ಇಂದಿನಿಂದ ಡೇವಿಸ್ ಕಪ್ ಹಣಾಹಣಿ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಭಾರತ-ಇಂಡೋನೇಷ್ಯಾ ನಡುವಿನ ಡೇವಿಸ್ ಕಪ್ ಪಂದ್ಯಾವಳಿ ಶುಕ್ರವಾರ ಆರಂಭಗೊಳ್ಳಲಿದೆ. ಸೋಮದೇವ್ ದೇವ್‌ವರ್ಮನ್ ಅವರು ಭಾರತದ ಅಭಿಯಾನವನ್ನು ಆರಂಭಿಸಲಿದ್ದಾರೆ.
ಮೊದಲ ದಿನದ ಮೊದಲ ಪಂದ್ಯದಲ್ಲಿ, ಸೋಮ್‌ದೇವ್ ಹಾಗೂ ಇಂಡೋನೇಷ್ಯಾದ ವಿಸ್ನು ಆದಿ ನುಗ್ರೊಹೊ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಯುಕಿ ಭಾಂಬ್ರಿ ಅವರು ಕ್ರಿಸ್ಟೊಫರ್ ರುಂಗ್‌ಕತ್ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇನ್ನು, ಎರಡನೇ ದಿನ ಪುರುಷರ ಡಬಲ್ಸ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಲಿಯಾಂಡರ್ ಪೇಸ್- ಸನಮ್ ಸಿಂಗ್ ಜೋಡಿ, ಇಂಡೋನೇಷ್ಯಾದ ಡೇವಿಡ್ ಅಗುಂಗ್ ಸುಸಾಂತೊ- ಎಲ್ಬರ್ಟ್ ಸೀ ಅವರನ್ನು ಎದುರಿಸಲಿದೆ.
ಪಂದ್ಯಾವಳಿಯ ಮೂರನೇ ದಿನ, ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ರುಂಗ್‌ಕತ್ ಅವರು ಸೋಮ್‌ದೇವ್ ವಿರುದ್ಧ ಸೆಣೆಸಿದರೆ, ವಿಸ್ನು ಅವರು ಯುಕಿ ಭಾಂಬ್ರಿ ಅವರನ್ನು ಎದುರಿಸಲಿದ್ದಾರೆ.