ಮತ್ತೆ ಐದು ಕೆಜಿ ಡ್ರಗ್ಸ್ ವಶ
ಫತೇಗಢ ಸಾಹೀಬ್: ಹೆರಾಯಿನ್ ಡ್ರಗ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಬಾಕ್ಸರ್ ವಿಜೇಂದರ್ ಸಿಂಗ್ಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಪ್ರಕರಣದ ಮತ್ತೊಬ್ಬ ಆರೋಪಿ ರಾಮ್ಸಿಂಗ್ ಅವರ ಸಂಬಂಧಿಯೊಬ್ಬರ ಮನೆಯಿಂದ ಐದು ಕೆಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದು, ವಿಜೇಂದರ್ ಸಿಂಗ್ ಹಾಗೂ ರಾಮ್ಸಿಂಗ್ ಇಬ್ಬರೂ ಜಂಟಿಯಾಗಿ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರೆಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
'ಮೆಥಾಮ್ಫೆಟಾಮೈನ್' ಎಂಬ ಹೆಸರಿನ ಮಾದಕ ದ್ರವ್ಯ ಇದಾಗಿದ್ದು, ಇದನ್ನು ರವಿಚಂದ್ರನ್ ಸಿಂಗ್ ಎಂಬಾತನಿಗೆ ಸೇರಿದ ಸಂಗ್ರೂರ್ನಲ್ಲಿನ ಮನೆಯೊಂದರಿಂದ ವಶಪಡಿಸಿಕೊಳ್ಳಲಾಗಿದೆ. ರವಿಚಂದ್ರನ್ ಸಿಂಗ್, ರಾಮ್ಸಿಂಗ್ ಅವರ ಭಾಮೈದುನ ಎಂದು ಹೇಳಲಾಗಿದೆ. ಮೆಥಾಮ್ಫೆಟಾಮೈನ್ ಜೊತೆಯಲ್ಲೇ 'ಸ್ಯೂಡೋಫೆಡ್ರಿನ್' ಎಂಬ ಹೆಸರಿನ ಮತ್ತೊಂದು ಮಾದಕ ದ್ರವ್ಯವನ್ನೂ ವಶಪಡಿಸಿಕೊಳ್ಳಲಾಗಿದ್ದು, ಇದು ಆಟಗಾರರಿಗೆ ಸ್ಪರ್ಧೆಗಳ ಸಂದರ್ಭದಲ್ಲಿ ಕ್ಷಮತೆ ಹೆಚ್ಚಿಸುವ ಔಷಧಿಗಳಾಗಿವೆ. ಇದು ನಿಷೇಧಿತ ಡ್ರಗ್ ಎಂದು ಮೂಲಗಳು ಹೇಳಿವೆ. ಅಲ್ಲದೇ, ರವಿಚಂದ್ರನ್ ಸಿಂಗ್ ಅವರೂ ಓರ್ವ ಕ್ರೀಡಾಪಟುವಾಗಿದ್ದು, ಈ ಹಿಂದೆ ರಾಜ್ಯಮಟ್ಟದ ಬಾಕ್ಸರ್ ಆಗಿದ್ದರೆಂದು ಹೇಳಿದ್ದಾರೆ.
ದಾಳಿಯ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ರವಿಚಂದ್ರನ್ ಮನೆ ಮೇಲೆ ದಾಳಿ ನಡೆಸಿದಾಗ ಅವರು ಮನೆಯಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಹೆರಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಡ್ರಗ್ಸ್ ಕಳ್ಳಸಾಗಣೆದಾರ ಅನೂಪ್ ಸಿಂಗ್ ಕಹ್ಲಾನ್ ಅವರು ನಂಟು ಹೊಂದಿರುವ ಎಲ್ಲಾ ಮೂಲಗಳನ್ನೂ ಜಾಲಾಡುತ್ತಿರುವುದಾಗಿ ತಿಳಿಸಿದರು.
ರಾಮ್ ಸಿಂಗ್ ಬಂಧನ
ನವದೆಹಲಿ: ಹೆರಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಬಾಕ್ಸರ್ ರಾಮ್ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಬಯಲಾದ ಹೊಸತರಲ್ಲಿ ವಿಚಾರಣೆಗೊಳಗಾಗಿದ್ದ ರಾಮ್ಸಿಂಗ್ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ.