ಬೀಬಿ ಫಾತಿಮಾ ಮತ್ತು ಶಬಾನಾ  
ವಿಶೇಷ

ಕತ್ತಲೆಯಿಂದ ಬೆಳಕಿನೆಡೆಗೆ: ಅನಾಥ ಬಾಲಕಿ ದತ್ತು ಪಡೆದು 'ಕಿಕ್ ಬಾಕ್ಸರ್' ಆಗಿ ಪರಿವರ್ತಿಸಿದ ಮಂಗಳಮುಖಿ!

ಅಲ್ಪಸಂಖ್ಯಾತ ಸಮುದಾಯದ ಅಕ್ರಂ ಪಾಷಾ (ಶಬಾನಾ) ಅವರು ಬೀಬಿ ಫಾತಿಮಾ ಅವರನ್ನು 20 ವರ್ಷಗಳ ಹಿಂದೆ ದತ್ತು ಪಡೆದು, ಸಾಕಿ-ಸಲಹಿದ್ದಾರೆ.

ಜೀವನದಲ್ಲಿ ಗುರಿ, ಧೈರ್ಯ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಮಂಗಳಮುಖಿಯೊಬ್ಬರು ಸಾಕ್ಷಿಯಾಗಿದ್ದಾರೆ. ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರೂ, ಬಂದ ಹಣ ಹಣದಲ್ಲಿ ದತ್ತು ಪಡೆದ ಬಾಲಕಿಯನ್ನು ಕಿಕ್ ಬಾಕ್ಸರ್ ಆಗಿ ಪರಿವರ್ತಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಅಕ್ರಂ ಪಾಷಾ (ಶಬಾನಾ) ಅವರು ಬೀಬಿ ಫಾತಿಮಾ ಅವರನ್ನು 20 ವರ್ಷಗಳ ಹಿಂದೆ ದತ್ತು ಪಡೆದು, ಸಾಕಿ-ಸಲಹಿದ್ದಾರೆ. ಸಮಾಜದಲ್ಲಿ ಎದುರಾಗುವ ಹಲವು ಕಷ್ಟಗಳ ನಡುವೆಯೂ ಮಗಳ ಸಾಧನೆಗೆ ಪ್ರೇರಣೆ ನೀಡಿದ್ದಾರೆ. ಈ ಮೂಲಕ ಲಿಂಗತ್ವ ಅಲ್ಪಸಂಖ್ಯಾತರೂ ಕೂಡ ಮಕ್ಕಳನ್ನು ಉತ್ತಮವಾಗಿ ಸಲುಹಬಲ್ಲರು ಎಂಬುದಕ್ಕೆ ನಿದರ್ಶನರಾಗಿದ್ದಾರೆ.

ಶಬಾನಾ ಅವರೂ ಕೂಡ ಅನಾಥರಾಗಿದ್ದು, ಇವರನ್ನು ಚಾರಿಟಿಯೊಂದು ರಕ್ಷಣೆ ಮಾಡಿತ್ತು. ನಂತರ ಶಬಾನಾ ಜೀವನ ಕಷ್ಟಗಳಿಂದಲೇ ತುಂಬಿ ಹೋಗಿತ್ತು. ಹೋರಾಟ, ಸಾಮಾಜಿಕ ನಿರಾಕರಣೆಯಿಂದಲೇ ಜೀವನ ತಳ್ಳುವಂತಾಗಿತ್ತು. ಶಬಾನಾ ಅವರ ಸೋದರ ಸಂಬಂಧಿ ಯಾವುದೋ ಕಾರಣಕ್ಕೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಬಿಟ್ಟು ಮನೆಯಿಂದ ಹೊರಟು ಹೋಗಿದ್ದರು. ಅದಾಗಲೇ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರೂ, ಅನಾಥರಾಗಿದ್ದ ಹೆಣ್ಣುಮಕ್ಕಳ ಸ್ಥಿತಿ ಕಂಡು ಮರುಗಿದ್ದ ಶಬಾನಾ ಅವರು, ಎರಡನೇ ಯೋಚನೆ ಮಾಡದೆ, ಅವರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಲಿಂಗವನ್ನು ಲೆಕ್ಕಿಸದೆ ನಾಲ್ವರೂ ಮಕ್ಕಳನ್ನು ದತ್ತು ಪಡೆದು, ಪ್ರತೀ ಮಗುವನ್ನು ಪ್ರೀತಿಯಿಂದ ಸಾಕಿ-ಸಲುಹಿದರು.

