂಡಿದ್ದು, ವಾರದೊಳಗೆ ಮತ್ತೆ ಏರ್‌ಪೋರ್ಟ್ ಡ್ಯೂಟಿಗೆ ಹಾಜರಾಗಲಿದ್ದಾಳೆ.

ಇದು ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳ ಎರಡು ನಾಯಿಗಳ ಕಥೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 15 ತಿಂಗಳ ವಯಸ್ಸಿನ ಸ್ನಿಫರ್ ಡಾಗ್ ಮಾಯಾ, ಜ್ವರ, ರಕ್ತಸ್ರಾವ, ಹಸಿವಾಗದಿರುವುದು ಮತ್ತು ಆಲಸ್ಯವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಕಾಯಿಲೆ ಎರ್ಲಿಚಿಯಾದಿಂದ ಬಳಲುತ್ತಿತ್ತು. ಈ ನಾಯಿಯ ಜೀವ ಉಳಿಸಲು ಸಮಯೋಚಿತ ಚಿಕಿತ್ಸೆಯ ಅಗತ್ಯವಿತ್ತು.

ಮಾಯಾಳಿಗೆ ಚಿಕಿತ್ಸೆ ಕೊಡಿಸಲು ವಿಮಾನ ನಿಲ್ದಾಣದ ಸಿಬ್ಬಂದಿ ಕಳೆದ ಐದಾರು ದಿನಗಳಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯ (ಯುಎಎಸ್) ಆವರಣದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಐದಾರು ದಿನಗಳಿಂದ ಆಕೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಮತ್ತು ಅದರ ದೇಹದಲ್ಲಿ ರಕ್ತಸ್ರಾವವಾಗಲು ಪ್ರಾರಂಭವಾಯಿತು.

ಮತ್ತೆ ಭಾನುವಾರ ವಿಮಾನ ನಿಲ್ದಾಣದ ಸಿಬ್ಬಂದಿ ಧಾರವಾಡದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದರು. ಈ ವೇಳೆ ವೈದ್ಯರು ಮಾಯಾಳಿಗೆ ರಕ್ತ ಹಾಕಲು ನಿರ್ಧರಿಸಿದ್ದಾರೆ. ಆದರೆ ಮಾಯಾಳ ರಕ್ತದ ಗುಂಪಿಗೆ ಹೊಂದಿಕೆಯಾಗುವ ರಕ್ತವನ್ನು ದಾನ ಮಾಡುವ ನಾಯಿಯನ್ನು ಹುಡುಕುವುದು ಅವರಿಗೆ ದೊಡ್ಡ ಸವಾಲಾಗಿತ್ತು. ನಾಯಿಗಳಲ್ಲಿ ಎಂಟು ವಿಧದ ರಕ್ತದ ಗುಂಪುಗಳಿದ್ದು, ದಾನಿಯನ್ನು ಹುಡುಕುವುದು ಅಷ್ಟು ಸುಲಭವಲ್ಲ.

ಅದೃಷ್ಟವಶಾತ್ ಭಾನುವಾರ ಕೃಷಿ ಮೇಳ-2022ರ ಅಂಗವಾಗಿ ಕೃಷಿ ವಿವಿ ಕ್ಯಾಂಪಸ್ ನಲ್ಲಿ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು, ನೂರಾರು ನಾಯಿಗಳು ಭಾಗವಹಿಸಿದ್ದವು. ಅವರಲ್ಲಿ ಚಾರ್ಲಿ ಕೂಡ ಒಬ್ಬ. ವೈದ್ಯರು ಪ್ರಾಣಿ ರಕ್ಷಕರೂ ಆಗಿರುವ ಚಾರ್ಲಿ ಮಾಲೀಕ ಸೋಮಶೇಖರ್ ಚನ್ನಶೆಟ್ಟಿ ಅವರನ್ನು ಸಂಪರ್ಕಿಸಿದರು. ಅವರು ತಮ್ಮ ನಾಯಿಯ ರಕ್ತವನ್ನು ದಾನ ಮಾಡಲು ಒಪ್ಪಿಕೊಂಡರು ಮತ್ತು ಅದು ಮಾಯಾಳ ರಕ್ತದ ಗುಂಪಿಗೆ ಹೊಂದಿಕೆಯಾಯಿತು.

ಮಾಯಾಳ ಹಿಮೋಗ್ಲೋಬಿನ್ ಕೇವಲ 7.3 ರಷ್ಟಿತ್ತು. ಇದು ಅಪಾಯದ ಸೂಚನೆ. ಆದ್ದರಿಂದ ನಾವು ಭಾನುವಾರ ಅದಕ್ಕೆ ರಕ್ತ ನೀಡಲು ನಿರ್ಧರಿಸಿದೆವು ಮತ್ತು ಅದೇ ದಿನ ಚಾರ್ಲಿ ಕ್ಯಾಂಪಸ್‌ನಲ್ಲಿತ್ತು ಮತ್ತು ಅದರ ಮಾಲೀಕರು ಸಹ ರಕ್ತದಾನ ಮಾಡಲು ಒಪ್ಪಿಕೊಂಡರು ಎಂದು ಕೃಷಿ ವಿವಿಯ ಪಶುವೈದ್ಯಕೀಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಎ.ಎಸ್.ಪಾಟೀಲ್ ತಿಳಿಸಿದ್ದಾರೆ.

"ರಕ್ತ ನೀಡಿದ ನಂತರ, ಭಾನುವಾರದಂದು ಮಾಯಾಳನ್ನು ಡಿಸ್ಚಾರ್ಜ್ ಮಾಡಲಾಯಿತು. ಈಗ ಅದು ಚೇತರಿಸಿಕೊಂಡಿದೆ ಮತ್ತು ಆರೋಗ್ಯವಾಗಿದೆ. ಸೋಮವಾರದ ತಪಾಸಣೆಯ ಸಮಯದಲ್ಲಿ ಮಾಯಾ ನಿನ್ನೆಗಿಂತ ಹೆಚ್ಚು ಸಕ್ರಿಯವಾಗಿರುವುದನ್ನು ನಾವು ನೋಡಿದ್ದೇವೆ" ಎಂದು ಅವರು ಹೇಳಿದ್ದಾರೆ.

ಮಾಯಾ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ನಿಫರ್ ಡಾಗ್ ಆಗಿದ್ದು, ಬ್ಯಾಗ್‌ಗಳು ಮತ್ತು ವಿಮಾನ ನಿಲ್ದಾಣದ ಆವರಣದ ಸುತ್ತಮುತ್ತ ಲಗೇಜ್ ಮತ್ತು ಡ್ರಗ್ಸ್ ಹಾಗೂ ಸ್ಫೋಟಕಗಳನ್ನು ಪರಿಶೀಲಿಸಲು ಅದನ್ನು ಬಳಸಲಾಗುತ್ತದೆ.

SCROLL FOR NEXT