ತಿರುವನಂತಪುರಂ: ಕಲೆ ಎನ್ನುವುದು ಯಾವುದೇ ಧರ್ಮ, ಜಾತಿ ಅಥವಾ ಪ್ರಾಂತ್ಯಕ್ಕೆ ಸೀಮಿತವಾದುದಲ್ಲ ಎಂಬುದನ್ನು ಕೊಚ್ಚಿಯ ಮುಸ್ಲಿಂ ಯುವತಿ ಜಮ್ಷೀನಾ ಜಮಾಲ್ ಸಾಬೀತುಪಡಿಸಿದ್ದಾರೆ.
ಕೇರಳದ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ನೃತ್ಯ ಪ್ರಕಾರವಾದ 'ಮೋಹಿನಿಯಾಟ್ಟಂ'ನಲ್ಲಿ ಎಂಜಿ (ಮಹಾತ್ಮಾ ಗಾಂಧಿ) ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್ ಪಡೆಯುವ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ಕಲೆಯ ಆರಾಧನೆಯಲ್ಲಿ ತೊಡಗಿರುವ ಜಮ್ಷೀನಾ ಅವರ ಈ ಪಯಣ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.
ಜಂಶೀನಾ ಅವರ ಸಾಧನೆ ಕೇವಲ ಶೈಕ್ಷಣಿಕ ಯಶಸ್ಸಲ್ಲ, ಅದು ಕಲೆಗೆ ಧರ್ಮವಿಲ್ಲ, ಪ್ರತಿಭೆಗೆ ಯಾವುದೇ ಗಡಿ ಇಲ್ಲ ಎಂಬುದನ್ನು ಸಾಬೀತುಪಡಿಸುವ ಕಥೆಯಾಗಿದೆ.
ಜಂಶೀನಾ 10 ನೇ ತರಗತಿಯಲ್ಲಿ ಓದುತ್ತಿದ್ದಾಗ ಕೇರಳ ನಟನಂ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬಹುಮಾನ ಪಡೆದಿದ್ದರು. ಆ ಸಾಧನೆಯನ್ನು ಅವರ ಊರಿನ ಜುಮಾ ಮಸೀದಿಯೇ ಫ್ಲೆಕ್ಸ್ ಅಳವಡಿಸಿ ಸಂಭ್ರಮಿಸಿತ್ತು. ಶಾಸ್ತ್ರೀಯ ನೃತ್ಯದಲ್ಲಿ ಸಾಧನೆ ಮಾಡಿದ ಮುಸ್ಲಿಂ ಬಾಲಕಿಯನ್ನು ಮಸೀದಿಯೇ ಗೌರವಿಸಿದ್ದ ಈ ಘಟನೆ ಅನೇಕರಿಗೆ ಅಚ್ಚರಿ ತಂದಿತ್ತು.
ಬೇರೆಡೆ ನಿರ್ಬಂಧಗಳ ಬಗ್ಗೆ ಕೇಳುತ್ತೇವೆ. ಆದರೆ, ನನ್ನ ಬದುಕಿನಲ್ಲಿ ಅಂತಹ ಅನುಭವವೇ ಇರಲಿಲ್ಲ. ಕುಟುಂಬ ಮತ್ತು ಸಮಾಜದಿಂದ ಸದಾ ಪ್ರೋತ್ಸಾಹವೇ ಸಿಕ್ಕಿತು. ಅದೇ ನನ್ನ ದೊಡ್ಡ ಶಕ್ತಿ ಎಂದು ಜಂಶೀನಾ ಅವರು ಹೇಳಿದ್ದಾರೆ.
ಮೂರು ವರ್ಷದ ವಯಸ್ಸಿನಲ್ಲೇ ಭರತನಾಟ್ಯ ಕಲಿಯಲು ಆರಂಭಿಸಿದ ಜಂಶೀನಾ, ಏಳನೇ ತರಗತಿಯಲ್ಲಿ ಮೊಹಿನಿಯಾಟ್ಟಂ ಕಡೆ ಒಲವು ಬೆಳೆಸಿಕೊಂಡರು. ಪ್ರಸ್ತುತ ಅವರು ಪದ್ಮಶ್ರೀ ಕಲಾಮಂಡಲಂ ಕ್ಷೇಮಾವತಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಕೊಚ್ಚಿಯ ಆರ್‌ಎಲ್‌ವಿ ಸರ್ಕಾರಿ ಸಂಗೀತ ಮತ್ತು ಲಲಿತಕಲಾ ಕಾಲೇಜಿನಲ್ಲಿ ಮೊಹಿನಿಯಾಟ್ಟಂನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.
2022ರಲ್ಲಿ ಪದವಿಯಲ್ಲಿ ರ್ಯಾಂಕ್ ಪಡೆದಿದ್ದರೂ ಮೊದಲ ಸ್ಥಾನ ಸ್ವಲ್ಪ ಅಂತರದಲ್ಲಿ ತಪ್ಪಿಹೋಗಿತ್ತು. ಆದರೆ, ಈಗ ಎಂಎಯಲ್ಲಿ ಪ್ರಥಮ ರ್ಯಾಂಕ್ ಪಡೆದು ಆ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಕುಟುಂಬದ ಬೆಂಬಲವೇ ದೊಡ್ಡ ಶಕ್ತಿ
ಜಂಶೀನಾ ಅವರ ತಂದೆ ಟಿ.ಎ. ಜಮಾಲ್ ರಂಗಭೂಮಿ ಕಲಾವಿದರಾಗಿದ್ದು, ಮಗಳಲ್ಲಿದ್ದ ಕಲೆಯ ಆಸಕ್ತಿಯನ್ನು ಬಾಲ್ಯದಲ್ಲೇ ಗುರುತಿಸಿದ್ದರು. ತಾಯಿ ಶೀಬಾ ಕೂಡ ಬಾಲ್ಯದಲ್ಲಿ ಭರತನಾಟ್ಯ ಕಲಿತಿದ್ದರಿಂದ ಮಗಳ ಕನಸಿಗೆ ಸದಾ ಬೆಂಬಲವಾಗಿ ನಿಂತರು.
