ಐಪಿಎಲ್ಗೆ ಇಂದು ವೈಭವದ ಚಾಲನೆ
ಕೋಲ್ಕತಾ: ವಿವಾದಗಳ ಬಿಸಿಯ ನಡುವೆಯೇ ಈ ಬಾರಿಯ ಐಪಿಎಲ್ ಜಾತ್ರೆಗೆ ಮಂಗಳವಾರ ಅಧಿಕೃತ ಚಾಲನೆ ದೊರೆಯಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಹೊಸ ಭರವಸೆಗಳನ್ನು ನೀಡಲಿರುವ ಆರನೇ ಆವೃತ್ತಿಯ ಐಪಿಎಲ್ಗೆ ಬಾಲಿವುಡ್ ತಾರೆಗಳ ನೃತ್ಯ ಕಾರ್ಯಕ್ರಮಗಳ ಸೊಬಗು, ಕಣ್ಣು ಕೋರೈಸುವ ಅದ್ಧೂರಿತನದೊಂದಿಗೆ ಆರಂಭಗೊಳ್ಳಲಿದೆ.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ ಕೇವಲ ಬಾಲಿವುಡ್ ತಾರೆಗಳಿಂದಷ್ಟೇ ಅಲ್ಲ, ಫ್ಲೈಯಿಂಗ್ ಡ್ರಮ್ಮರ್ಸ್, ಚೈನೀಸ್ ಸ್ಟಂಟ್ ಕಲಾವಿದರು, ಪಟಾಕಿಗಳ ಸದ್ದು-ಬೆಳಕಿನೊಂದಿಗೆ ಮತ್ತಷ್ಟು ವೈಭವವಾಗಲಿದೆ. ಹಿಂದೆ ಆಗಿರುವ ಎಲ್ಲಾ ಐಪಿಎಲ್ ಉದ್ಘಾಟನಾ ಸಮಾರಂಭಗಳನ್ನೂ ಮೀರಿಸಿದಂಥಾ ಸಮಾರಂಭ ಇದಾಗಲಿದೆ ಎಂದು ಹೇಳಲಾಗುತ್ತಿದೆ.
ಕ್ರಿಕೆಟ್ ಗುಂಗೇರಿಸುವ ಕಾರಣಕ್ಕಾಗಿಯೇ ಸದಾ ಸುದ್ದಿ ಮಾಡುವ ಐಪಿಎಲ್ ಈ ಬಾರಿಯೂ ಸುದ್ದಿ ಮಾಡುತ್ತಿದೆ. ಆದರೆ, ಅದರ ಜೊತೆಗೇ, ಕೆಲವು ಸಲ್ಲದ ವಿಷಯಗಳಿಗಾಗಿಯೂ ವಿವಾದದ ಅಲೆಗಳಿಗೆ ಪಂದ್ಯಾವಳಿ ಸಿಲುಕಿದೆ.
ಶ್ರೀಲಂಕಾದಲ್ಲಿ ತಮಿಳರ ಮೇಲೆ ಅಲ್ಲಿನ ಸೇನೆ ನಡೆಸಿರುವ ಹೇಯ ಕೃತ್ಯಗಳನ್ನು ವಿರೋಧಿಸಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಂದ ಲಂಕಾ ಆಟಗಾರರನ್ನು ಹೊರಗಿಡುವ ಆದೇಶ ಹೊರಡಿಸಿದ್ದಾರೆ.
ಇದೂ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಾರದ ಕಾಲ ಚರ್ಚೆಯ ವಿಷಯವಾಗಿತ್ತು. ಲಂಕಾ ಆಟಗಾರರಿಗೆ ವಿಧಿಸಿರುವ ನಿರ್ಬಂಧದಿಂದಾಗಿ, 10 ಲೀಗ್ ಪಂದ್ಯಗಳು ಹಾಗೂ ಎರಡು ಎಲಿಮಿನೇಟರ್ ಹಂತದ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಲಂಕಾ ಆಟಗಾರರು ಕಳೆದುಕೊಂಡಿದ್ದಾರೆ. ಅಲ್ಲದೇ, ನಾಲ್ಕು ಐಪಿಎಲ್ ತಂಡಗಳ ನಾಯಕ ಸ್ಥಾನಗಳಲ್ಲಿ ಲಂಕಾ ಆಟಗಾರರು ಇರುವುದರಿಂದ ಇದೂ ಆಯಾ ತಂಡಗಳಿಗೆ ಕಷ್ಟದ ಪರಿಸ್ಥಿತಿಯನ್ನು ತಂದೊಡ್ಡಿದೆ.
