ವಿಶೇಷ

ಫೆ.21 ಅಂತಾರಾಷ್ಟ್ರೀಯ ಮಾತೃಭಾಷೆ ದಿನ, ಆಚರಣೆ ಹೇಗೆ ಆರಂಭವಾಯಿತು? 

Sumana Upadhyaya

ಹೆತ್ತ ತಾಯಿ, ತಾಯ್ನಾಡು, ತಾಯಿಭಾಷೆ, ಮಾತೃಭಾಷೆ ಎಂದರೆ (Mother Language) ತುಸು ಪ್ರೀತಿ-ಕಾಳಜಿ ಜಾಸ್ತಿಯೇ ಇರುತ್ತದೆ. ಮಾತೃಭಾಷೆ ಎಂದರೆ ನಮ್ಮ ಹೃದಯಾಂತರಾಳದಿಂದ ಬರುವ ಭಾಷೆ. ತಮ್ಮ ತಮ್ಮ ಭಾಷೆಗಳಿಗಾಗಿ ಹೋರಾಡಿದವರ ಮತ್ತು ಪ್ರಾಣ ಕೊಟ್ಟವರ ಉದಾಹರಣೆಗಳು ವಿಶ್ವದಾದ್ಯಂತ ಕಾಣಬಹುದು. ಕನ್ನಡ ಭಾಷೆ, ನೆಲ-ಜಲದ ಹೋರಾಟದಲ್ಲಿ ದೀರ್ಘ ಇತಿಹಾಸವೇ ಇದೆ. ಪಂಚದೆಲ್ಲೆಡೆ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಕುರಿತ ಅರಿವನ್ನು ಉತ್ತೇಜಿಸಲು ಪ್ರತಿ ವರ್ಷ ಫೆಬ್ರವರಿ 21 ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು 1999 ರ ನವೆಂಬರ್ 17 ರಂದು ಯುನೆಸ್ಕೋ ಘೋಷಿಸಿತು. ಇದು 2002 ರಲ್ಲಿ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿಯಿಂದ ಔಪಚಾರಿಕವಾಗಿ ಗುರುತಿಸಲ್ಪಟ್ಟಿತು. “ಜಗತ್ತಿನ ಜನರು ಬಳಸುವ ಎಲ್ಲಾ ಭಾಷೆಗಳ ಸಂರಕ್ಷಣೆ ಮತ್ತು ರಕ್ಷಣೆಯನ್ನು ಉತ್ತೇಜಿಸಲು” ಈ ದಿನಾಚರಣೆಯು ಒಂದು ವಿಸ್ತಾರವಾದ ಉಪಕ್ರಮದ ಭಾಗವಾಗಿದೆ ಎಂದು ಯುಎನ್ ಜನರಲ್ ಅಸೆಂಬ್ಲಿ ಅಂಗೀಕರಿಸಿದೆ. ಮೊದಲ ಬಾರಿಗೆ, ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುವ ಕಲ್ಪನೆಯನ್ನು ಮಾಡಿದ್ದು ಬಾಂಗ್ಲಾದೇಶ.

“ಸ್ಥಿರ ಸಮಾಜಗಳಿಗೆ ಇರುವ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯ ಪ್ರಾಮುಖ್ಯತೆಯನ್ನು ಯುನೆಸ್ಕೋ ನಂಬುತ್ತದೆ. ಇದು ಶಾಂತಿಗಾಗಿ, ಇತರರಿಗೆ ಸಹಿಷ್ಣುತೆ ಮತ್ತು ಗೌರವವನ್ನು ಬೆಳೆಸುವ ಸಂಸ್ಕೃತಿಗಳು ಹಾಗೂ ಭಾಷೆಗಳಲ್ಲಿನ ವ್ಯತ್ಯಾಸಗಳನ್ನು ಸಂರಕ್ಷಿಸಲು, ಅದರ ಆದೇಶದೊಳಗೆ ಕೆಲಸ ಮಾಡುತ್ತದೆ” ಎಂದು ಯುನೆಸ್ಕೋ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿರುವ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಕುರಿತ ಪುಟದಲ್ಲಿ ತಿಳಿಸಲಾಗಿದೆ.

ಈ ವರ್ಷದ ವಿಷಯ: ಕಳೆದ 15 ವರ್ಷಗಳಿಂದಲೂ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಒಂದು ಥೀಮ್‍ಗೆ ಅನುಗುಣವಾಗಿ ಆಚರಿಸುತ್ತಾ ಬರಲಾಗುತ್ತಿದೆ. 2006 ರಲ್ಲಿ ಈ ದಿನಾಚರಣೆಗೆ ಪ್ರಪ್ರಥಮ ಬಾರಿಗೆ ಥೀಮ್ ಅನ್ನು ಜೋಡಿಸಿದಾಗ ಆಯ್ಕೆ ಮಾಡಿಕೊಂಡಿದ್ದು “ ಭಾಷೆಗಳು ಮತ್ತು ಸೈಬರ್‌ಸ್ಪೇಸ್‌” ಎಂಬ ಥೀಮ್ ನ್ನು. ಅದರ ಮರು ವರ್ಷ, ಅಂದರೆ 2007 ರಲ್ಲಿ “ಬಹು ಭಾಷಾ ಶಿಕ್ಷಣ” ಥೀಮ್ ಇತ್ತು. 

"ಬಹುಭಾಷಾ ಶಿಕ್ಷಣ - ಶಿಕ್ಷಣವನ್ನು ಪರಿವರ್ತಿಸುವ ಅವಶ್ಯಕತೆ" 2023ರ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ವಿಷಯವಾಗಿದೆ. 

SCROLL FOR NEXT