ನನ್ನ ಕುಟುಂಬವಾಗಲಿ, ಸಮಾಜವಾಗಲಿ, ನನ್ನ ಆಯ್ಕೆಯನ್ನು ಎಂದಿಗೂ ಪ್ರಶ್ನಿಸಲಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂದು ಯಾರಿಗೂ ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ಬರಲಿಲ್ಲ ಎಂದು ಜಂಶೀನಾ ಹೇಳಿದ್ದಾರೆ.
ಮೊಹಿನಿಯಾಟ್ಟಂ ಮಾತ್ರವಲ್ಲ, ಕಥಕ್ಕಳಿಯಲ್ಲೂ ಸಾಧನೆ
ಮೊಹಿನಿಯಾಟ್ಟಂ ಜೊತೆಗೆ ಜಂಶೀನಾ ಕಥಕ್ಕಳಿಯಲ್ಲೂ ತರಬೇತಿ ಪಡೆದಿದ್ದಾರೆ. ಗುರುವಾರದ ಗುರುವಾಯೂರಿನ ಮೆಲ್ಪತ್ತೂರು ಆಡಿಟೋರಿಯಂನಲ್ಲಿ ಕೃಷ್ಣ ವೇಷದಲ್ಲಿ ಕಥಕ್ಕಳಿ ರಂಗಪ್ರವೇಶ ಮಾಡಿ, ದುರ್ಯೋಧನವಧಂ ಭಾಗವನ್ನು ಪ್ರದರ್ಶಿಸಿದ್ದರು.
ರಾಷ್ಟ್ರೀಯ ವೇದಿಕೆಗಳಲ್ಲೂ ಮಿಂಚಿದ ಪ್ರತಿಭೆ
ಜಂಶೀನಾ ಈಗಾಗಲೇ ಖಜುರಾಹೋ ಡ್ಯಾನ್ಸ್ ಫೆಸ್ಟಿವಲ್, ಭಾವ್ ನ್ಯಾಷನಲ್ ಡ್ಯಾನ್ಸ್ ಫೆಸ್ಟಿವಲ್, ತ್ರಿಭಂಗಿ ಸೇರಿದಂತೆ ಹಲವು ಪ್ರತಿಷ್ಠಿತ ಉತ್ಸವಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ.
ಅವರು ದೂರದರ್ಶನದ ಗ್ರೇಡೆಡ್ ಕಲಾವಿದೆ ಆಗಿದ್ದು, ಕೇರಳ ಕಲಾಮಂಡಲಂ ಯುವಪ್ರತಿಭಾ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಸಿನಿಮಾಗಳಲ್ಲೂ ಅಭಿನಯ
ನೃತ್ಯದ ಜೊತೆಗೆ ಜಂಶೀನಾ 'ವಲಿಯಪೆರುನ್ನಾಳ್', 'ಪಾಪಂ ಚೆಯ್ಯಾಥವರು ಕಲ್ಲೆರಿಯಟ್ಟೆ', 'ಪ್ರಾವು' ಹಾಗೂ 'ಮನಸವಾಚ' ಸೇರಿದಂತೆ ಕೆಲವು ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ.
ವೇದಿಕೆ ಮೇಲೆ ನಿಂತರೆ ಉಳಿದೆಲ್ಲ ಮರೆತುಹೋಗುತ್ತದೆ
ವೇದಿಕೆಯ ಮೇಲೆ ಕಾಲಿಟ್ಟ ಕ್ಷಣ ಉಳಿದೆಲ್ಲವೂ ಮರೆತುಹೋಗುತ್ತದೆ. ಆಗ ನನಗೆ ಕಾಣುವುದು ಕಲೆ ಮಾತ್ರ. ಆ ಅನುಭವವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇನ್ನಷ್ಟು ಕಲಿಯಬೇಕು, ಹೆಚ್ಚು ಪ್ರದರ್ಶನ ನೀಡಬೇಕು. ಮೊಹಿನಿಯಾಟ್ಟಂ ಕ್ಷೇತ್ರದಲ್ಲಿ ನನ್ನ ಹೆಸರೇ ಒಂದು ಗುರುತಾಗಬೇಕು ಎಂಬುದೇ ನನ್ನ ಕನಸು ಎಂದು ಜಂಶೀನಾ ತಿಳಿಸಿದ್ದಾರೆ.
ಧರ್ಮ, ಸಂಪ್ರದಾಯ ಮತ್ತು ಸಾಮಾಜಿಕ ಪೂರ್ವಾಗ್ರಹಗಳಾಚೆ ಹೋಗಿ, ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಸಾಧನೆ ಮಾಡಬಹುದೆಂಬುದಕ್ಕೆ ಜಂಶೀನಾ ಜಮಾಲ್ ಅವರ ಬದುಕು ಸ್ಪೂರ್ತಿದಾಯಕ ಉದಾಹರಣೆಯಾಗಿದೆ.