ಈ ಎಲ್ಲಾ ತೊಂದರೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಲ್ಲಿ ಲಂಕಾ ಆಟಗಾರರಿಗೆ ಆಡಲು ಅವಕಾಶ ನೀಡುವಂತೆ, ತಮಿಳುನಾಡು ಸರ್ಕಾರದೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸಿದ್ದ ಸಂಧಾನ ಮಾತುಕತೆಗಳೂ ವಿಫಲಗೊಂಡಿದ್ದವು. ಅಂತಿಮವಾಗಿ, ಲಂಕಾ ಆಟಗಾರರಿಗೆ ಚೆನ್ನೈ ಐಪಿಎಲ್ ಪಂದ್ಯಗಳಲ್ಲಿ ಆಡದಂತೆ ನಿಷೇಧ ಹೇರಿ ಜಯಲಲಿತಾ ಆದೇಶ ಹೊರಡಿಸಿಬಿಟ್ಟರು. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿರುವ ಬಿಸಿಸಿಐಗೆ ಸಂದ ಹಿನ್ನೆಡೆಯಿದು.
ಇನ್ನು, ಪಂದ್ಯಾವಳಿಗೆ ಸಂಬಂಧಿಸಿದಂತೆ ಮತ್ತೊಂದು ಬೇಸರದ ಸಂಗತಿ ಶಾರುಖ್ ಖಾನ್ಗೆ ಸಂಬಂಧಿಸಿದ್ದು. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ರೈಡರ್ಸ್ (ಕೆಕೆಆರ್)ನ ಧಣಿಗೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ), ವಾಂಖೆಡೆ ಕ್ರೀಡಾಂಗಣದಿಂದ ಐದು ವರ್ಷಗಳ ಕಾಲ ನಿಷೇಧ ಹೇರಿತ್ತು. ಈ ನಿಷೇಧವನ್ನು ಈ ಬಾರಿಯೂ ಎಂಸಿಎ ಮುಂದುವರಿಸಿದೆ. ಹಾಗಾಗಿ, ವಾಂಖೆಡೆಯಲ್ಲಿ ಈ ಬಾರಿ ನಡೆಯಲಿರುವ ಎಲ್ಲಾ ಐಪಿಎಲ್ ಪಂದ್ಯಗಳಿಂದ ಶಾರುಖ್ ದೂರ ಉಳಿಯಬೇಕಾಗುತ್ತದೆ. ಕಳೆದ ವರ್ಷ ವಾಂಖೆಡೆಯಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ, ಅಲ್ಲಿನ ಸಿಬ್ಬಂದಿ ಮೇಲೆ ಅನುಚಿತವಾಗಿ ವರ್ತಿಸಿ, ಹಲ್ಲೆ ಮಾಡಿದ್ದ ಆರೋಪದಡಿ, ಶಾರುಖ್ ಮೇಲೆ ಎಂಸಿಎ ನಿಷೇಧ ಹೇರಿದೆ.
ಕಳೆಗುಂದದ ಐಪಿಎಲ್: ಈ ಎರಡು ವಿವಾದಗಳನ್ನು ಹೊರತುಪಡಿಸಿದಂತೆ, ಈ ಬಾರಿಯ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಲು ಬರುತ್ತಿದೆ. ಕ್ರಿಕೆಟ್ ಪ್ರಿಯರೂ ರೋಮಾಂಚನ ಘಳಿಗೆಗಳಿಗಾಗಿ ಕಾಯುತ್ತಿದ್ದಾರೆ.
