ಐ- ಲೀಗ್: ಸ್ಪೋರ್ಟಿಂಗ್ ತಂಡಕ್ಕೆ ಗೆಲುವು
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ-ಲೀಗ್ ಅಂತಿಮ ಸುತ್ತಿನ ಪಂದ್ಯಾವಳಿಯ ಬುಧವಾರದ ಪಂದ್ಯದಲ್ಲಿ, ಎಂಡಿ ಸ್ಪೋರ್ಟಿಂಗ್ ತಂಡ ಜಯ ಗಳಿಸಿದೆ. ಮಧ್ಯಾಹ್ನ ನಡೆದ ಪಂದ್ಯದಲ್ಲಿ ಸ್ಪೋರ್ಟಿಂಗ್ ತಂಡ, ಲ್ಯಾಂಗ್ಸ್‌ನಿಂಗ್ ತಂಡದ ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿತು. ಸ್ಪೋರ್ಟಿಂಗ್ ತಂಡದ ಪರವಾಗಿ ಯೂನ್ಸ್ ಬಾಲ್ತಾವ್ ಅವರು 52ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ ಮೊದಲ ಗೋಲ್‌ನ ಖುಷಿ ತಂದುಕೊಟ್ಟರು. ಆನಂತರ, ಚಾರ್ಲ್ಸ್ ಅವರು 58ನೇ ನಿಮಿಷದಲ್ಲಿ ಗೋಲು ಗಳಿಸಿ, ತಮ್ಮ ತಂಡಕ್ಕೆ ಎರಡನೇ ಗೋಲು ತಂದಿತ್ತರು. ಈ ಎರಡೂ ಗೋಲುಗಳು ದಾಖಲಾಗುವ ಮುನ್ನವೇ ಲ್ಯಾಂಗ್‌ನಿಂಗ್ ತಂಡ ತನ್ನ ಗೋಲ್‌ನ ಖಾತೆ ತೆರೆದಿತ್ತು. ಲ್ಯಾಂಗ್ಸ್‌ನಿಂಗ್ ತಂಡದ ಪರವಾಗಿ, ಜೊಯೆಲ್ ಸಂಡೇ ಅವರು ಪಂದ್ಯದ 44ನೇ ನಿಮಿಷದಲ್ಲಿ ಗೋಲು ಗಳಿಸಿದ್ದರು. ಆದರೆ, ಸ್ಪೋರ್ಟಿಂಗ್ ತಂಡದ ಆಕ್ರಮಣಕಾರಿ ಆಟದೆದುರು ಮಂಕಾದ ಲ್ಯಾಂಗ್‌ನಿಂಗ್ ತಂಡದ ಆಟಗಾರರು ಆನಂತರ ಯಾವುದೇ ಗೋಲು ದಾಖಲಿಸಲಿಲ್ಲ. ಏ. 4ರಂದು ವಿಶ್ರಾಂತಿಯ ದಿನವಾಗಿರುವುದರಿಂದ ಐ-ಲೀಗ್‌ನ ಪಂದ್ಯ ನಡೆಯುವುದಿಲ್ಲವೆಂದು ಬಿಡಿಎಫ್‌ಎ ತಿಳಿಸಿದೆ.