ಉಡುಪಿ: ಕುಂದಾಪುರ ತಾಲ್ಲೂಕಿನ ಬೈಂದೂರಿನ 111 ವರ್ಷ ಹಳೆಯ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು AI ರೋಬೋಟ್ ಟೀಚರ್ ಪರಿಚಯಿಸಿದ್ದು, ಇದು ಕರ್ನಾಟಕದ ಸರ್ಕಾರಿ ಶಾಲೆಯಲ್ಲಿ ಮೊದಲ ಪ್ರಯೋಗವಾಗಿದೆ.
ನೀತಿ ಆಯೋಗದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿಯಲ್ಲಿ ಮೇಕರ್ಲ್ಯಾಬ್ಸ್ ಎಜುಟೆಕ್ ಅಭಿವೃದ್ಧಿಪಡಿಸಿದ IRIS ಅನ್ನು ಎರಡು ವರ್ಷಗಳ ಹಿಂದೆ ಕೇರಳದ ತಿರುವನಂತಪುರಂನಲ್ಲಿರುವ KTCT ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲು ಪರಿಚಯಿಸಲಾಯಿತು.
ನಮ್ಮ ಶಾಲೆಯು ಸಂವಾದಾತ್ಮಕ ಕಲಿಕೆಯನ್ನು ಉತ್ತೇಜಿಸಲು ಸೀರೆಯುಟ್ಟ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ‘ಐರಿಸ್’ ರೋಬೊ ಟೀಚರ್ ಲೋಕಾರ್ಪಣೆಗೊಳಿಸಲಾಯಿತು, ಇದು ಶಿಕ್ಷಕರಿಗೆ ಪರ್ಯಾಯವಲ್ಲ, ಆದರೆ ಶಿಕ್ಷಕ ಸ್ನೇಹಿಯಾಗಿದೆ. AI-ಸಕ್ರಿಯಗೊಳಿಸಿದ ಧ್ವನಿ ಸಹಾಯಕವು 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದಾತ್ಮಕ ಕಲಿಕೆಯನ್ನು ಬೆಂಬಲಿಸುತ್ತದೆ ಮತ್ತು ಮುಂದಿನ ಶೈಕ್ಷಣಿಕ ವರ್ಷದಿಂದ ನಾವು ಈ ಸೌಲಭ್ಯವನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದೇವೆ ಎಂದು ಶಾಲೆಯನ್ನು ದತ್ತು ಪಡೆದಿರುವ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಕೆಲವು ಖಾಸಗಿ ಶಾಲೆಗಳು ಈ ಸೌಲಭ್ಯವನ್ನು ಮೊದಲೇ ಪ್ರಾರಂಭಿಸಿವೆ, ಮತ್ತು ನಮ್ಮದು ರಾಜ್ಯದ ಮೊದಲ ಸರ್ಕಾರಿ ಶಾಲೆಯಾಗಿದೆ. ನಾವು ಪ್ರೊಜೆಕ್ಟರ್ಗಳು, ಸ್ಮಾರ್ಟ್ ಬೋರ್ಡ್ಗಳು ಮತ್ತು ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಿದ್ದೇವೆ. ಖಾಸಗಿ ಶಾಲೆಗಳಿಗೆ ಸಮಾನವಾಗಿ ತಂತ್ರಜ್ಞಾನ ಆಧಾರಿತ ಕಲಿಕೆಯ ಮೇಲೆ ನಮ್ಮ ಗಮನವಿದ. ರೋಬೋಟ್ಗಾಗಿ 3.5 ಲಕ್ಷ ರೂ. ಹೂಡಿಕೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದರ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ, ಸರಿಯಾದ ಇಂಟರ್ನೆಟ್ ಸಂಪರ್ಕ ಮತ್ತು ವಿದ್ಯುತ್ ಸರಬರಾಜಿನ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಶೆಟ್ಟಿ ಹೇಳಿದರು. ಅಗತ್ಯವಿದ್ದರೆ ಮೇಕರ್ಲ್ಯಾಬ್ಸ್ ಎಜುಟೆಕ್ ಸಿಬ್ಬಂದಿ ರೋಬೋಟ್ ಅನ್ನು ನಿರ್ವಹಿಸುತ್ತಾರೆ.
ಹೊಸ ತರಗತಿ ಕೊಠಡಿಗಳು, ಸೌರಶಕ್ತಿ ವ್ಯವಸ್ಥೆ, ಶಾಲಾ ಬಸ್ ಇತ್ಯಾದಿಗಳನ್ನು ಒಳಗೊಂಡಂತೆ ಶಾಲೆಯ ಮೂಲಸೌಕರ್ಯವನ್ನು ಸುಧಾರಿಸಲು ಟ್ರಸ್ಟ್ ಸುಮಾರು 3 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಪರಿಚಯಿಸಿದ ನಂತರ ಶಾಲೆಯ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
AI ಶಿಕ್ಷಕರ ಪರಿಚಯದ ನಂತರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಈಗಾಗಲೇ ಪ್ರವೇಶಕ್ಕಾಗಿ ವಿಚಾರಣೆಗಳು ಹೆಚ್ಚಿವೆ. ಪ್ರಸ್ತುತ, 1 ರಿಂದ 7 ನೇ ತರಗತಿಯವರೆಗೆ 334 ವಿದ್ಯಾರ್ಥಿಗಳು ಶಾಲೆಯಲ್ಲಿ ದಾಖಲಾಗಿದ್ದಾರೆ ಮತ್ತು 15 ಶಿಕ್ಷಕರು ಇದ್ದಾರೆ.