ಈ ಬಾರಿಯ ಐಪಿಎಲ್ ಕಪ್ಗಾಗಿ ಒಟ್ಟು ಒಂಭತ್ತು ತಂಡಗಳು ಹಣಾಹಣಿಗೆ ಇಳಿಯಲಿವೆ. ಈ ಬಾರಿಯ ಐಪಿಎಲ್ನ ಮೊಟ್ಟ ಮೊದಲ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ನಡೆಯಲಿದೆ. ಈ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದೇ ಕ್ರೀಡಾಂಗಣದಲ್ಲಿ ಮೇ. 26ರಂದು ಫೈನಲ್ ಪಂದ್ಯವೂ ನಡೆಯಲಿದೆ.ಧೋನಿ ಟೀಂ ಮೇಲೆ ಕಣ್ಣು: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಯಕತ್ವ ವಹಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೇ ಎಲ್ಲರ ದೃಷ್ಟಿ ಹರಿದಿದೆ. ಇತ್ತೀಚೆಗಷ್ಟೇ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4-0 ಅಂತರದಿಂದ ಕ್ಲೀನ್ಸ್ವೀಪ್ ಜಯ ಸಾಧಿಸಿದ್ದ ಟೀಂ ಇಂಡಿಯಾದಲ್ಲಿದ್ದ ನಾಲ್ವರು ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್ನಲ್ಲಿದ್ದಾರೆ. ನಾಯಕ ಮಹೇಂದ್ರ ಸಿಂಗ್ ಧೋನಿ, ರವಿಚಂದ್ರನ್ ಅಶ್ವಿನ್, ಮುರಳಿ ವಿಜಯ್ ಹಾಗೂ ರವೀಂದ್ರ ಜಡೇಜಾ.ಕ್ಲೀನ್ ಸ್ವೀಪ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಇವರು. ಇದಲ್ಲದೇ, ಎರಡು ಬಾರಿ ಚಾಂಪಿಯನ್ ಆಗಿದ್ದ, ಎರಡು ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿರುವ ಚೆನ್ನೈ ತಂಡದಲ್ಲಿರುವ ಈ ಆಟಗಾರರು ಉತ್ತಮ ಫಾರ್ಮ್ನಲ್ಲಿರುವುದು ಆ ತಂಡಕ್ಕೆ ವರದಾನವಾಗಲಿದೆ ಎಂದು ಹೇಳಲಾಗುತ್ತಿದೆ. ಅತ್ತ, ಹಾಲಿ ಚಾಂಪಿಯನ್ ಕೆಕೆಆರ್ ತಂಡವೇನೂ ಕಡಿಮೆಯಿಲ್ಲ. ಕಳೆದ ಬಾರಿ ಗೆದ್ದಿದ್ದ ಕಪ್ ಅನ್ನು ಈ ಬಾರಿಯೂ ತನ್ನಲ್ಲೇ ಕೆಕೆಆರ್ ಉಳಿಸಿಕೊಳ್ಳಲಿದೆಯೇ ಎಂಬುದು ಕುತೂಹಲಕಾರಿ ಸಂಗತಿ. ತಂಡದ ಗೌತಮ್ ಗಂಭೀರ್ ತಂಡದ ಶಕ್ತಿಗಳಲ್ಲೊಂದು. ಸುನಿಲ್ ನಾರಾಯಣ್, ಜಾಕ್ ಕಾಲೀಸ್, ಬ್ರೆಂಡಾನ್ ಮೆಕಲಂ, ಭಾಟಿಯಾ, ಮನೋಜ್ ತಿವಾರಿ ಹಾಗೂ ಲಕ್ಷ್ಮೀ ರತನ್ ಶುಕ್ಲಾ ಅವರೂ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಇನ್ನು, ಪಂದ್ಯಾವಳಿಯಲ್ಲಿ ಹೊಸದಾಗಿ ಪದಾರ್ಪಣೆ ಮಾಡುತ್ತಿರುವ ಹೈದ್ರಾಬಾದ್ ಸನ್ರೈಸರ್ಸ್ ತಂಡ ತನ್ನ ಮೊದಲ ಪ್ರಯತ್ನದಲ್ಲಿ ಯಾವ ಮಟ್ಟಿಗಿನ ಯಶಸ್ಸು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.