ವಿಶೇಷ

ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಮೊದಲ ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪನೆ!

Nagaraja AB

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯೊಂದು ತನ್ನ ಮೊದಲ ಬಾಹ್ಯಾಕಾಶ ಪ್ರಯೋಗಾಲಯವನ್ನು ಪಡೆದುಕೊಂಡಿದೆ. ಈ ಲ್ಯಾಬ್‌ನಲ್ಲಿ ಹೈಟೆಕ್ ಟೆಲಿಸ್ಕೋಪ್, ಇಸ್ರೋ ರಾಕೆಟ್ ಮತ್ತು ಉಪಗ್ರಹಗಳು, ಡ್ರೋನ್‌ಗಳು ಮತ್ತು ವಿಮಾನಗಳ ಮಾದರಿಗಳನ್ನು ಇಡಲಾಗಿದೆ.  

ಕಿಶ್ತ್ವಾರ್‌ನಲ್ಲಿರುವ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ದೇವಾಂಶ್ ಯಾದವ್ ಮತ್ತು ಕಿಶ್ತ್ವಾರ್ ಮುಖ್ಯ ಶಿಕ್ಷಣಾಧಿಕಾರಿ ಪ್ರೇಹ್ಲಾದ್ ಭಗತ್ ಅವರ ಉಪಸ್ಥಿತಿಯಲ್ಲಿ ಲ್ಯಾಬ್ ಉದ್ಘಾಟಿಸಲಾಯಿತು. 

ನಂತರ ಮಾತನಾಡಿದ ಜಿಲ್ಲಾಧಿಕಾರಿ ಯಾದವ್, ಪ್ರಯೋಗಾಲಯ ಬಾಹ್ಯಾಕಾಶದ ಬಗ್ಗೆ ಆಳವಾದ ತಿಳುವಳಿಕೆ ಬೆಳೆಸುವುದು ಮಾತ್ರವಲ್ಲದೆ ಬಾಹ್ಯಾಕಾಶ ವಿಜ್ಞಾನದಲ್ಲಿ ವೃತ್ತಿಜೀವನ ಕೈಗೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ಶಾಲಾ ಹಂತದಲ್ಲಿ ಖಗೋಳಶಾಸ್ತ್ರ-ಸಂಬಂಧಿತ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹುಟ್ಟುಹಾಕುತ್ತದೆ ಮತ್ತು ಈ ಆಕರ್ಷಕ ಕ್ಷೇತ್ರದಲ್ಲಿ ವೃತ್ತಿಜೀವನದ ಕಡೆಗೆ ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಮಾರ್ಗದರ್ಶನ ಮಾಡುತ್ತದೆ ಎಂದು ಅವರು ಹೇಳಿದರು.

ವ್ಯೋಮಿಕಾ ಸ್ಪೇಸ್ ಅಕಾಡೆಮಿಯಿಂದ ಇಸ್ರೋ ಬಾಹ್ಯಾಕಾಶ ಬೋಧಕ ಕಾರ್ಯಕ್ರಮದಡಿ ಬಾಹ್ಯಾಕಾಶ ಪ್ರಯೋಗಾಲಯ ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಜಮ್ಮು ಶಿಕ್ಷಣ ನಿರ್ದೇಶನಾಲಯದಿಂದ ಆರ್ಥಿಕ ನೆರವಿದೆ. ಲ್ಯಾಬ್ ನಿಂದ 6-12 ನೇ ತರಗತಿಯ ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ, ತರಬೇತಿ ಪಡೆಯುವ ಅವಕಾಶ ಹೊಂದಿದ್ದಾರೆ.

ವ್ಯೋಮಿಕಾ ಸ್ಪೇಸ್ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ್ ಯಾದವ್, ಲ್ಯಾಬ್‌ನ ಕಾರ್ಯವೈಖರಿ ಮತ್ತು ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳ ಜ್ಞಾನವನ್ನು ಪ್ರೇರೇಪಿಸುವ ಮತ್ತು ಹೆಚ್ಚಿಸುವ ಸಾಮರ್ಥ್ಯದ ಬಗ್ಗೆ ಸಭೆಗೆ ವಿವರಿಸಿದರು. 

ಸರ್ಕಾರಿ ಶಾಲೆಯಲ್ಲಿ ಬಾಹ್ಯಾಕಾಶ ಪ್ರಯೋಗಾಲಯವನ್ನು ಸ್ಥಾಪಿಸುವುದು ವಿಜ್ಞಾನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ವ್ಯೋಮಿಕಾ ಸ್ಪೇಸ್ ಅಕಾಡೆಮಿಯು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ಸ್ಮರಣಾರ್ಥ ಅಕ್ಟೋಬರ್ 15 ರಂದು ರಾಜ್ಯ ಮಟ್ಟದ ಅಂತರ ಶಾಲಾ ಹೈಡ್ರೊ ರಾಕೆಟ್ ಮತ್ತು ಖಗೋಳಶಾಸ್ತ್ರ ಕಾರ್ಯಾಗಾರವನ್ನು ಆಯೋಜಿಸಿದೆ.

SCROLL FOR NEXT