ಮುಂಬೈಗೆ ಇಂದು ರಾಯಲ್ ಸವಾಲು
ವರ್ಷದ ನಂತರ ಉದ್ಯಾನ ನಗರಿಗೆ ಕ್ರಿಕೆಟ್ ಹಬ್ಬ ಮರಳಿ ಬಂದಿದೆ...
ಬೆಂಗಳೂರು: ವರ್ಷದ ನಂತರ ಉದ್ಯಾನ ನಗರಿಗೆ ಕ್ರಿಕೆಟ್ ಹಬ್ಬ ಮರಳಿ ಬಂದಿದೆ. ರಾಜ್ಯದ ಕ್ರಿಕೆಟ್ ಕಾಶಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತೆಲ್ಲಾ ಕ್ರಿಕೆಟ್ ಅಭಿಮಾನಿಗಳ ಕಲರವ ಕೇಳಿಬರುತ್ತಿದೆ. ಎಲ್ಲೆಲ್ಲೂ ಸಡಗರ, ತಮ್ಮ ನೆಚ್ಚಿನ ಕ್ರಿಕೆಟ್ ತಾರೆಗಳನ್ನು ನೋಡುವ ಅವಕಾಶಕ್ಕಾಗಿ ಹಾತೊರೆಯುತ್ತಿರುವ ಯುವಜನ...
ಗುರುವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು (ಆರ್ಸಿಬಿ) ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯದ ಹಿನ್ನೆಲೆಯಲ್ಲಿ, ಬುಧವಾರ ಕ್ರೀಡಾಂಗಣದ ಮುಂದೆ ಕಂಡು ಬಂದ ದೃಶ್ಯ. ಇತ್ತಂಡಗಳಲ್ಲಿ ಸ್ಟಾರ್ ಆಟಗಾರರೇ ತುಂಬಿ ತುಳುಕುತ್ತಿರುವುದು ಎಲ್ಲರ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದ ಬಾರಿಯ ಐಪಿಎಲ್ನಲ್ಲಿ (ಐಪಿಎಲ್ 5ನೇ ಆವೃತ್ತಿ) ಲೀಗ್ ಹಂತಕ್ಕಷ್ಟೇ ತೃಪ್ತಿಪಟ್ಟಿದ್ದ ಆರ್ಸಿಬಿ ತಂಡಕ್ಕೆ ಈ ವರ್ಷವಾದರೂ ಉತ್ತಮ ಫಲಿತಾಂಶ ದಾಖಲಿಸುವ ಹಂಬಲವಿದೆ. ಮೊದಲ ಆವೃತ್ತಿಯ ಐಪಿಎಲ್ನಲ್ಲೂ (2008) ಗ್ರೂಪ್ ಹಂತದಿಂದಲೇ ನಿರ್ಗಮಿಸಿದ್ದ ಆರ್ಸಿಬಿ, 2009ರಲ್ಲಿ ಫೈನಲ್ಗೆ ಕಾಲಿಟ್ಟಿತ್ತು. ಆದರೆ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. 2010ರ ಐಪಿಎಲ್ನಲ್ಲೂ ಆರ್ಸಿಬಿಗೆ ಅದೃಷ್ಟ ಕೈ ಹಿಡಿದಿತ್ತು. ಆ ವರ್ಷ ಅದು ಸೆಮಿಫೈನಲ್ವರೆಗೂ ತನ್ನ ಪ್ರಯಾಣ ಮುಂದುವರಿಸಿತ್ತು. ಆದರೆ, ಆ ಬಾರಿ ಫೈನಲ್ ಪ್ರವೇಶ ಸಾಧ್ಯವಾಗಲಿಲ್ಲ.
ಆದರೆ, 2011ರ ಐಪಿಎಲ್ನಲ್ಲಿ ಮತ್ತೆ ಫೈನಲ್ ಪ್ರವೇಶಿಸುವ ಅವಕಾಶ ತಂಡಕ್ಕೆ ಸಿಕ್ಕಿತ್ತಾದರೂ, ಆ ಬಾರಿಯೂ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು ಆರ್ಸಿಬಿ.
ಇನ್ನು, ಕಳೆದ ವರ್ಷ... ಅಂದರೆ, 2012ರ ಕಥೆ. ಮತ್ತೆ ಮುಗ್ಗರಿಸಿದ ಆರ್ಸಿಬಿ ಗ್ರೂಪ್ ಹಂತಕ್ಕಷ್ಟೇ ತೃಪ್ತಿಪಡಬೇಕಾಯ್ತು. ಆದರೆ, ಈ ಬಾರಿ ಮತ್ತದೇ ಉತ್ಸಾಹದಿಂದ ಕಣಕ್ಕಿಳಿದಿರುವ ಆರ್ಸಿಬಿ ಬುಧವಾರ ತನ್ನ ತವರು ನೆಲದಲ್ಲಿ ಈ ಬಾರಿಯ ಐಪಿಎಲ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಇದಕ್ಕಿಂತ ಹೆಚ್ಚಾಗಿ, ತಂಡದ ಸಾರಥ್ಯವನ್ನು ಈಗ ಟೀಂ ಇಂಡಿಯಾದ ವಿರಾಟ್ ಕೊಹ್ಲಿಗೆ ನೀಡಲಾಗಿದೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಚೇತೇಶ್ವರ ಪೂಜಾರ ಅವರೂ ತಂಡದಲ್ಲಿದ್ದಾರೆ. ಇವಷ್ಟೇ ಅಲ್ಲ, ಅಬ್ಬರ ಬ್ಯಾಟ್ಸ್ಮನ್ ಕ್ರಿಸ್ಗೇಯ್ಲ್ ಅವರ ಬ್ಯಾಟ್ ಈ ಬಾರಿ ಯಾವ ರೀತಿ ಬೀಸಲಿದೆ ಎಂಬುದೂ ಈ ಬಾರಿಯ ಕುತೂಹಲಗಳಲ್ಲೊಂದು. ಇನ್ನು, ಯಾವುದೇ ಪರಿಸ್ಥಿತಿಯಲ್ಲಿ ಪಂದ್ಯ ಗತಿಯನ್ನು ತಮ್ಮ ಆಣತಿಯಂತೆ ಬದಲಾಯಿಸಬಲ್ಲ ತಿಲಕರತ್ನೆ ದಿಲ್ಶಾನ್, ಎಬಿ ಡಿವಿಲಿಯರ್ಸ್ ಅವರಂಥ ಘಟಾನುಘಟಿಗಳು ಆರ್ಸಿಬಿಯಲ್ಲಿದ್ದಾರೆ. ಹಾಗಾಗಿ, ಆರ್ಸಿಬಿ ಅಭಿಮಾನಿಗಳ ನಿದ್ದೆ ಕೆಡಲು ಈ ಮೂರು ಸಾಕಲ್ಲವೇ ?
ಇಷ್ಟೆಲ್ಲಾ ಇದ್ದರೂ ಆ ತಂಡ ಇಲ್ಲಿಯವರೆಗೆ ನಡೆದಿರುವ ಐಪಿಎಲ್ಗಳಲ್ಲಿ ಕಪ್ ಗೆದ್ದಿಲ್ಲ. ಅದಕ್ಕೆ ಕಾರಣ ಕ್ರಿಸ್ ಗೇಯ್ಲ್ ಮೇಲೇ ತಂಡ ಪ್ರತೀಬಾರಿ ಅವಲಂಬಿಸುವುದೂ ಒಂದು.
