'ಶಾರುಖ್ ಎಂದಿಗೂ ನಮ್ಮ ಸ್ಫೂರ್ತಿ'
ಕೋಲ್ಕತಾ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ನೋಡಲು ಶಾರುಖ್ಗೆ ಅವಕಾಶವಿಲ್ಲವಾದರೂ, ಅಲ್ಲಿ ಕೆಕೆಆರ್ ತಂಡ ಆಡುವ ಪ್ರತಿಯೊಂದು ಪಂದ್ಯಕ್ಕೂ ಅವರು ಎಂದಿಗೂ ಸ್ಫೂರ್ತಿಯಾಗಿರುತ್ತಾರೆ ಎಂದು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮುಖ್ಯಸ್ಥ ವೆಂಕಿ ಮೈಸೂರ್ ತಿಳಿಸಿದ್ದಾರೆ.
ಕಳೆದ ವರ್ಷ ನಡೆದಿದ್ದ ಐಪಿಎಲ್ ಪಂದ್ಯವೊಂದರ ಸಂದರ್ಭದಲ್ಲಿ ಶಾರುಖ್ ಖಾನ್ ಅವರು, ವಾಂಖೆಡೆ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದರ ಆರೋಪದ ಹಿನ್ನೆಲೆಯಲ್ಲಿ, ವಾಂಖೆಡೆ ಕ್ರೀಡಾಂಗಣ ಪ್ರವೇಶಿದಂತೆ, ಶಾರುಖ್ ಖಾನ್ ಮೇಲೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಐದು ವರ್ಷಗಳ ನಿಷೇಧ ಹೇರಿತ್ತು. ಕಳೆದ ಬಾರಿ ಹೇರಿದ್ದ ನಿಷೇಧವನ್ನು ಹಿಂಪಡೆಯದೇ, ಮುಂದುವರೆಸುವುದಾಗಿ ಎಂಸಿಎ, ಇತ್ತೀಚೆಗೆ ಸ್ಪಷ್ಟನೆಯನ್ನೂ ನೀಡಿತ್ತು.
ಈ ಹಿನ್ನೆಲೆಯಲ್ಲಿ, ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವೆಂಕಿ, 'ಶಾರುಖ್ ಖಾನ್ ಅವರು ತಂಡದ ಶಕ್ತಿಯಾಗಿದ್ದಾರೆ. ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ನಮ್ಮ ತಂಡ (ಕೆಕೆಆರ್) ವಾಂಖೆಡೆಯಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ನೋಡಲು ಅವರಿಗೆ ಅವಕಾಶ ನೀಡಿಲ್ಲ. ಆದರೂ, ಅವರು ಮುಂಬೈಗೆ ಆಗಮಿಸಿ ತಂಡದ ಆಟಗಾರರನ್ನು ಹುರಿದುಂಬಿಸುತ್ತಾರೆ. ಮೈದಾನದ ಆಚೆ ಇದ್ದರೂ, ಅವರಿಂದ ತಂಡದ ಆಟಗಾರರಿಗೆ ಸ್ಫೂರ್ತಿ ಸಿಗಲಿದೆ' ಎಂದು ಅವರು ತಿಳಿಸಿದರು.