ಸುದ್ದಿ ಸಂಕ್ಷೇಪ
ಮಾಲಿಂಗ ಆಡೋಲ್ಲ
ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿರುವ ಮಾಲಿಂಗ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ- ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ಆಧಿಕಾರಿಗಳು ತಿಳಿಸಿದ್ದಾರೆ. ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಲಸಿತ್ ಮಾಲಿಂಗ, ಮುಂಬೈ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
'ಗಿಲ್ಲಿ- ಲೀಮನ್‌ಗೆ ಮತ್ತೆ ಯಶಸ್ಸು'
ಬೆಂಗಳೂರು: ಆಸೀಸ್‌ನ ಮಾಜಿ ಆಟಗಾರರಾದ ಆ್ಯಡಂ ಗಿಲ್‌ಕ್ರಿಸ್ಟ್ ಹಾಗೂ ಡರೆನ್ ಲೀಮನ್ ಜೋಡಿ 2009ರ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಉತ್ತಮವಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿದ್ದರು. ಹಾಗಾಗಿ ಮತ್ತೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಒಂದಾಗಿರುವ ಈ ಜೋಡಿ ಆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲಿದೆ ಎಂದು ಪಂಜಾಬ್ ತಂಡದ ಆಲ್ರೌಂಡರ್ ಡೇವಿಡ್ ಹಸ್ಸಿ ತಿಳಿಸಿದ್ದಾರೆ. 2009ರಲ್ಲಿ ಗಿಲ್‌ಕ್ರಿಸ್ಟ್ ಡೆಕ್ಕನ್ ತಂಡದ ನಾಯಕರಾಗಿದ್ದು, ಲೀಮನ್ ತಂಡದ ಕೋಚ್ ಆಗಿದ್ದರು.
ಬ್ಯಾಡ್ಮಿಂಟನ್ ಶಿಬಿರ
ಮೂಡುಬಿದರೆ: ಇಲ್ಲಿನ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯು ಏ.12 ರಿಂದ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ. 18 ವರ್ಷದೊಳಗಿನ ಆಸಕ್ತಿ ಇರುವ ಬಾಲಕ ಹಾಗೂ ಬಾಲಕಿಯರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು. ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.