ವೆಸ್ಟ್ ಇಂಡೀಸ್ನ ಈ ಮಾಯಗಾರ ಈವರೆಗಿನ ಐಪಿಎಲ್ಗಳಲ್ಲಿ 1341 ರನ್ ಕಲೆ ಹಾಕಿದ್ದಾರೆ ಸರಿ. ಆದರೆ, ಕೆಲ ಪ್ರಮುಖ ಪಂದ್ಯಗಳಲ್ಲಿ ರನ್ ಸಿಡಿಸದೇ ವೈಫಲ್ಯಕ್ಕೊಳಗಾಗಿದ್ದಾರೆ. ಆದ್ದರಿಂದ, ಈ ಬಾರಿಯೂ ಗೇಯ್ಲ್ ಮೇಲೇ ಅವಲಂಬಿತವಾದರೆ, ಆರ್ಸಿಬಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.
ಇನ್ನು, ತಂಡದ ಬೌಲಿಂಗ್ ವಿಭಾಗಕ್ಕೆ ಜಹೀರ್ ಖಾನ್ ಅವರ ವಾಪಸ್ಸಾತಿ ಹೊಸ ಶಕ್ತಿ ತಂದಿದೆ. ಪಾದದ ಗಾಯದಿಂದಾಗಿ ಕ್ರಿಕೆಟ್ನಿಂದ ಕೆಲ ಕಾಲ ದೂರ ಉಳಿದಿದ್ದ ಅವರು, ಈಗ ಐಪಿಎಲ್ಗೆ ಧುಮುಕಿದ್ದಾರೆ. ಅವರೊಂದಿಗೆ, ಅಭಿಮನ್ಯು ಮಿಥುನ್, ಆರ್. ವಿನಯ್ ಉತ್ತಮ ಫಲಿತಾಂಶ ನೀಡಲು ಕಾಯುತ್ತಿದ್ದಾರೆ. ಇನ್ನು, ವಿಂಡೀಸ್ನ ರವಿ ರಾಂಪಾಲ್, ಮುತ್ತಯ್ಯ ಮುರಳೀಧರನ್, ಡೇನಿಯಲ್ ವೆಟ್ಟೋರಿ ಹಾಗೂ ಹಾಗೂ ಮುರಳಿ ಕಾರ್ತಿಕ್ ಇದ್ದಾರೆ.
ಅತ್ತ, ಮುಂಬೈ ಇಂಡಿಯನ್ಸ್ ಕೂಡಾ ಹೊಸ ನಾಯಕತ್ವದಡಿ ಈ ಬಾರಿಯ ಐಪಿಎಲ್ಗೆ ಅಡಿಯಿಡುತ್ತಿದೆ. ಆಸೀಸ್ನ ರಿಕಿ ಪಾಂಟಿಂಗ್ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲ, ತಂಡದಲ್ಲಿ ಬಹುತೇಕ ಸ್ಟಾರ್ ಆಟಗಾರರೇ ತುಂಬಿರುವುದು ಈ ತಂಡದ ಪ್ಲಸ್ ಪಾಯಿಂಟ್.
ಹಿರಿಯ ಆಟಗಾರ ತೆಂಡೂಲ್ಕರ್, ರಿಕಿ ಪಾಂಟಿಂಗ್, ಹರ್ಭಜನ್ ಸಿಂಗ್, ಡ್ವೈನ್ ಸ್ಮಿತ್ ಹಾಗೂ ಜೇಮ್ಸ್ ಫ್ರಾಂಕ್ಲಿನ್, ದಿನೇಶ್ ಕಾರ್ತಿಕ್, ಲಸಿತ್ ಮಾಲಿಂಗ, ಪ್ರಗ್ಯಾನ್ ಓಜಾ, ಮುನಾಫ್ ಪಟೇಲ್, ಕೀರನ್ ಪೊಲಾರ್ಡ್, ಆಂಬಟಿ ರಾಯುಡು, ರೋಹಿತ್ ಶರ್ಮಾ... ಹೀಗೆ, ಎಲ್ಲವೂ ಚಿರಪರಿಚಿತ ಹೆಸರುಗಳೇ ಮುಂಬೈ ತಂಡದಲ್ಲಿವೆ.