ನಾಲ್ವರ ಪೈಕಿ ಫಾತಿಮಾ 12ನೇ ವಯಸ್ಸಿನಲ್ಲಿಯೇ ಕಿಕ್ ಬಾಕ್ಸಿಂಗ್ ನಲ್ಲಿ ಆಸಕ್ತಿ ತೋರಿಸಿದ್ದು. ಒಂದೊಮ್ಮೆ ಇದ್ದಕ್ಕಿದ್ದಂತೆ ಒಂದೇ ಕೈಯಿಂದ ಪಿಗ್ಗಿ ಬ್ಯಾಂಕ್ ನ್ನು ಒಡೆದು ಹಾಕಿದ್ದರು. ಬಳಿಕ ಇದೇ ಪಿಗ್ಗಿ ಬ್ಯಾಂಕ್ ನಲ್ಲಿ ಹಣವನ್ನು ಕೂಡಿ ಹಾಕಿ ಎಲೈಟ್ ಕಿಕ್ ಬಾಕ್ಸಿಂಗ್ ಅಕಾಡೆಮಿಗೆ ಸೇರ್ಪಡೆಗೊಂಡರು. ಆಕೆಯ ಈ ಪ್ರಯತ್ನ ಶಬಾನಾ ಅವರ ಹೃದಯ ಮುಟ್ಟುವಂತೆ ಮಾಡಿತ್ತು. ಬಳಿಕ ಫಾತಿಮಾ ಕನಸು ನನಸು ಮಾಡಲು ಶಬಾನಾ ಅವರು ಮುಂದಾಗಿದ್ದರು.

ತರಬೇತುದಾರ ಜಶ್ವನಾಥ್ ಅವರ ಮಾರ್ಗದರ್ಶನ ಮತ್ತು ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ರವಿ ಸಿ ಅವರ ಮಾರ್ಗದರ್ಶನದಲ್ಲಿ ಮಗಳು ಗುರಿ ಮುಟ್ಟಲು ಸಹಾಯವಾಯಿತು. ಫಾತಿಮಾ ಅವರು ಇದೀಗ ಉತ್ಸಾಹ, ಸಮರ್ಪಣೆ ಹಾಗೂ ಬೆಂಬಲವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಈಗಾಗಲೇ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ 23 ಪದಕಗಳನ್ನು ಗೆದ್ದಿರುವ ಫಾತಿಮಾ ಅವರು, ಇತ್ತೀಚೆಗೆ ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನಿಂದ ಯುವರಾಜ ಕಾಲೇಜಿನಲ್ಲಿ ನಡೆದ 16ನೇ ಕರ್ನಾಟಕ ರಾಜ್ಯ ಮಕ್ಕಳ, ಕೆಡೆಟ್, ಜ್ಯೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಲೈಟ್ ಕಾಂಟಾಕ್ಟ್ (46 ಕೆ.ಜಿ) ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಿಕ್ ಲೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಮೈಸೂರಿಗೆ ಗೌರವ ತಂದಿದ್ದಾರೆ. ಇದೀಗ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಫಾತಿಮಾ ಸಿದ್ಧತೆ ನಡೆಸುತ್ತಿದ್ದಾರೆ.

ನನ್ನ ಜೀವನ ಕಳಂಕ ಮತ್ತು ತಾರತಮ್ಯದಿಂದ ಹಾಳಾಗಿ ಹೋಯಿತು, ಆದರೆ, ನನ್ನನ್ನು ಪ್ರೀತಿಸುವವರ ಜೀವನ ಉತ್ತಮವಾಗಿರಬೇಕು. ಇದೀಗ ನನ್ನ ಮೇಲೆ ಜವಾಬ್ದಾರಿ ತುಂಬಾ ಇದೆ. ನನ್ನನ್ನು ಪ್ರೀತಿಸುವವರ ಬೆಂಬಲಿಸಲು, ಪ್ರೋತ್ಸಾಹ ನೀಡಬೇಕಿದೆ. ಫಾತಿಮಾ ಕೇವಲ ನನ್ನ ಮಗಳಲ್ಲ. ಅವಳು ನನ್ನ ಹೆಮ್ಮೆ, ನನ್ನ ಪರಂಪರೆ ಎಂದು ಶಬಾನಾ ಹೇಳಿದ್ದಾರೆ.

ನನ್ನ ಅಮ್ಮಿ ನನ್ನ ಶಕ್ತಿ. ನನ್ನ ಆಧಾರಸ್ತಂಭ. ಯಾರಿಗೂ ಕಾಣಿಸದ ಪ್ರತಿಭೆ ನನ್ನ ಅಮ್ಮಿ ಕಣ್ಣಿಗೆ ಕಾಣಿಸಿತ್ತು. ನನ್ನ ಕನಸು ನನಸು ಮಾಡಲು ಶ್ರಮಿಸಿದ್ದಾರೆ. ಒಂದಲ್ಲಾ ಒಂದು ದಿನ ಆಕೆ ತಲೆ ಮೇಲೆತ್ತುವಂತೆ ಮಾಡಬೇಕು. ಆಕೆಯನ್ನು ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಬೇಕು. ಒಂದು ದಿನ ನಾನೂ ಕೋಚ್ ಆಗುವ ವಿಶ್ವಾಸವಿದೆ, ಆಗ ನನ್ನಂತೆಯೇ ಕ್ರೀಡಾಪಟುವಾಗುವವರಿಗೆ ತರಬೇತಿ ನೀಡಲು ಬಯಸುತ್ತೇನೆ. ಅಮ್ಮಿ ಪ್ರೀತಿ, ತ್ಯಾಗವಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ ಎಂದು ಫಾತಿಮಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT