ಸುನಿಲ್ ಸುಳಿಗೆ ಸಿಲುಕಿದ ಡೆವಿಲ್ಸ್
ಕೊಲ್ಕತ್ತಾ: ಮೊದಲ ಎಸೆತದಲ್ಲಿ ವಿಕೆಟ್, ಎರಡನೇ ಎಸೆತದಲ್ಲಿ ಬೌಂಡರಿ ಇದು ಐಪಿಎಲ್ 6ನೇ ಆವೃತ್ತಿಗೆ ಸಿಕ್ಕ ಭರ್ಜರಿ ಆರಂಭ. ಬುಧವಾರ ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ಡೆವಿಲ್ಸ್ ತಂಡದ ನಡುವೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಬ್ರೆಟ್ ಲೀ ಮೊದಲ ಎಸೆತದಲ್ಲೇ ಉನ್ಮುಕ್ತ್ ಚಾಂದ್ ಅವರನ್ನು ಬೌಲ್ಡ್ ಮಾಡಿದರೆ, ನಂತರ ಬಂದ ಜಯವರ್ಧನೆ ಬೌಂಡರಿ ಬಾರಿಸಿದರು.
ಟಾಸ್ ಗೆದ್ದ ಕೆಕೆಆರ್ ತಂಡ, ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಡೆಲ್ಲಿ ಡೇರ್ಡೆವಿಲ್ಸ್ ತಂಡಕ್ಕೆ ಬಿಟ್ಟುಕೊಟ್ಟಿತು. ಈ ಅವಕಾಶವನ್ನು ಪಡೆದ ಡೆಲ್ಲಿ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ನಿಗದಿತ 20 ಓವರ್ಗಳಲ್ಲಿ 128 ರನ್ಗೆ ಆಲೌಟ್ ಆಯಿತು. ಕೆಕೆಆರ್ ಇನಿಂಗ್ಸ್ ಇನ್ನೂ ಆರಂಭವಾಗಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಉನ್ಮುಕ್ತ್ ಚಾಂದ್ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಮೊದಲ ಎಸೆತದಲ್ಲೇ ಬ್ರೆಟ್ ಲೀ ಎಸೆತದಲ್ಲಿ ಬೌಲ್ಡ್ ಆದ ಚಾಂದ್ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ನಾಯಕ ಜಯವರ್ಧನೆ ಬೌಂಡರಿ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದರಲ್ಲದೇ ಕೆಕೆಆರ್ಗೆ ಪ್ರತಿರೋಧ ನೀಡಲು ಪ್ರಯತ್ನಿಸಿದರು. ವಾರ್ನರ್ ಹಾಗೂ ಜಯವರ್ಧನೆ ಜೋಡಿ 5 ಓವರ್ಗಳಲ್ಲಿ 41 ರನ್ಗಳಿಸಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಆದರೆ ಈ ವೇಳೆ ದಾಳಿಗಿಳಿದ ನಾರಾಯಣ್ ವಾರ್ನರ್ ಅವರಿಗೆ ಪೆವಿಲಿಯನ್ ದಾರಿ ತೋರಿದರು.
ಈ ವೇಳೆ ನಾಯಕನ ಜತೆಗೂಡಿದ ಜುನೇಜಾ ತಂಡಕ್ಕೆ ಕೇವಲ 15 ರನ್ಗಳ ಜತೆಯಾಟ ನೀಡಿದರು. ಬಾಲಾಜಿ ಎಸೆತದಲ್ಲಿ ಅನಾವಶ್ಯಕ ಹೊಡೆತಕ್ಕೆ ಮುಂದಾದ ಜುನೇಜಾ ರಜತ್ ಭಾಟಿಯಾಗೆ ಕ್ಯಾಚ್ ನೀಡಿ ಹೊರ ನಡೆದರು.