ಆದರೆ, ಆ ತಂಡಕ್ಕಿರುವ ಏಕೈಕ ಸಮಸ್ಯೆಯೆಂದರೆ, ವಿದೇಶಿ ಆಟಗಾರರ ಗುಂಪಿನಿಂದ ಯಾರನ್ನು ಕಣಕ್ಕಿಳಿಸಬೇಕಎ ಎಂಬುದು ಅಂತಿಮವಾಗಿಲ್ಲ.
ಕೇವಲ 4 ವಿದೇಶಿ ಆಟಗಾರನ್ನು ಮಾತ್ರ ಕಣಕ್ಕಿಳಿಸುವ ಅನಿವಾರ್ಯತೆ ಇರುವುದರಿಂದ ಡ್ವೆನ್ ಸ್ಮಿತ್, ಕೀರನ್ ಪೊಲಾರ್ಡ್, ಜಾಕೋಬ್ ಓರಮ್, ಜೇಮ್ಸ್ ಫ್ಲಾಂಕ್ಲಿನ್ ಹಾಗೂ - ಇವರಲ್ಲಿ ಯಾರು ಮೈದಾನಕ್ಕಿಳಿಯಲಿದ್ದಾರೆಂಬುದು ಕುತೂಹಲಕಾರಿ ವಿಷಯ.
ಸಂಭಾವ್ಯ ಆಟಗಾರರು
ಮುಂಬೈ -ಮುಂಬೈ ಇಂಡಿಯನ್ಸ್: ರಿಕಿ ಪಾಂಟಿಂಗ್ (ನಾಯಕ), ತೆಂಡೂಲ್ಕರ್, ಅಬು ನಚಿಮ್, ಅಮಿತೊಜ್ ಸಿಂಗ್, ಐಡೆನ್ ಬ್ಲಿಜರ್ಡ್, ಯುಜ್ವೆಂದ್ರ ಚಾಹಲ್, ನೇಥನ್ ಕೌಲ್ಟರ್ ನೆಲ್, ರಿಶಿ ಧವನ್, ಜೇಮ್ಸ್ ಫ್ರಾಂಕ್ಲಿನ್, ಹರ್ಭಜನ್, ಫಿಲಿಪ್ ಹ್ಯೂಸ್, ಮಿಚೆಲ್ ಜಾನ್ಸನ್, ದಿನೇಶ್ ಕಾರ್ತಿಕ್, ಧವಳ್ ಕುಲಕರ್ಣಿ, ಲಸಿತ್ ಮಾಲಿಂಗಾ, ಸುಶಾಂತ್ ಮರಾಠೆ, ಮ್ಯಾಕ್ಸ್ವೆಲ್, ಪ್ರಗ್ಯಾನ್ ಓಜಾ, ಜೇಕಬ್ ಓರಂ, ಅಕ್ಷರ್ ಪಟೇಲ್, ಮುನಾಫ್ ಪಟೇಲ್, ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ಜಲಜ್ ಸಕ್ಸೇನಾ, ರೋಹಿತ್ ಶರ್ಮಾ, ಡ್ವೇನ್ ಸ್ಮಿತ್, ಪವನ್ ಸುಯಾಲ್, ಆದಿತ್ಯ ತಾರೆ, ಸೂರ್ಯ ಕುಮಾರ್ ಯಾದವ್.
ಆರ್ಸಿಬಿ-ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ದಿಲ್ಷಾನ್, ಕ್ರಿಸ್ ಗೇಯ್ಲ್, ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೊಹೈಲ್, ಸೈಯದ್ ಮಹಮದ್, ಸೌರಭ್ ತಿವಾರಿ, ಉನದ್ಕತ್, ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.
-ಚೇತನ್ ಓ.ಆರ್.