ನಂತರ ಬಂದ ನಮನ್ ಓಜಾ ಕೂಡ ನಾಯಕನಿಗೆ ತಕ್ಕ ಸಾಥ್ ನೀಡಲಿಲ್ಲ. 9 ರನ್ಗಳಿಸಿದ್ದ ಓಜಾ ತಂಡದ ಮೊತ್ತ 79 ರನ್ ಆಗಿದ್ದಾಗ ಭಾಟಿಯಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬ್ರೆಟ್ ಲೀಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ಈ ವೇಳೆ ಕ್ರೀಸ್ಗೆ ಬಂದ ಜೊಹಾನ್ ಬೋತಾ ಗಳಿಕೆ 7 ರನ್ಗಳಿಗೆ ಸೀಮಿತವಾದರೆ, ಇರ್ಫಾನ್ ಪಠಾಣ್ 4 ರನ್ಗಳಿಗೆ ಇನಿಂಗ್ಸ್ ಮುಗಿಸಿದರು. ನಂತರ ಬಂದ ರಸ್ಸೆಲ್ 8 ಎಸೆತದಲ್ಲಿ ಕೇವಲ 4 ರನ್ಗಳಸಿ ನಾರಾಯಣ್ಗೆ ಸುಲಭವಾಗಿ ವಿಕೆಟ್ ಒಪ್ಪಿಸಿದರು. ಈ ವೇಳೆ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಯವರ್ಧನೆ 52 ಎಸೆತಗಳಲ್ಲಿ 8 ಬೌಂಡರಿ ಹಾಗೂ 1ಸಿಕ್ಸರ್ ಬಾರಿಸಿ 66 ರನ್ಗಳಿಸಿ ಬ್ರೆಟ್ ಲೀ ಎಸೆತದಲ್ಲಿ ಔಟಾದರು. ನಂತರ ನದಿಂ 4, ನೆಹ್ರಾ 0 ಗೆ ಔಟಾದರು.
ಅಂತಿಮವಾಗಿ 20 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿತು.
ಸ್ಕೋರ್ ಬೋರ್ಡ್
ಡೆಲ್ಲಿ ಡೇರ್ ಡೆವಿಲ್ಸ್ 128 (20 ಓವರ್)
ಉನ್ಮುಕ್ತ್ ಚಂದ್ ಬಿ ಬ್ರೆಟ್ ಲೀ 0 (1), ವಾರ್ನರ್ ಸಿ ಕಾಲೀಸ್ ಬಿ ನಾರಾಯಣ್ 21 (19), ಜಯವರ್ಧನೆ ಸಿ ನಾರಾಯಣ್ ಬಿ ಬ್ರೆಟ್ ಲೀ 66 (52), ಜುನೇಜಾ ಸಿ ಶುಕ್ಲಾ ಬಿ ಬಾಲಾಜಿ 8 (9), ಓಜಾ ಸಿ ಬ್ರೆಟ್ ಲೀ ಬಿ ಭಾಟಿಯಾ 9 (9), ಬೋತಾ ಎಲ್ಬಿಡ್ಬ್ಲ್ಯೂ ಬಿ ಭಾಟಿಯಾ 7 (6), ಪಠಾಣ್ ಸಿ ತಿವಾರಿ ಬಿ ನಾರಾಯಣ್ 4 (7), ರಸ್ಸೆಲ್ ಸಿ ಮತ್ತು ಬಿ ನಾರಾಯಣ್ 4 (7), ನದಿಂ ರನೌಟ್ ನಾರಾಯಣ್ 4 (8), ನೆಹ್ರಾ ಸಿ ಶುಕ್ಲಾ ಬಿ ನಾರಾಯಣ್ 0 (1), ಯಾದವ್ ಅಜೇಯ 0. ಇತರೆ: 5
ವಿಕೆಟ್ ಪತನ: 1-0, 2-44, 3-59, 4-79, 5-88, 6-97, 7-113, 8-125, 9-128, 10-128.
ಬೌಲಿಂಗ್: ಬ್ರೆಟ್ ಲೀ 4-0-40-2, ಕಾಲೀಸ್ 3-0-23-0, ಬಾಲಾಜಿ 4-0-20-1, ನಾರಾಯಣ್ 4-0-13-4, ಭಾಟಿಯಾ 4-0-23-2, ಶುಕ್ಲಾ 1-0-8-0